ಮೈತ್ರಿ ಸರ್ಕಾರ ಮುರಿದ ಜೆಡಿಎಸ್-ಕಾಂಗ್ರೆಸ್ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ. ರಾಜಕೀಯದಲ್ಲಿ ಈ ರೀತಿಯ ವಾಕ್ಸರಗಳು ಸಾಮಾನ್ಯ. ಆದ್ರೆ ಈ ಸಮರದಲ್ಲಿ ಧಾರ್ಮಿಕ ಮುಖಂಡರು ಮೂಗಿ ತೂರಿಸುವುದು ಮಾತ್ರ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗಳು ಸದಾ ರಾಜಕೀಯ ಹೇಳಿಕೆಗಳನ್ನು ಕೊಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ಹೌದು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಎಚ್.ಡಿ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಮಾಡಿ ಆರೋಪಕ್ಕೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ “ದೇವೇಗೌಡ್ರ ಕುಟುಂಬದವರು ಮತ್ತೊಮ್ಮೆ ಹುಟ್ಟಿ ಬಂದ್ರೂ ಸಿದ್ದರಾಮಯ್ಯ ಹೆಸರು ಹಾಳು ಮಾಡೋಕೆ ಆಗೋದಿಲ್ಲ. ಸಿದ್ದರಾಮಯ್ಯ ಅವರಿಗೆ ಸಿದ್ದರಾಮಯ್ಯ ಅವರೇ ಸರಿ ಸಾಟಿ. ಸಿದ್ದರಾಮಯ್ಯ ಅವರಿಗೆ ಸರಿಸಾಟಿ ಬೇರಾರೂ ಇಲ್ಲ. ಇಂತಹ ಸಿದ್ದರಾಮಯ್ಯನಂತವರು ಮತ್ತೆ ಬರೋಲ್ಲ. ಇನ್ನು ಮಾಜಿ ಪ್ರಧಾನಿ ದೇವೇಗೌಡರಿಗೆ ಈಗ 80 ವಯಸ್ಸು. ಹೀಗಾಗಿ ಮಕ್ಕಳಂತೆ ಆಡ್ತಿದ್ದಾರೆ. ಮಕ್ಕಳು ಹೇಗೆ ಮಾತಾಡ್ತಾರೆ ಅಂತ ಗೊತ್ತಲ್ಲ” ಎನ್ನುವ ಮೂಲಕ ಮತ್ತೆ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯವಾಗಿ ಸಿದ್ದರಾಮಯ್ಯನವರನ್ನು ಯಾರೇ ವಿರೋಧಿಸಿದ್ರು, ಕಾಗಿನೆಲೆ ಶ್ರೀಗಳು ಸಿಟ್ಟು ಮಾಡಿಕೊಳ್ಳುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಶ್ರೀಗಳ ಈ ನಡೆಯ ಹಿಂದೆ ರಾಜಕೀಯ ಸಂಘಟನೆಯ ತಂತ್ರ ಅಡಗಿದೆ. ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ಪ್ರಶ್ನಾತೀತ ನಾಯಕನೆಂದು ಬಿಂಬಿಸುವುದು ಮತ್ತು ಆ ಮೂಲಕ ರಾಜಕೀಯ ಲಾಭ ಪಡೆಯುವುದು ಈ ತಂತ್ರದ ಹಿಂದಿನ ಉದ್ದೇಶ. ಹೀಗಾಗಿ ಶ್ರೀಗಳು ರಾಜಕೀಯ ಹೇಳಿಕೆಗಳನ್ನು ಪದೇ ಪದೇ ನೀಡುವ ಮೂಲಕ ರಾಜಕೀಯ ಸಂಘಟನೆಯತ್ತ ಚಿತ್ತ ನೆಟ್ಟಿದ್ದಾರೆ. ಇನ್ನು ಒಕ್ಕಲಿಗ ಸಮುದಾಯದ ದೇವೇಗೌಡರನ್ನು ಮತ್ತು ಲಿಂಗಾಯತ ಸಮುದಾಯದ ಯಡಿಯೂರಪ್ಪರನ್ನು ಟೀಕಿಸುವ ಮೂಲಕ ಕುರುಬ ಸಮುದಾಯವನ್ನು ರಾಜಕೀಯವಾಗಿ ಸಂಘಟಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿಯೇ ಶ್ರೀಗಳು ದೇವೇಗೌಡರನ್ನು ಸದಾ ಟೀಕಿಸುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ.