ಭಾರತವು ವಿಶ್ವದ ಆಂತರಿಕ ಉತ್ಪನ್ನದ (ಜಿಡಿಪಿ) ಶ್ರೇಯಾಂಕದಲ್ಲಿ ಒಂದು ಸ್ಥಾನ ಕೆಳಗೆ ಕುಸಿದಿದೆ .
ವಿಶ್ವಬ್ಯಾಂಕ್ ‘ಜಿಡಿಪಿ’ ಆಧರಿಸಿ 205 ದೇಶಗಳ ಶ್ರೇಯಾಂಕದ ಪಟ್ಟಿ ಮಾಡಿದ್ದು ಅದರಲ್ಲಿ ಭಾರತ ತನ್ನ 6ನೇ ಸ್ಥಾನವನ್ನು ಫ್ರಾನ್ಸ್ಗೆ ಬಿಟ್ಟುಕೊಟ್ಟು ಒಂದು ಸ್ಥಾನ ಕುಸಿದು 7ನೇ ಸ್ಥಳಕ್ಕೆ ತೃಪ್ತಿ ಪಡಬೇಕಾಗಿದೆ.
2018ರಲ್ಲಿ ಭಾರತದ ‘ಜಿಡಿಪಿ’ಯು ₹ 190 ಲಕ್ಷ ಕೋಟಿಗಳಷ್ಟಿದೆ ಎಂದು ವಿಶ್ವಬ್ಯಾಂಕ್ ಲೆಕ್ಕ ಹಾಕಿದೆ. ಇದು ಫ್ರಾನ್ಸ್ನ ₹ 193.9 ಲಕ್ಷ ಕೋಟಿಗಿಂತ ಕಡಿಮೆ ಇದೆ.ಕಳೆದ ಬಾರಿ ಅಂದರೆ 2017ರಲ್ಲಿ ಭಾರತವು ಫ್ರಾನ್ಸ್ ಹಿಂದಿಕ್ಕಿತ್ತು. ಅಮೆರಿಕ, ಚೀನಾ ಮತ್ತು ಜಪಾನ್ ಮೊದಲ ಮೂರು ಸ್ಥಾನಗಳಲ್ಲಿವೆ. ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಹೇಳಿಕೊಳ್ಳುತ್ತಿರುವಾಗಲೇ ವಿಶ್ವಬ್ಯಾಂಕ್ ವರದಿ ಪ್ರಕಟಗೊಂಡಿದೆ.
ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿ…
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ , ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ಹೆಗ್ಗಳಿಕೆ ನಮ್ಮ ಭಾರತಕ್ಕಿತ್ತು. ಆದರೆ ನರೇಂದ್ರ ಮೋದಿ ಅವರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದಾಗಿ ವಿಶ್ವಬ್ಯಾಂಕಿನ ಜಿಡಿಪಿ ರಾಂಕಿಂಗ್ ನಲ್ಲಿ ನಾವು 7ನೇ ಸ್ಥಾನಕ್ಕೆ ಕುಸಿದಿದೆವೇ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗುತ್ತಲೆ ಇದೆ. ವಿಕಾಸ ಮತ್ತು ಅಚ್ಚೇ ದಿನ್ ಅಂದರೆ ಇದೇನಾ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದೆ.
ಮೋದಿ ಅವರ ನೋಟು ರದ್ದತಿ, ಲೋಪದ ಜಿಎಸ್ಟಿಯಂತಹ ತುಘಲಕ್ ನಿರ್ಧಾರದಿಂದಾಗಿ ದೇಶದ ಮಾರುಕಟ್ಟೆ ವ್ಯವಸ್ಥೆ ಕುಸಿದಿದ್ದು, ವಾಹನಗಳ ಬಿಡಿಭಾಗ ಮಾರಾಟ ಕುಸಿತದ ಬೆನ್ನಲ್ಲೇ ಕಾರುಗಳ ಮಾರಾಟವೂ ನೆಲಕಚ್ಚಿದೆ. ಮಾರುತಿ ಸುಜುಕಿ ಸೇರಿದಂತೆ ದೇಶಿಯ, ಅಂತರಾಷ್ಟ್ರೀಯ ಮಟ್ಟದ ಹಲವು ಕಾರು ತಯಾರಕ ಸಂಸ್ಥೆಗಳು ನಷ್ಟದ ಹಾದಿಯಲ್ಲಿ ಇರುವುದು ದುರಂತ ಎಂದು ಟ್ವೀಟ್ ಮಾಡಿದೆ.