ಸಚಿವ ಸಂಪುಟ ರಚನೆ ವಿಳಂಬ ಮಾಡುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಭರ್ಜರಿ ಟಾಂಗ್ ನೀಡಿವೆ.
ಜೆಡಿಎಸ್ ಟಾಂಗ್ :
ರಾಜ್ಯದಾದ್ಯಂತ ಬರ ಕಾಡುತ್ತಿದ್ದು, ಕೆಲವೆಡೆ ನೆರೆ ಬಂದಿದೆ. ಒಂದು ವಾರ ಕಳೆದರೂ ಸಚಿವ ಸಂಪುಟ ರಚಿಸದೆ ಕಾಲಹರಣ ಮಾಡುವ ಮೂಲಕ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಕಾಂಗ್ರೆಸ್ ಸರಣಿ ಟ್ವೀಟ್ :
ಸಂಪುಟ ವಿಳಂಬ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಹಿಂಬಾಗಿಲ ಸಿಎಂ ಬಿಎಸ್ವೈ ಅವರೇ ಎಲ್ಲಿ ನಿಮ್ಮ ಸಚಿವ ಸಂಪುಟ? ಆರ್ ಎಸ್ ಎಸ್, ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆ ಕೊಡುತ್ತಿರುವಿರಿ? ಆಡಳಿತ ಯಂತ್ರವನ್ನು ಸ್ಥಗಿತಗೊಳಿಸಿದ್ದು ಯಾಕೆ? ಮಂತ್ರಿಗಳಿಗಾಗಿ, ಅಭಿವೃದ್ಧಿಯ ಕೆಲಸಗಳಿಗಾಗಿ ಜನತೆ ಇನ್ನೆಷ್ಟು ದಿನ ಕಾಯಬೇಕು ಎಂದು ಟಾಂಗ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್ , ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಹೆಗ್ಗಳಿಕೆ ನಮ್ಮ ಭಾರತಕ್ಕಿತ್ತು. ಆದರೆ ನರೇಂದ್ರ ಮೋದಿ ಅವರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ವಿಶ್ವಬ್ಯಾಂಕಿನ ಜಿಡಿಪಿ ರಾಂಕಿಂಗ್ ನಲ್ಲಿ ನಾವು 7ನೇ ಸ್ಥಾನಕ್ಕೆ ಕುಸಿದಿದೆವೇ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತಲೆ ಇದೆ. ವಿಕಾಸ ಮತ್ತು ಅಚ್ಚೇ ದಿನ್ ಅಂದರೆ ಇದೇನಾ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಮೋದಿ ಅವರ ನೋಟು ರದ್ದತಿ, ಲೋಪದ ಜಿಎಸ್ಟಿಯಂತಹ ತುಘಲಕ್ ನಿರ್ಧಾರದಿಂದಾಗಿ ದೇಶದ ಮಾರುಕಟ್ಟೆ ವ್ಯವಸ್ಥೆ ಕುಸಿದಿದ್ದು, ವಾಹನಗಳ ಬಿಡಿಭಾಗ ಮಾರಾಟ ಕುಸಿತದ ಬೆನ್ನಲ್ಲೇ ಕಾರುಗಳ ಮಾರಾಟವೂ ನೆಲಕಚ್ಚಿದೆ. ಮಾರುತಿ ಸುಜುಕಿ ಸೇರಿದಂತೆ ದೇಶಿಯ, ಅಂತರಾಷ್ಟ್ರೀಯ ಮಟ್ಟದ ಹಲವು ಕಾರು ತಯಾರಕ ಸಂಸ್ಥೆಗಳು ನಷ್ಟದ ಹಾದಿಯಲ್ಲಿ ಇರುವುದು ದುರಂತ ಎಂದು ಟ್ವೀಟ್ ಮಾಡಿದೆ.
