ನಾನು ಕೇವಲ ಮನುಷ್ಯ ಮನುಷ್ಯನಾಗಿ ಉಳಿದರೆ ಸಾಕು

0
329

ವರ್ತಮಾನದ ತಲ್ಲಣಗಳಿಗೆ ಮನಸ್ಸು ಸದಾ ತೆರೆದುಕೊಳ್ಳುತ್ತದೆ.
ನಮ್ಮ ಜ್ಞಾನ ಮತ್ತು ವಿವೇಚನೆಯ ಗಡಿ ದಾಟಿ ಮನಸ್ಸು ಆಲೋಚಿಸುವುದಕ್ಕೆ ಕಾರಣ ಹುಡುಕುವುದು ಕಷ್ಟ.

ಮನುಷ್ಯ ಸಂಬಂಧಗಳು,ನಾವೇ ಹುಡುಕಿಕೊಂಡು ಹೋಗುವ ಅನುಬಂಧಗಳು.‌
ನಾವೇ ಹೆಣೆದುಕೊಳ್ಳುವ ಅನುಮಾನದ ಹುತ್ತದಲ್ಲಿ ನಾವೇ ಸೇರಿಕೊಂಡು ಇರುವೆ ಆಗಿದ್ದವರು ನಂಜು ಕಾರುವ ಹಾವಾಗಿ ಬಿಡುತ್ತೇವೆ.‌

ನಾನೆಂಬ ಅಹಂಕಾರ, ಅದರಾಚೆಗಿನ ವ್ಯಾಮೋಹ, ಇದು ಕೇವಲ ನನ್ನದಾಗಿ ಇರಲಿ ಎಂಬ ಸ್ವಾರ್ಥ,ಅಪರಿಮಿತ ಬಯಕೆಗಳಿಗೆ ಮನಸ್ಸು ಬಲಿಯಾದಾಗ ಮನುಷ್ಯ ಕುಗ್ಗಿ ಹೋಗುತ್ತಾನೆ.

ಪ್ರೀತಿ-ಪ್ರೇಮ-ಪ್ರಣಯ ಎಂಬ ಮನೋ-ದೇಹದಾಟದ ಸಂಕೋಲೆಯಲ್ಲಿ ಮನಸ್ಸು ಹತೋಟಿ ಕಳೆದುಕೊಂಡ ಮನುಷ್ಯ ರಕ್ಕಸನಾಗುತ್ತಾನೆ.

ಇಲ್ಲಿ ನಾನು,ನೀವು ಮತ್ತು ಅವರೆಲ್ಲರೂ ಇದ್ದಾರೆ ಆದರೆ ಹೇಳಿಕೊಳ್ಳಲಾಗದೇ ಒದ್ದಾಡುತ್ತಾರೆ.
ಮನುಷ್ಯ ಮನುಷ್ಯನಿಗೆ ಅರ್ಥವಾಗುವುದು ತುಂಬಾ ಕಠಿಣ. ಸಾಕಿದ ಪ್ರಾಣಿಗಳು ಬೇಗ ಅರ್ಥವಾಗಿಬಿಡುತ್ತವೆ.

ಆದರೆ ಪ್ರತಿ ಕ್ಷಣ ಕ್ಷಣಕ್ಕೂ ಭಿನ್ನ ನೆಲೆಯಲ್ಲಿ ಆಲೋಚಿಸುವ ಮನುಷ್ಯ ಅರ್ಥವಾಗುವುದೇ ಇಲ್ಲ ಕೊನೆತನಕ.
ದಣಿದು ಹೈರಾಣಾಗುತ್ತಾನೆ,ಪ್ರೇಮಿಸುವ ಮನಸ್ಸುಗಳೆದುರು ಹತಾಶನಾಗಿ ಚೀರುತ್ತಾನೆ ತನಗೆ ತಾನು ಅರ್ಥವಾಗದೇ!

ಪ್ರಕೃತಿ ಸೌಂದರ್ಯದ ಮುಂದೆ ಮನುಷ್ಯ ಸಣ್ಣ ಹುಳು,ಕ್ರಿಮಿ. ಆದರವನದು ಪ್ರಕೃತಿ ವಿರುದ್ಧದ ಅಸಹನೀಯ ಅಸಹಜ ಹೋರಾಟ, ಹಾರಾಟ.

ರಾಮನಗರದ ಸುಂದರ ಬೆಟ್ಟಗಳ ಮಧ್ಯೆ ನನ್ನ ಪಾಡಿಗೆ ನಾನಿದ್ದರೆ ಎಷ್ಟೊಂದು ಸುಂದರವಾಗಿರುತ್ತಿತ್ತು, ಸುಮ್ಮನಿರದೆ ನನ್ನ ಅಹಮಿಕೆ ಮತ್ತು ಸ್ವಾರ್ಥವನ್ನು ಕೆಣಕಿಬಿಟ್ಟೆ.

