ಜೀತು ಜೊಸೆಫ್ ಮತ್ತು ದೃಶ್ಯ ಸಿನೆಮಾ

0
233

ಸಿನೆಮಾ ಬರೀ ಮಾಯಾ ಲೋಕವಲ್ಲ ಅದರಾಚೆ ಏನೋ ಇದೆ. ಬಣ್ಣ,ದೃಶ್ಯಗಳು, ನಾಟಕೀಯ ಅಭಿನಯ, ಪಾತ್ರಗಳ ತಲ್ಲೀನತೆ,ಸಂಗೀತ, ನೃತ್ಯ, ಹಾಡು,ಫೈಟು,ಭಯ ಹೀಗೆ ಮನಸ್ಸಿನ ಒಳಗಾಗುವ ತಲ್ಲಣ ಮತ್ತು ನವರಸಗಳಿಗೆ ಸ್ಪೂರ್ತಿ ತುಂಬುವ ತಾಕತ್ತು ಸಿನೆಮಾ ಮಾಧ್ಯಮಕ್ಕಿದೆ. ಕಾದಂಬರಿ ಓದಿಗೂ ಈ ತಾಕತ್ತಿದೆಯಾದರೂ ಅದಕ್ಕೆ ಓದು ಮತ್ತು ಕಲ್ಪನೆಯ ಹರವು ಬೇಕಾಗುತ್ತದೆ. ಆದರೆ ಸಿನೆಮಾ ಹಾಗಲ್ಲ ಅನಕ್ಷರಸ್ಥರ ಮಾಧ್ಯಮವೂ ಹೌದು, ಎಲ್ಲ ವಯೋಮಾನದವರ ಹಿಡಿದಿಡುವ ಶಕ್ತಿ ದೃಶ್ಯ ಮಾಧ್ಯಮಕ್ಕೆ ಇದೆ.

ಸಿನೆಮಾ ನಟರಿಗಿರುವ ಸ್ಟಾರ್ ವ್ಯಾಲ್ಯೂ ಬೇರೆ ಯಾರಿಗಿರಲು ಸಾಧ್ಯವಿಲ್ಲ. ಹಾಲಿವುಡ್ ಸಿನೆಮಾಗಳು ಸಾಹಸ ಮತ್ತು ವೈಜ್ಞಾನಿಕ ಮಾದರಿಯಲ್ಲಿದ್ದರೆ ಭಾರತೀಯ ಸಿನೆಮಾಗಳು ಭಾವ ಪ್ರಧಾನವಾಗಿರುತ್ತವೆ.‌ ಓದು ಮತ್ತು ಸಿನೆಮಾ ನೋಡುವುದು ನನ್ನ ಬಾಲ್ಯದ ಬಹುದೊಡ್ಡ ದೌರ್ಬಲ್ಯ. ನನ್ನ ಶಿಕ್ಷಣದ ಸಾಧನೆ ಕುಂಠಿತವಾಗಲಿಕ್ಕೆ ಸಿನೆಮಾ ನೋಡುವ ಚಟ ಕೂಡ ಕಾರಣವಾಯಿತು.

ಸಿನೆಮಾ ನೋಡಿ ಬಂದ ಮೇಲೆ ಅಷ್ಟೇ ರಸವತ್ತಾಗಿ ಕತೆ ಹೇಳುವುದನ್ನು ಬಾಲ್ಯದ ಗೆಳೆಯರಾದ ಶರಣು,ಅಪ್ಪಣ್ಣ ಈಗಲೂ ಸ್ಮರಿಸುತ್ತಾರೆ. ನನ್ನ ಕಥಾನಕ ಮಾತಿನ ಶೈಲಿಗೆ ಕಾರಣವಾಗಿರುವ ಸಿನೆಮಾ ನಟರು ಮತ್ತು ತಂಡಕ್ಕೆ ಸದಾ ಋಣಿ. ನಂತರ ನನಗರಿವಿಲ್ಲದಂತೆ ಕ್ರಿಯಾಶೀಲತೆ ಮೊಳಕೆಯೊಡೆಯಿತು.

