ಬಸ್ ನಂಬಿ ರೋಡಿಗಿಳಿದರೆ ಜೋಕೆ: ನಾಳೆಯೂ ಇಲ್ಲ ಸಾರಿಗೆ ವ್ಯವಸ್ಥೆ

0
8

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ನಾಳೆಯೂ ಮುಂದುವರೆಯಲಿದೆ.

ಸಂಧಾನ ಮಾತುಕತೆ ವಿಫಲ

ಇಂದು ಸಾರಿಗೆ ನೌಕರರ ಮುಖಂಡರನ್ನು ಕರೆದು ಡಿಸಿಎಂ, ಸಾರಿಗೆ ಸಚಿವ ಲಕ್ಷಣ್ ಸವದಿ ವಿಧಾನಸೌಧದಲ್ಲಿ ಸಭೆ ನಡೆಸಿದರು. ಆದರೆ ಮುಷ್ಕರಕ್ಕೆ ಕರೆಕೊಟ್ಟ ಸಂಘಟನೆಯನ್ನು ಹೊರತು ಪಡಿಸಿ ಉಳಿದ ಸಂಘಟನೆಗಳ ಪ್ರಮುಖರ ಜೊತೆ ಡಿಸಿಎಂ ಮಾತುಕತೆ ನಡೆಸಿದ್ದಾರೆ. ಸಾರಿಗೆ ನೌಕರರ ಜೊತೆ ಸರ್ಕಾರದ ಸಂಧಾನ ಮಾತುಕತೆ ವಿಫಲವಾಗಿದ್ದು, ನಾಳೆಯೂ ಪ್ರತಿಭಟನೆ ಮುಂದುವರೆಸಲು ಸಾರಿಗೆ ಇಲಾಖೆ ನೌಕರರು ನಿರ್ಧರಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಸಚಿವ ಲಕ್ಷಣ್ ಸವದಿ, ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಬೇಡಿಕೆಗಳ ಬಗ್ಗೆ ಈಗಾಗಲೇ ಒಕ್ಕೂಟಗಳ ಮುಖಂಡರ ಒಂದು ಸುತ್ತಿನ ಸಭೆ ನಡೆಸಲಾಯಿತು. ಅಗತ್ಯವಿದ್ದರೆ ಮತ್ತಷ್ಟು ಮಾತುಕತೆಗಳನ್ನು ನಡೆಸಿ ಸಂಧಾನ ಮಾರ್ಗದಲ್ಲಿ ಸಮಸ್ಯೆ ಪರಿಹರಿಸುವ ಉದ್ದೇಶ ನಮ್ಮ ಸರ್ಕಾರದ್ದಾಗಿದೆ.
ಇಂದು ದಿಡೀರ್ ಆಗಿ ಬಸ್ ಸಂಚಾರವನ್ನು ಕೆಲವೆಡೆ ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣ ಮುಷ್ಕರನಿರತ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಬೇಕು ಎಂದು ಮನವಿ ಮಾಡಿದ್ದಾರೆ.

ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಯವರೊಂದಿಗೆ ಒಕ್ಕೂಟದ ಮುಖಂಡರುಗಳ ಸಭೆಯನ್ನು ಏರ್ಪಡಿಸಿ ಶೀಘ್ರವೇ ಮುಂದಿನ ಮಾರ್ಗೋಪಾಯಗಳನ್ನು ನಿರೂಪಿಸಲಾಗುವುದು. ಕೋವಿಡ್‍ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು.
ಸಿಬ್ಬಂದಿಗಳಿಗೆ ಕೆಲಸಗಳನ್ನು ವಿಂಗಡಿಸುವಾಗ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಒಕ್ಕೂಟದ ಮುಖಂಡರು ಗಮನ ಸೆಳೆದಿದ್ದಾರೆ. ಆದ್ದರಿಂದ ಈ ರೀತಿಯ ಕಿರುಕುಳ ನೀಡುವ ಘಟನೆಗಳು ಮುಂದೆ ನಡೆದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ವಿಧಾನಮಂಡಲದ ಅಧಿವೇಶನದಲ್ಲಿ ನಾನು ಪಾಲ್ಗೊಂಡಿದ್ದರಿಂದ ಸಾರಿಗೆ ಅಧಿಕಾರಿಗಳನ್ನು ಕಳುಹಿಸಿ ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಕಾರ್ಮಿಕರ ಹಿತಾಸಕ್ತಿ ರಕ್ಷಿಸುವುದೇ ನನ್ನ ಪ್ರಥಮ ಆದ್ಯತೆಯೇ ಹೊರತು ನನಗೆ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಉದ್ಭವಿಸಿಲ್ಲ ಎಂಬುದನ್ನು ಪ್ರತಿಭಟನಾಕಾರರು ಗಮನಿಸಬೇಕು ಎಂದರು ತಿಳಿಸಿದ್ದಾರೆ.

ಸಾರಿಗೆ ಸಿಬ್ಬಂದಿಗಳ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಸಹ ಸಾರಿಗೆ ಸಿಬ್ಬಂದಿಗಳ ಸಂಬಳ ನೀಡಿಕೆಯ ಬಗ್ಗೆ ಅತ್ಯಂತ ಉದಾರವಾಗಿ ಬೇಡಿಕೆಗೆ ಸ್ಪಂದಿಸಿದ್ದನ್ನು ನಾನು ಸ್ಮರಿಸುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ಎ.ಐ.ಟಿ.ಯು.ಸಿ ಮುಖಂಡರಾದ ಶ್ರೀ ಅನಂತ ಸುಬ್ಬರಾವ್, ಸಿ.ಐ.ಟಿ.ಯು. ಮುಖಂಡರಾದ ಶ್ರೀ ಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಸಾರಿಗೆ ಆಯುಕ್ತರಾದ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here