ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವಾರಾಜ್ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಪಕ್ಷಾತೀತರಾಗಿ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ರಂಗದವರು ಮಾತ್ರವಲ್ಲದೆ ವಿವಿಧ ರಂಗದ ಗಣ್ಯರು ಸುಷ್ಮಾ ಸ್ವರಾಜ್ ಅಗಲಿಕೆಗೆ ಕಂಬನಿ ಮಿಡಿದ್ದಾರೆ. ಕನ್ನಡ ಚಿತ್ರಸಾಹಿತಿ ಕವಿರಾಜ್ ಸಹ ಸುಷ್ಮಾ ಸ್ವರಾಜ್ ಅವರನ್ನು ನೆನಪಿಸಿಕೊಂಡು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮದೇ ಆದ ಸಾಲುಗಳ ಮೂಲಕ ಸುಷ್ಮಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಬರಹದ ಸಾಲುಗಳು ಹೀಗಿವೆ ನೋಡಿ..
“ಸುಷ್ಮಾ ಸ್ವರಾಜ್ ಹೆಸರೇ ಒಂಥರಾ ಚಂದ. ಅವರ ಉಡುಗೆ ತೊಡುಗೆ ನಿಲುವು ಮಾತು ಅಷ್ಟೇ ಚಂದವಿತ್ತು. ಸದಾ ಹಸನ್ಮುಖಿ ಅಮ್ಮನಂತಹ ಮುಖಚರ್ಯೆ. ಪಕ್ಷಾತೀತವಾಗಿ ಎಲ್ಲರಿಂದಲೂ ಗೌರವಿಸಲ್ಪಡುವ ವಿರಳ ರಾಜಕಾರಣಿ. ಮೇಲ್ನೋಟಕ್ಕೆ ಸೌಮ್ಯವಾಗಿ ಕಂಡರು ಇವರಿಗೊಂದು ಖದರ್ ಇತ್ತು. ಅಪ್ಪಟ ವಾಜಪೇಯಿ ಬ್ರಾಂಡ್ ರಾಜಕಾರಣಿ.
ಇನ್ನು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗ ಒಂದೆರಡು ಹೇಳಿಕೆಗಳು ಮಾತ್ರ ಕೊಂಚ ಬೇಸರ ತರಿಸಿದ್ದವು. ಅದು ಬಿಟ್ಟರೆ ‘ಕೊಂಕು’ ನುಡಿಯಲು ಇನ್ನೇನು ಇಲ್ಲ. ಇತ್ತೀಚೆಗೆ ಕೇವಲ ಟ್ವೀಟ್ ಗಳಿಗೆ ವಿದೇಶಿಗಳಲ್ಲಿದ್ದ ಭಾರತೀಯರ ನೆರವಿಗೆ ಧಾವಿಸುವ ರೀತಿ ಮೆಚ್ಚುಗೆ ಆಗಿತ್ತು. ಬಿಜೆಪಿಯಲ್ಲಿ ಇತ್ತೀಚೆಗೆ ಕೆಲವು ಮಹತ್ವದ ಬದಲಾವಣೆ ಆಗಿರದಿದ್ದರೆ ಇಂದಿರಾಗಾಂಧಿ ನಂತರ ಇನ್ನೊಬ್ಬ ಮಹಿಳಾ ಪ್ರಧಾನಿ ಆಗುವ ಸಂಭವ ಮತ್ತು ಸಾಮಥ್ರ್ಯ ಇವರಿಗಿತ್ತು. ಅಂತಹ ಸುಷ್ಮಾ ಸ್ವರಾಜ್ ಅವರು ಇನ್ನಿಲ್ಲ ಎಂಬ ಸಂಗತಿ ವಿಷಾದನೀಯ” ಎಂದು ಸಂತಾಪ ಸೂಚಿಸಿದ್ದಾರೆ.