ನಾನು ನೋಡಿರಬಹುದಾದ ಸಾವಿರಾರು ಸಿನೆಮಾಗಳು ಈಗಲೂ ನನಗೆ ಸ್ಪೂರ್ತಿ ಮತ್ತು ಚೈತನ್ಯ. ಮಾತುಕತೆ, ಬರಹ,ಓದು ಮತ್ತು ಆತ್ಮವಿಶ್ವಾಸ ಹೆಚ್ಚಾಗಲು ಸಿನೆಮಾ ವೀಕ್ಷಣೆ ಕಾರಣವೆನಿಸಿದೆ. ಒಂದು ಒಳ್ಳೆಯ ಪುಸ್ತಕ ಓದಿದಾಗ,ಸಿನೆಮಾ ನೋಡಿದಾಗ,ಸುಮಧುರ ಹಾಡು ಕೇಳಿದಾಗ ಮನಸು ಹುಚ್ಚೆದ್ದು ಕುಣಿಯುತ್ತದೆ. ಸಿನೆಮಾ ನೋಡುವಾಗ ಭಾವುಕನಾಗಿ ಅಳುವುದು ನನಗೆ ಮತ್ತು ನನ್ನ ಜೊತೆಗಿದ್ದವರಿಗೆ ಚೈಲ್ಡಿಶ್ ಎನಿಸಿದರು ನಂಗೆ ಬೇಸರವಿಲ್ಲ ಬಿಡಿ, ಹಾಗಿದ್ದಾಗ ಕಾಮಿಡಿ ಇದ್ದರೂ ನೀವು ನಗಬಾರದಪ್ಪ!

ಮನಸ್ಸಿಗೆ ಮುದ,ಬುದ್ಧಿಗೆ ತೀಕ್ಷ್ಣತೆ ನೀಡುವ ಸಿನೆಮಾ ನನ್ನ ರೆಗುಲರ್ ಹಾಬಿ. ಮೊನ್ನೆ ಮಲೆಯಾಳಂ ಮೂಲದ ಜೀತು ಜೋಸೆಫ್ ನಿರ್ದೇಶನದ ಕನ್ನಡ ಅವತರಣಿಕೆ ದೃಶ್ಯ ನೋಡಿದೆ. ಆ ಸಿನೆಮಾದಲ್ಲಿ ಸಿನೆಮಾ ನೋಡುವ ಚಟದ ಪ್ರಭಾವವನ್ನು ನಿರ್ದೇಶಕ ಪೋಲಿಸ್ ಅಧಿಕಾರಿ ಪಾತ್ರದ ಮೂಲಕ ಹೇಳಿಸಿದ್ದಾನೆ. ಕೊಲೆಯನ್ನು ಮುಚ್ಚಿ ಹಾಕಲು ಅವನು ನೋಡಿದ ಸಿನೆಮಾಗಳು ನೆರವಾಗುತ್ತವೆ.

ಮನುಷ್ಯ ತನ್ನ ಬುದ್ಧಿವಂತಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೊಲೆ ಕೂಡ ಮುಚ್ಚಿ ಹಾಕಬಲ್ಲ.
ಪ್ರತಿಯೊಬ್ಬ ಕ್ರಿಮಿನಲ್ ಏನಾದರು ಸುಳಿವು ಬಿಟ್ಟೇ ಬಿಟ್ಟಿರುತ್ತಾನೆ ಎಂಬ ಪೋಲಿಸ್ ಸಿದ್ಧಾಂತ ಸುಳ್ಳು ಮಾಡುವ ಸಾಮರ್ಥ್ಯ ಅದೇ ಸಿದ್ಧಾಂತ ನಂಬಿದ ಮನುಷ್ಯನಿಗಿದೆ ಎಂಬುದನ್ನು ಜೋಸೆಫ್ ನಿರೂಪಿಸಿದ ಶೈಲಿ ತುಂಬ ಇಷ್ಟವಾಯಿತು.

ತಮ್ಮ ಹೀರೊ ಇಮೇಜ್ ಹಂಗ ಹರಿದು ದೃಶ್ಯ ಸಿನೆಮಾದಲ್ಲಿ ನಟಿಸಿದ ಲವ್ಲಿ ಸ್ಟಾರ್ ರವಿಚಂದ್ರನ್ ಮತ್ತು ಕನ್ನಡೀಕರಿಸಿದ ವಾಸು ಅವರನ್ನು ಅಭಿನಂದಿಸುತ್ತೇನೆ. ಇಂತಹ ನೂರಾರು ಹೊಸ ಅಲೆಯ ಕತೆಗಳನ್ನು ಸೃಷ್ಟಿಸುವ ಮಲೆಯಾಳಂ ಸಿನೆಮಾ ತಂಡದ ಕ್ರಿಯಾಶೀಲತೆಯನ್ನು ಗೌರವಿಸಬೇಕಲ್ಲ.

ಸಿದ್ದು ಯಾಪಲಪರವಿ

LEAVE A REPLY

Please enter your comment!
Please enter your name here