ತುಮಕೂರಿನಲ್ಲಿ ನಾನು ಸೋತಿದ್ದು ಒಳ್ಳೆಯದೇ ಆಯಿತು. ಮತ್ತೆ ಕೆಚ್ಚೆದೆಯಿಂದ ಹೋರಾಡಿ ಪಕವನ್ನ್ಷು ಸಂಘಟನೆ ಮಾಡುತ್ತೇನೆ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನು ಯಾರನ್ನು ಹೊಣೆ ಮಾಡುವುದಿಲ್ಲ. ನನ್ನ ಸೋಲಿಸಿದ ಎಲ್ಲ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ. ಆದರೆ ನಾನು ಮಾತ್ರ ನನ್ನ ಹೋರಾಟ ಹಾದಿಯನ್ನು ಮುಂದುವರೆಸುವೆ ಎಂದು ದೇವೇಗೌಡರು ಗುಡುಗಿದ್ದಾರೆ.
ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶ ನಡೆಸಿತು. ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠರಾದ ದೇವೇಗೌಡರು, “ಸದ್ಯದ ಸಂದರ್ಭದಲ್ಲಿ ಯಾವಾಗ ಬೇಕಾದರು ಚುನಾವಣೆ ಎದುರಾಗಲಿದೆ. ನಾವು ಪಕ್ಷ ಸಂಘಟನೆ ಮಾಡಿ ಹೋರಾಟ ನಡೆಸಬೇಕಿದೆ. ನಮ್ಮ ಸರ್ಕಾರದ ಸಾಧನೆಯಾದ ಸಾಲಮನ್ನಾವನ್ನು ರಾಜ್ಯದ ಜನತೆಯ ಮನಸ್ಸಿಗೆ ಕೊಂಡೊಯ್ಯುವ ಶಕ್ತಿ ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ಇದೆ. ಹೀಗಾಗಿ ಕಾರ್ಯಕರ್ತರು ಆ ದೆಸೆಯಲ್ಲಿ ಕೆಲಸ ಮಾಡಬೇಕಿದೆ. ಕುಮಾರಸ್ವಾಮಿ ಸರ್ಕಾರ ಮಾಡಿದ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದು ದೇವೇಗೌಡರಿ ಕಾರ್ಯಕರ್ತರಿಗೆ ಕರೆ ನೀಡಿದರು.
ಇನ್ನು ಇದೇ ತಿಂಗಳಲ್ಲಿ ಮಹಿಳೆಯರ ಸಮಾವೇಶ ಮಾಡುತ್ತೇನೆ. ನಂತರ ಉತ್ತರ ಕರ್ನಾಟಕದಲ್ಲಿ ರೈತರ ಸಮಾವೇಶ ಮಾಡುವೆ. ಪಕ್ಷದಿಂದ ಯಾರು ಹೋದರು. ಯಾರು ಉಳಿದಿದ್ದಾರೆ ಎನ್ನುವ ಪ್ರಶ್ನೆ ಬೇಡ. ನನಗೆ ಶಕ್ತಿ ಇರುವವರಿಗೂ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಘೋಷಿಸಿದರು.
ಇನ್ನು ಈ ವೇಳೆ ಪಕ್ಷ ಸಂಘಟನೆ ಕುರಿತು ಮಾತನಾಡಿದ ವೈಎಸ್ವಿ ದತ್ತಾ, “ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದೇವೆ. ಅದರ ಪರಿಣಾಮವೇ ನಮ್ಮ ಪಕ್ಷ ಕುಸಿದಿದೆ. ಈ ಮಾತನ್ನ ಸ್ವತಃ ದೇವೇಗೌಡರೇ ನನ್ನ ಬಳಿ ಹೇಳಿದ್ದಾರೆ. ಹಾಗಾಗಿ ದೇವೇಗೌಡರ ಮಾರ್ಗದರ್ಶನದಲ್ಲಿ ಮತ್ತೆ ಪಕ್ಷ ಕಟ್ಟೋಣ. ಆ ಮೂಲಕ ರಾಜ್ಯದ ಏಕೈಕ ಪ್ರಾದೇಶಿಕ ಶಕ್ತಿ ಉಳಿಸೋಣ ಎಂದು ಕರೆ ನೀಡಿದರು.
ಇನ್ನು ನಮ್ಮ ಪಕ್ಷದ ಎಲ್ಲ ವಿಭಾಗದ ಘಟಕಗಳು ನಿಷ್ಕ್ರಿಯವಾಗಿದೆ. ಪಕ್ಷವನ್ನು ನಾವು ಸಂಘಟನೆ ಮಾಡಬೇಕಾದರೆ ನಾವೂ ಸದಸ್ಯತ್ವ ನೋಂದಣಿ ಮಾಡಬೇಕಿದೆ. ಪ್ರಾದೇಶಿಕ ಪಕ್ಷ ಬೇಕೇಬೇಕು ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿಸಬೇಕಿದೆ. ಆ ಮೂಲಕ ರಾಜ್ಯದ ಪ್ರಾದೇಶಿಕ ಶಕ್ತಿಯನ್ನು ಉಳಿಸಬೇಕು ಎಂದರು.
ಇನ್ನು ಪ್ರಾದೇಶಿಕ ಪಕ್ಷಕ್ಕೆ ಕುಟುಂಬ ರಾಜಕಾರಣ ಮಾಡುತ್ತಾರೆ ಎಂಬ ಆರೋಪಕ್ಕೆ ಒಳಗಾಗುತ್ತವೆ. ಒರಿಸ್ಸಾದಲ್ಲಿ ಬಿಜುಜನತಾ ದಳ, ತಮಿಳುನಾಡಿನಲ್ಲಿ ಡಿಎಂಕೆ ಪ್ರಾದೇಶಿಕ ಪಕ್ಷಗಳನ್ನು ನಾಯಕರ ಮಕ್ಕಳು ಮುಂದುವರೆಸಬೇಕಾಗಿ ಬಂತು. ಅದೇ ರೀತಿ ಪರಿಸ್ಥಿತಿ ರಾಜ್ಯದಲ್ಲಿ ಬಂತು ಇದರಲ್ಲಿ ವಿಶೇಷವೇನಿಲ್ಲ. ಇದನ್ನೇ ಕುಟುಂಬ ರಾಜಕಾರಣ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.