ರಾಜ್ಯದ ಜನತೆ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿದ್ದರೆ, ಇನ್ನೊಂದೆಡೆ ವಿಪಕ್ಷ ಕಾಂಗ್ರೆಸ್ ನಾಯಕರುಗಳು ಭರ್ಜರಿ ಔತಣ ಕೂಟ ನಡೆಸಿದ್ದು, ಸದ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ವಿಪಕ್ಷ ಸ್ಥಾನದಲ್ಲಿದ್ದುಕೊಂಡು ಜವಾಬ್ದಾರಿಯುತವಾಗಿ ಸರ್ಕಾರದ ಕಿವಿ ಹಿಂಡಬೇಕಾದ ಕಾಂಗ್ರೆಸ್ ಇದೀಗ ರಾಜ್ಯದ ಜನತೆ ಮತ್ತು ಆಡಳಿತ ಪಕ್ಷದಿಂದ ತಾನೇ ಕಿವಿ ಹಿಂಡಿಸಿಕೊಂಡಿದೆ. ಹೌದು, ರಾಜ್ಯ ಕಾಂಗ್ರೆಸ್ ನಾಯಕರು ‘ಬಿರಿಯಾನಿ ಪಾರ್ಟಿ’ ಮಾಡಿರುವುದನ್ನು ಬಿಜೆಪಿ ವ್ಯಂಗ್ಯವಾಡಿದೆ. ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, “ಬಿರ್ಯಾನಿ ಪಾರ್ಟಿಯಲ್ಲಿ ಭಾಗವಹಿಸಲು ಸಮಯವಿದೆ. ಆದರೆ, ಪ್ರವಾಹ ಪೀಡಿತ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಸಮಯವಿಲ್ಲವೇ..? ಎಂದು ಪ್ರಶ್ನಿಸಿದೆ.

“ಬಿರ್ಯಾನಿ ತಿನ್ನುವುದು ಮುಗಿದಿದ್ದರೆ, ಕ್ಷೇತ್ರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡುವ ಮೂಲಕ ನಿಮಗೆ ಮತ ನೀಡಿರುವ ಜನರ ಸಮಸ್ಯೆ ಆಲಿಸಿ” ಎಂದು ವ್ಯಂಗ್ಯವಾಡಿದೆ. ಇನ್ನು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಮನೆಯಲ್ಲಿ ಬ್ರಕಿದ್ ಹಿನ್ನೆಲೆಯಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಮಾಜಿ ಸಂಸದ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದರು. ಇದು ಔತಣಕೂಟ ಭಾರೀ ವಿವಾದಕ್ಕೆ ಕಾರಣವಾಗಿತ್ತು.