‘ಕೈ’ ಹಿಡಿಯಲು ಮುಂದಾದ್ರಾ 6 ಜೆಡಿಎಸ್ ಶಾಸಕರು..?!

0
304

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ಇದೀಗ ಮತ್ತೆ ಪಕ್ಷಾಂತರ ಪರ್ವ ಆರಂಭವಾಗಲಿದೆ. ರಾಜ್ಯ ರಾಜಕೀಯದಲ್ಲಿ ಎದ್ದಿರುವ ಈ ಸುದ್ದಿ ಇದೀಗ ದಳಪತಿಗಳಿಗೆ ಭಾರೀ ಹೊಡೆತ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೌದು, ಜೆಡಿಎಸ್‍ನ ಆರು ಹಾಲಿ ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ಶಾಸಕರು ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನು ರಾಜೀನಾಮೆ ನೀಡುವ ಶಾಸಕರ ಪಟ್ಟಿ ಮಾಜಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ಸೇರಿದೆ.

ಸದ್ಯದ ಮಾಹಿತಿಯ ಪ್ರಕಾರ ಆರು ಮಂದಿ ಜೆಡಿಎಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನೇ ತೊರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಶ್ರೀನಿವಾಸ್, ನಾಗಮಂಗಲದ ಸುರೇಶ್ ಗೌಡ ಸೇರಿದಂತೆ ಅನೇಕರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿರುವ ಪ್ರಮುಖ ಶಾಸಕರ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ. ಅನೇಕ ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾಹಿತಿ ಸಿಕ್ಕಿರುವ ಕಾರಣ ಜೆಡಿಎಸ್ ವರಿಷ್ಠರಾದ ದೇವೇಗೌಡರು ಅತೃಪ್ತ ಶಾಸಕರೊಂದಿಗೆ ಖುದ್ದು ಮಾತುಕತೆಗೆ ಮುಂದಾಗಿದ್ದಾರೆ.

ಒಂದು ವೇಳೆ ಪಕ್ಷ ತೊರೆಯುವುದೇ ಅವರ ಅಂತಿಮ ನಿರ್ಧಾರ ಎಂದಾದರೆ, ಚುನಾವಣೆ ಎದುರಿಸುವ ಬಗ್ಗೆಯೂ ದೇವೇಗೌಡರು ಚರ್ಚೆ ನಡೆಸಿದ್ದಾರೆ. ಒಟ್ಟಾರೆ ಉಪಚುನಾವಣೆ ವೇಳೆಗೆ ಈ ಶಾಸಕರ ನಿರ್ಧಾರ ಏನು ಎಂಬುದು ಸ್ಪಷ್ಟವಾಗಲಿದೆ. ಇಲ್ಲವಾದ್ರೆ ಮುಂಬರುವ ವಿಧಾನಸಭಾ ಚುನಾವಣೆವರೆಗೂ ಜೆಡಿಎಸ್‍ನಲ್ಲೇ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಜೆಡಿಎಸ್ ಪಕ್ಷದಲ್ಲಿ ಉಂಟಾಗಿರುವ ಈ ಪಕ್ಷಾಂತರ ಪರ್ವ ಜೆಡಿಎಸ್‍ಗೆ ಭಾರೀ ಹೊಡೆತ ನೀಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ಹಳೇ ಮೈಸೂರು ಭಾಗದ ಶಾಸಕರೇ ಪಕ್ಷ ತೊರೆಯುತ್ತಿರುವುದು ಪಕ್ಷಕ್ಕೆ ಹಾನಿ ಮಾಡಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here