ಮನಸ್ಸಿನ ಸಂಕೀರ್ಣ ವಿಚಾರಧಾರೆಗಳು ಮತ್ತು ಸಂಕುಚಿತ ಆಲೋಚನೆಗಳು ನಮ್ಮನ್ನು ಅಲುಗಾಡಿಸಿಬಿಡುತ್ತವೆ. ಹಾಗಾದಾಗ ನಾವು ಹುಚ್ಚರಾಗಿ ಸಮತೋಲನ ಕಳೆದುಕೊಂಡು ಬಿಡುತ್ತೇವೆ.

ಋಷಿ ಮುನಿಗಳು,ಸಾಧು-ಸಂತರು ಇಂತಹ ಸುಂದರ ಪರಿಸರದಲ್ಲಿ ಶಾಂತವಾಗಿ ಆಲೋಚಿಸಿ ಧ್ಯಾನಸ್ಥ ಸ್ಥಿತಿಗೇರುತ್ತಾರೆ.

ಎಲ್ಲರೂ, ಎಲ್ಲದೂ ನನಗೇ ಇರಲಿ ಎಂಬ ಸಣ್ಣ ಮನಸ್ಸಿದ್ದರೆ ಅವರು ಕೂಡ ನಮ್ಮ ಹಾಗೆ ಚಿಲ್ಲರೆ ಮನುಷ್ಯರಾಗಿಬಿಡುತ್ತಿದ್ದರು.

ಬದುಕು ಕಲಿಸಿದ ಪಾಠ,ಓದು,ಬರಹ, ಪಯಣದಲ್ಲಿ ಸಿಕ್ಕ ವ್ಯಕ್ತಿಗಳು ನಮಗೆ ಸಾಕಾಗುವುದಿಲ್ಲ.
ಮತ್ತೆ, ಮತ್ತೆ ದಕ್ಕದಿರುವುದನ್ನು ದಕ್ಕಿಸಿಕೊಳ್ಳುವ ಹಟ.
ನನ್ನ ಆಲೋಚನೆಯಂತೆ ಎಲ್ಲರೂ ಅಲ್ಲದಿದ್ದರೂ ಕೆಲವರಾದರೂ ನಾನು ಹೇಳಿದ ಹಾಗೆ ನಡೆದುಕೊಳ್ಳಲ್ಲಿ ಎಂಬ ಸ್ವಾರ್ಥ.

ಈ ಹಾರಾಟದ ಆಲೋಚನೆಯಲ್ಲಿ ನಾನು ಕಳೆದು ಹೋದಾಗ ನನ್ನೊಳಗಿರುವ ವಿವೇಚನೆ ಸತ್ತು ನಾನು ಕೇವಲ ಮನುಷ್ಯನಾಗಿ ಉಳಿದುಬಿಡುತ್ತೇನೆ.

ಸಂತನಾಗುವ ನನ್ನ ಕನಸು ಕನಸಾಗಿ ಬಿಡುತ್ತದೆ ಎಂಬ ವಿಷಾದದಿಂದ ಬೆಟ್ಟ ಇಳಿದು ಕೆಳಗಿಳಿದು ಬರುವಾಗ ಸೂರ್ಯ ನನ್ನ ನೋಡಿ ನಕ್ಕು ಹೇಳಿದ ” ಅಯ್ಯೋ ಹುಚ್ಚ,ನಾನೇರಿದೆತ್ತರಕೆ ನೀ ಏರಲಾರೆ, ನನ್ನಂತೆ ನೀ ಈ ಲೋಕವ ಬೆಳಗಲಾರೆ, ಏಕೆಂದರೆ ನೀ ಹುಚ್ಚು ಮನಸ್ಸಿನ ವಿಕೃತ ಮನುಷ್ಯ “

ಸೂರ್ಯನ ಮಾತಿಗೆ ಹೂಂ ಅನಬೇಕೆನಿಸಿತು. ನಾವು ಪ್ರೀತಿಸುವ ವ್ಯಕ್ತಿಗಳಿಗೆ ಸ್ವಾತಂತ್ರ್ಯ ನೀಡುವ ನೆಪದಲ್ಲಿ ಬಾನಲ್ಲಿ‌ ಹಾರಾಡುವ ಅವಕಾಶ ನೀಡುತ್ತೇವೆ. ಆಕಾಶದಲ್ಲಿ ಹಾರಾಡಲು ಮುಕ್ತ ಅವಕಾಶ ಕೊಡದೇ ಗಾಳಿ ಪಟದಂತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೇವೆ.

Satisfaction and Success

ಪಕ್ಷಿಯಂತೆ ಮುಕ್ತವಾಗಿ ಹಾರಾಡಿ ಮರಳಿ ಗೂಡಿಗೆ ಬರಲಿ ಎಂದು ಬಯಸುವುದಿಲ್ಲ. ನಮ್ಮ ನಂಬಿದ ಜೀವಗಳು ಮುಕ್ತವಾಗಿ ಪಕ್ಷಿಯಂತೆ ಹಾರಾಡುವ ಅವಕಾಶ ನೀಡುವ ಮಾನವೀಯ ಒಲವುಳ್ಳ ನಿಜವಾದ ಮನುಷ್ಯರಾದರೆ ಸಾಕು ಎನಿಸಿತು.

#ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here