ರೋಮಿಯೋ ಜೂಲಿಯಟ್, ಲೈಲಾ ಮಜ್ನು ಹೆಸರು ಕೇಳಿರುತ್ತೀರಿ. ಪ್ರೀತಿಗಾಗಿ ಪ್ರಾಣವನ್ನೇ ತ್ಯಜಿಸಿದ ಜೋಡಿಗಳು ಇವರು. ಇನ್ನು ನಿಜವಾದ ಪ್ರೇಮಿಗಳನ್ನು ನೋಡಿದರೆ ಅವರನ್ನು ಹೀಗೆ ಹೋಲಿಸುವುದು ಸಾಮಾನ್ಯ.
ಗುಜರಾತ್ನ ಜಾಮ್ನಗರದಲ್ಲಿ ಇದೇ ರೀತಿಯ ಲವ್ಸ್ಟೋರಿಯೊಂದು ಬೆಳಕಿಗೆ ಬಂದಿದೆ. ಬಹುತೇಕ ಲವ್ ಸ್ಟೋರಿಗಳಂತೆ ಈ ಕಥೆ ಕೂಡಾ ದುರಂತ ಅಂತ್ಯ ಕಂಡಿದೆ. ಆತನ ಹೆಸರು ಚಿರಾಗ್, ಯುವತಿಯ ಹೆಸರು ಹಿರಲ್. ಇಬ್ಬರೂ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಹಿರಿಯರು ಕೂಡಾ ಒಪ್ಪಿಗೆ ನೀಡಿ ನಿಶ್ಚಿತಾರ್ಥ ಕೂಡಾ ಮಾಡಿದರು. ಆದರೆ ನಿಶ್ಚಿತಾರ್ಥ ಆಗಿ 2 ತಿಂಗಳ ನಂತರ ಹಿರಲ್, ಆಕಸ್ಮಿಕ ವಿದ್ಯುತ್ ಅಪಘಾತದಿಂದ ಎರಡು ಕಾಲುಗಳು ಹಾಗೂ ಒಂದು ಕೈ ಕಳೆದುಕೊಂಡಳು.
ಈ ದುರ್ಘಟನೆಯಿಂದ ಮನೆಯವರಿಗೆ ದಿಕ್ಕು ತೋಚದಂತಾಯಿತು. ಆದರೆ ಆಗ ಅವರಿಗೆ ಧೈರ್ಯ ಹೇಳಿದ್ದು ಚಿರಾಗ್ ಹಾಗೂ ಕುಟುಂಬ. ಆಕೆ ಕೈ, ಕಾಲು ಇಲ್ಲದಿದ್ದರೆ ಏನಂತೆ, ನಾನು ಅವಳನ್ನೇ ಮದುವೆಯಾಗುತ್ತೇನೆ ಎಂದು ಚಿರಾಗ್ ನಿರ್ಧಾರ ಮಾಡಿದ. ಆತನ ನಿರ್ಧಾರಕ್ಕೆ ಪೋಷಕರು ವಿರೋಧಿಸಲಿಲ್ಲ. ಚಿರಾಗ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಲ್ ಸೇವೆ ಮಾಡಲು ಆರಂಭಿಸಿದ. ಕೊನೆಯವರೆಗೂ ನಿನ್ನ ಜೊತೆಯಲ್ಲಿ ಇರುತ್ತೆನೆ ಎಂದು ಭರವಸೆ ಕೂಡಾ ನೀಡಿದ.
ಆದರೆ ವಿಧಿ ಬರಹವೇ ಬೇರೆ ಇತ್ತು. ಸತತ 6 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಲ್ ಕಾಲಿನ ಆಪರೇಷನ್ ನಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಳು. ನಂತರ ಚಿರಾಗ್ ಹಾಗೂ ಮನೆಯವರು ಮುಂದೆ ನಿಂತು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಚಿಕ್ಕ ಚಿಕ್ಕ ವಿಷಯಕ್ಕೆ ಜಗಳವಾಡಿ ಕೊನೆಗೆ ಡೈವೋರ್ಸವರೆಗೂ ಹೋಗುವ ಸಂಬಂಧಗಳ ನಡುವೆ ಚಿರಾಗ್ ತನ್ನ ಪ್ರೀತಿಯ ಹಿರಲ್ ಮೇಲೆ ತೋರಿದ ಪ್ರೀತಿ ನಿಜಕ್ಕೂ ಇತರರಿಗೆ ಮಾದರಿ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಜೀವನಪೂರ್ತಿ ಯಾರೊಂದಿಗೆ ಇರಬೇಕು ಎಂದು ಚಿರಾಗ್ ಆಸೆಪಟ್ಟಿದ್ದನೋ ಆಕೆ ಅರ್ಧದಲ್ಲೇ ಬಾರದ ಲೋಕಕ್ಕೆ ತೆರಳಿದ್ದು ಮಾತ್ರ ವಿಧಿ ವಿಪರ್ಯಾಸ.