ನಿರ್ಭಯಾ ಅಪರಾಧಿಗಳನ್ನು ನೇಣಿಗೇರಿಸುತ್ತಿರುವ ಪವನ್ ಪುತ್ರಿ ಮದುವೆಗೆ ಜಗ್ಗೇಶ್ ಹಣ ಸಹಾಯ..!

0
324

7 ವರ್ಷಗಳ ಹಿಂದೆ ದೆಹಲಿಯಲ್ಲಿ ಚಲಿಸುವ ಬಸ್​​ನಲ್ಲಿ ಜರುಗಿದ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ನಡೆದಾಗಿನಿಂದ ಅತ್ಯಾಚಾರ ಆರೋಪಿಗಳನ್ನು ನೇಣಿಗೇರಿಸಬೇಕೆಂದು ಎಲ್ಲೆಡೆ ಪ್ರತಿಭಟನೆಗಳು ಕೂಡಾ ನಡೆದಿತ್ತು.

ಇದೀಗ 7 ವರ್ಷಗಳ ನಂತರ ನಿರ್ಭಯಾ ಕೇಸ್ ಆರೋಪಿಗಳಿಗೆ ಕೊನೆಗೂ ಕೋರ್ಟ್ ಶಿಕ್ಷೆ ನೀಡಿದೆ. ನಾಲ್ವರೂ ಆರೋಪಿಗಳನ್ನು ನೇಣಿಗೆ ಏರಿಸುವಂತೆ ದೆಹಲಿ ಕೋರ್ಟ್ ತೀರ್ಪು ನೀಡಿದೆ. ಅದರಂತೆ ಜನವರಿ 22 ರಂದು ಬೆಳಗ್ಗೆ 7 ಗಂಟೆಗೆ ಸರಿಯಾಗಿ ಈ ನಾಲ್ವರು ಆರೋಪಿಗಳು ನೇಣುಗಂಬ ಏರಲಿದ್ದಾರೆ. ನಿರ್ಭಯಾ ವಾಪಸ್ ಬರದಿದ್ದರೂ ಆಕೆಯ ಸಾವಿಗೆ ಈ ಮೂಲಕ ನ್ಯಾಯ ದೊರೆತಿದೆ. 2012 ಡಿಸೆಂಬರ್​ 12 ರಂದು ನಡೆದ ಈ ದುರ್ಘಟನೆಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ.

ಇನ್ನು ಜನವರಿ 22 ರಂದು ಆರೋಪಿಗಳನ್ನು ಗಲ್ಲಿಗೆ ಏರಿಸುತ್ತಿರುವುದು ಪವನ್ ಜಲ್ಲಾದ್ ಎಂಬ ವಧಕಾರ. ಬಹಳಷ್ಟು ವರ್ಷಗಳಿಂದ ಪವನ್ ಈ ಕೆಲಸ ಮಾಡುತ್ತಿದ್ದು ಈ ಅತ್ಯಾಚಾರ ಆರೋಪಿಗಳನ್ನು ನೇಣಿಗೆ ಏರಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ‘ನಾನು ನನ್ನ ಮಗಳ ಮದುವೆಗೆ ಹಣ ಹೊಂದಿಸುತ್ತಿದ್ದೇನೆ. ಇದೇ ವೇಳೆ ನಿರ್ಭಯಾ ಅತ್ಯಾಚಾರ ಆರೋಪಿಗಳ ಕೊರಳಿಗೆ ನೇಣು ಹಾಕುತ್ತಿದ್ದೇನೆ. ಈ ಕೆಲಸಕ್ಕೆ ನಾನು ಸಿದ್ಧನಿದ್ದೇನೆ. ಈ ನೇಣಿಗೇರಿಸುವ ಕೆಲಸದಿಂದ ಬರುವ ಹಣದಿಂದ ಮಗಳ ಮದುವೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಪವನ್ ಅವರ ಈ ಮಾತನ್ನು ಕೇಳಿದ ನವರಸ ನಾಯಕ ಜಗ್ಗೇಶ್ ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ತಮ್ಮ ಟ್ವಿಟ್ಟರ್​​​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ‘ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ, ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ, ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ, ಇಂದೇ ಆ ಹಣವನ್ನು ನಿಮಗಾಗಿ ಮೀಸಲಿಟ್ಟೆ, ದುರುಳ ನಿಗ್ರಹ ದೇವರ ಸೇವೆ, ಹರಿಓಂ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಅವರ ಈ ಕಾರ್ಯಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here