ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚಿಗೆ ನಡೆಸಿದ ಚಂದ್ರಯಾನ-2 95ರಷ್ಟು ಯಶಸ್ಸು ಕಂಡರು ಕೊನೆಯ ಹಂತದಲ್ಲಾದ ಕೆಲ ತಾಂತ್ರಿಕ ದೋಷಗಳಿಂದ ಅಲ್ಪ ಹಿನ್ನಡೆ ಅನುಭವಿಸಿತ್ತು. ವಿಕ್ರಂ ಲ್ಯಾಂಡರ್ 2.1 ಕಿ.ಲೋ ಮೀಟರ್ ದೂರ ಇರುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಇದೀಗ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತ ಉಂಟಾಗಿದ್ದು 2.1 ಕಿಲೋಮೀಟರ್ ಅಂತರದಲ್ಲಿ ಅಲ್ಲ ಬದಲಿಗೆ ಚಂದ್ರನ ಮೇಲ್ಮೈನಿಂದ ಕೇವಲ 400 ಮೀಟರ್ ಅಂತರದಲ್ಲಿ ಎಂಬ ಹೊಸ ಮಾಹಿತಿಯನ್ನು ಇಸ್ರೋ ಬಹಿರಂಗ ಪಡಿಸಿದೆ.

ಹೌದು, ಸೆಪ್ಟಂಬರ್ 8ರ ಮುಂಜಾನೆ 1.50ರ ವೇಳೆ ವಿಕ್ರಂ ಲ್ಯಾಂಡರ್ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತ್ತು. ನಂತರ ಸಾಕಷ್ಟು ಪ್ರಯತ್ನದ ನಂತರ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು, “ವಿಕ್ರಂ ಲ್ಯಾಂಡೆರ್ ನ ಇಳಿವ ಪ್ರಕ್ರಿಯೆಯು ಯೋಜಿತ ರೀತಿಯಲ್ಲೇ ಸಾಗಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ವಿಕ್ರಂ ಲ್ಯಾಂಡರ್ ಭೂಸಂಪರ್ಕ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿದೆ ಎಂದು ಘೋಷಿಸಿದ್ದರು. ಆದರೆ ಇದೀಗ ಲ್ಯಾಂಡೆರ್ ನ ಚಲನೆಯ ಮಾಹಿತಿ ನೀಡುತ್ತಿದ್ದ ಗ್ರಾಫ್ ಈ ಕುರಿತು ಸ್ಪಷ್ಟಮಾಹಿತಿ ನೀಡಿದೆ.

ಗ್ರಾಫ್ನಲ್ಲಿ ಕೆಂಪು ಗೆರೆಯು ಲ್ಯಾಂಡರ್ನ ಪಥ ಸೂಚಿಸುತ್ತಿದ್ದರೆ, ಹಸಿರು ಬಣ್ಣವು ಅದರ ಸಂಪರ್ಕದ ಕುರಿತ ಮಾಹಿತಿ ನೀಡುತ್ತಿತ್ತು. ಲ್ಯಾಂಡರ್ ಇನ್ನು 2.1 ಕಿ.ಮೀ ದೂರ ಕ್ರಮಿಸಲು ಬಾಕಿ ಇರುವಾಗಲೇ ತನ್ನ ಪಥ ಬದಲಿಸಿದ್ದು, ಕೆಂಪು ಗೆರೆಯ ಪಥ ಬದಲಾವಣೆಯ ಮೂಲಕ ಖಚಿತಪಟ್ಟಿತ್ತು. ಆದರೆ ಹಸಿರು ಗೆರೆಯು ಲ್ಯಾಂಡರ್ ಚಂದ್ರನ ಮೇಲ್ಮೈಗಿಂತ ಕೇವಲ 400 ಮೀಟರ್ ದೂರದವರೆಗೂ ಸಾಗಿ ಬಳಿಕ ತನ್ನ ಚಲನೆ ನಿಲ್ಲಿಸಿತ್ತು. ಹೀಗಾಗಿ ವಿಕ್ರಂ ಲ್ಯಾಂಡರ್ ಕೇವಲ 400 ಮೀ ದೂರದಿಂದ ಮಾತ್ರ ಸಂಪರ್ಕ ಕಡಿದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.