ನಂಗ್ಯಾವ ಅಸಮಾಧಾನ ಇಲ್ಲ..!?: ಶ್ರೀರಾಮುಲು

0
80

ಬೆಂಗಳೂರು: ರಾಜಕೀಯ ಅನ್ನೋದೇ ಹಾಗೇ.. ಎಷ್ಟು ಅಸಮಾಧಾನ, ಬೇಗುದಿ ಒಳಗಿದ್ದರೂ ಬಹಿರಂಗವಾಗಿ ಹೇಳಿಕೊಳ್ಳೋಕೆ ಆಗೊಲ್ಲ.. ನಂಗ್ಯಾಕೆ ಅಸಮಧಾನ..?, ನಂಗ್ಯಾವ ಬೇಸರ ಇಲ್ಲ ಅಂತ ಹೇಳ್ತಲೇ ಹೈಕಮಾಂಡ್ ಗೆ ಮೊರೆ ಹೋಗೋದನ್ನ ನೋಡ್ತಲೇ ಬಂದಿದ್ದೇವೆ.. ಇದೀಗ ಶ್ರೀರಾಮುಲುಗೆ ಆ ಸರದಿ. ನಿನ್ನೆ ಎಲ್ಲಾ ತಮ್ಮ ಆಪ್ತರ ಜೊತೆ ಅಳಲು ತೋಡಿಕೊಂಡಿದ್ದ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಕೊಟ್ಟಿರೋದೇ ನಂಗೆ ಸಂತೋಷವಾಗಿದೆ ಎಂದು ಇಂದು‌ಹೇಳಿದ್ದಾರೆ. ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀ ರಾಮುಲು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಶ್ರೀರಾಮುಲು ಅಸಮಾಧಾನ ದಲ್ಲಿದ್ದರೂ ಅದನ್ನು ತೋರ್ಪಡಿಸದೆ.. ಖಾತೆ ಹಂಚಿಕೆ ನಿಮ್ಮ ಪರಮಾಧಿಕಾರ. ನಿಮ್ಮ ಆದೇಶಕ್ಕೆ ಬದ್ಧ. ಈ ಬಾರಿಯ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಗೆ ಆಶ್ವಾಸನೆ ನೀಡಿದರು ಎನ್ನಲಾಗಿದೆ.

ನಂತರ ಮಾತನಾಡಿದ ಸಚಿವ ಶ್ರೀ ರಾಮುಲು, ನಾನು ಈ ಹಿಂದೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ಕೇಳಿದ್ದೆ. ಹಲವು ಕಾರಣದಿಂದ ನನಗೆ ಆರೋಗ್ಯ ಇಲಾಖೆ ‌ನೀಡಿದ್ದರು. ಇದೀಗ ನನಗೆ ಸಮಾಜಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದು ಸಂತೋಷವಾಗಿದೆ. ನನಗೆ ಯಾವುದೇ ಅಸಮಾಧಾನ ವಿಲ್ಲ. ಸುಧಾಕರ್ ಸ್ವತಃ ವೈದ್ಯರಾಗಿದ್ದು ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕೊರೊನಾ ವಿರುದ್ದ ಹೋರಾಟದಲ್ಲಿ ಸುಧಾಕರ್ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ. ಈ ವಿಚಾರದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಸಿಎಂ ಯಡಿಯೂರಪ್ಪ ರ ಆದೇಶದಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.

ಇನ್ನು ಸಿಎಂ ಯಡಿಯೂರಪ್ಪ ರನ್ನ ಭೇಟಿ ಮಾಡಿದ ನಂತರ ಶ್ರೀರಾಮುಲು ಸೀದಾ ಚಿಕ್ಕಜಾಲ ಬಳಿ ಇರುವ ತಮ್ಮ ಆಪ್ತರ ಮನೆಗೆ ತೆರಳಿದರು. ಸಚಿವ ಸ್ಥಾನದ ಅದಲು ಬದಲು ಹಿನ್ನಲೆಯಲ್ಲಿ ಬೇಸರಗೊಂಡಿರುವ ರಾಮುಲು ಅಲ್ಲೇ ಕಾಲ ಕಳೆಯಲಿದ್ದಾರಂತೆ.

ರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ

ಈ ವೇಳೆ ಮಾತನಾಡಿದ ಸಚಿವ ಡಾ.ಸುಧಾಕರ್, ರಾಮುಲು ನನಗಿಂತ ಹಿರಿಯರು. ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿದ್ದಾರೆ. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಕೆಳ ಹಂತದಲ್ಲಿ ಸಮನ್ವಯದ ಕೊರತೆ ಇದ್ದ ಕಾರಣ ಸಿಎಂ ಯಡಿಯೂರಪ್ಪ ಈ ತೀರ್ಮಾನ ಮಾಡಿದ್ದಾರೆ. ರಾಮುಲು ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂಬ ಪ್ರಶ್ನೆಯೇ ಇಲ್ಲ. ರಾಮುಲು ಅವರಿಗೆ‌ ಬಹುದೊಡ್ಡ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ರಾಮುಲು ಅವರಿಗೆ ಡಿಪ್ರಮೋಟ್ ಆಗಿಲ್ಲ ಎಂದು ತಿಳಿಸಿದರು.

ಇತ್ತ ಸಮಾಜ ಕಲ್ಯಾಣ ಇಲಾಖೆ ಖಾತೆ ವಾಪಸ್ ಪಡೆದಿರುವುದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ವೇಳೆ ಶಾಲಾ ಮಕ್ಕಳಿಗೆ ಶಿಕ್ಷಣ, ವಸತಿ, ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿಲ್ಲವೆಂದು ಬೇಸರವನ್ನು ವ್ಯಕ್ತಪಡಿಸುವ ಮೂಲಕ ಖಾತೆ ಬದಲಾವಣೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here