ಒಂದು ವೇಳೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳೋಣ..

0
311

ಮೊದಲಿಗೆ ,
ಅತಿಹೆಚ್ಚು ಲಾಭವಾಗುತ್ತಿದ್ದುದು ಪ್ರೀತಿಸುವ – ಮದುವೆಯಾಗುವ ಪ್ರೇಮಿಗಳಿಗೆ ಅಂದರೆ ಅವರಿಗೆ ಅಪರಿಮಿತ ಆಯ್ಕೆಗಳಿರುತ್ತಿದ್ದವು.

ಸುಮಾರು 100 ಕೋಟಿ ಜನರಲ್ಲಿ ಮದುವೆಯ ಆಸಕ್ತಿ ಇರುವ ಯುವಕ ಯುವತಿಯರು ಮತ್ತು ಪೋಷಕರಿಗೂ ಸಹ ಜಾತಿಯ ಗೊಂದಲವಿಲ್ಲದೆ ತಮಗೆ ಒಪ್ಪಿತವಾದವರನ್ನು ಆರಿಸಿಕೊಳ್ಳಲು ಬಹಳಷ್ಟು ಆವಕಾಶಗಳಿರುತ್ತಿದ್ದವು.

ಈಗ ಜಾತಿ ಉಪಜಾತಿ ಕುಲಗೋತ್ರಗಳಿಂದ ಕೆಲವು ಜಾತಿಗಳಲ್ಲಿ ಇರುವವನೇ ಮನ್ಮಥ ಅಥವಾ ಇರುವವಳೇ ಅಪ್ಸರೆ.

ಎರಡನೆಯದಾಗಿ,
ದಲಿತರು ಬ್ರಾಹ್ಮಣರು ಗೌಡರು ಲಿಂಗಾಯತರು ಕುರುಬರು ಹೀಗೆ ಯಾವ ಬೇದವೂ ಇಲ್ಲದೆ ಸಾಮಾಜಿಕ ವರ್ಗ ಸಂಘರ್ಷಗಳಿಲ್ಲದೆ ಬೌದ್ಧ ಧರ್ಮ – ಜೈನ ಧರ್ಮ – ಸಿಖ್ ಧರ್ಮ ಈಗ ಕೇಳಿಬರುತ್ತಿರುವ ಬಸವ ಧರ್ಮಗಳ ವಿಭಜನೆಯೇ ಇಲ್ಲದೆ ಇಡೀ ಭರತ ಖಂಡವೇ ಒಂದು ಐಕ್ಯತೆಯ ಗೂಡಾಗಿರುತ್ತಿತ್ತು.

ಮೂರನೆಯದಾಗಿ,
ಮೇಲು ಕೀಳು ಇರುತ್ತಲೇ ಇರಲಿಲ್ಲವಾದ್ದರಿಂದ ಜಾತಿ ಆಧಾರಿತ ಮೀಸಲಾತಿ ಪ್ರಶ್ನೆಯೇ ಬರುತ್ತಿರಲಿಲ್ಲ. ಕೇವಲ ಪ್ರತಿಭೆ ಒಂದೇ ಮಾನದಂಡವಾಗಿ ಪಾಶ್ಚಾತ್ಯ ದೇಶಗಳಂತೆ ನಾವೂ ಅಭಿವೃದ್ಧಿ ಸಾಧಿಸುತ್ತಿದ್ದೆವು.

ಹಾಳಾದ ಜಾತಿ ವ್ಯವಸ್ಥೆಯಿಂದ ಮೀಸಲಾತಿ ಅನಿವಾರ್ಯವಾಗಿದೆ ಮತ್ತು ಅದು ಶೋಷಿತರ ಮೂಲಭೂತ ಹಕ್ಕು ಮತ್ತು ಅದನ್ನು ನೀಡುವುದು ಶೋಷಕರ ಕರ್ತವ್ಯ ಕೂಡ.

ನಾಲ್ಕನೆಯದಾಗಿ,
ಜಾತಿಯ ಕಾರಣಕ್ಕಾಗಿ ಗಬ್ಬೆದ್ದು ಹೋಗಿರುವ ಚುನಾವಣಾ ವ್ಯವಸ್ಥೆ ಒಂದಷ್ಟು ಪಾವಿತ್ರ್ಯವನ್ನು ಉಳಿಸಿಕೊಂಡು ಉತ್ತಮ ಆಡಳಿತಗಾರರು ಆಯ್ಕೆಯಾಗಿ ಪ್ರಜಾಪ್ರಭುತ್ವ ಸ್ವಲ್ಪ ಯಶಸ್ವಿಯಾಗಿ ಜನರ ಜೀವನಮಟ್ಟ ಸುಧಾರಿಸುತ್ತಿತ್ತು.( ಹಣದ ಪ್ರಭಾವ ಇದ್ದೇ ಇದೆ. ಕನಿಷ್ಠ ಜಾತಿ ಭ್ರಷ್ಟತೆ ಎಂಬ ವಿಷ ಇರುತ್ತಿರಲಿಲ್ಲ.)

ಐದನೆಯದಾಗಿ,
ಜಾತಿ Certificate ಗಳು, ಜಾತಿ ಗಣತೀಕರಣ, ಜಾತಿ ಸಂಘಟನೆಗಳು, ಜಾತಿಗಾಗಿ ಆಗುತ್ತಿರುವ ಅಮಾನವೀಯ ಕೊಲೆಗಳು, ಜಾತಿಗಳಿಂದಾಗುತ್ತಿರುವ ಮಾನಸಿಕ ಹಿಂಸೆ ಯಾವುದೂ ಇಲ್ಲದೇ ಎಷ್ಟೊಂದು ಆರಾಮವಾಗಿ ಇರಬಹುದಿತ್ತು.

ಇದು ನನಗೆ ಗೋಚರಿಸಿದ ಕೆಲವು ಅಂಶಗಳಷ್ಟೆ. ಇನ್ನೂ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಬಹಳಷ್ಟು ಇದೆ. ನಿಮಗೂ ಇತರೆ ಅಂಶಗಳು ಹೊಳೆದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ಜಾತಿ ಮುಕ್ತ ಭಾರತ ಆದಷ್ಟು ಶೀಘ್ರ ನಿಜವಾಗಲಿ ,
ಭಾರತವೆಂಬುದು ಸಮಾನತೆ ಮತ್ತು ಮಾನವೀಯತೆಯ ನಾಡಾಗಲಿ ಎಂದು ಆಶಿಸೋಣ
.

LEAVE A REPLY

Please enter your comment!
Please enter your name here