ವೇಶ್ಯಾವಾಟಿಕೆ ಆರೋಪದ ಮೇಲೆ ಅರೆಸ್ಟ್ ಆಗಿದ್ದ ನಟಿ ಯಮುನ ಕೇಸ್ ಏನಾಯ್ತು..? ನಿಜಕ್ಕೂ ಅವರು ತಪ್ಪು ಮಾಡಿದ್ರಾ..? ಈಗ ಅವರು ಹೇಗಿದ್ದಾರೆ…ಎಲ್ಲಿದ್ದಾರೆ..? ಎಲ್ಲಾ ಪ್ರಶ್ನೆಗೂ ಇಲ್ಲಿದೆ ಉತ್ತರ.
ಯಮುನ, ರವಿಚಂದ್ರನ್ ಜೊತೆ ‘ಚಿನ್ನ’, ಶಶಿಕುಮಾರ್ ಅಭಿನಯದ ‘ಹೆಂಡ್ತೀರೆ ಹುಷಾರ್’ ಹಾಗೂ ಶಿವರಾಜ್ಕುಮಾರ್ ಅವರೊಂದಿಗೆ ‘ಮೋಡದ ಮರೆಯಲ್ಲಿ’ ಸಿನಿಮಾಗಳಲ್ಲಿ ನಟಿಸಿದ್ದ ಚೆಲುವೆ. ಬಹಳ ವರ್ಷಗಳ ನಂತರ ‘ರಾಜರಥ’ ಸಿನಿಮಾದಲ್ಲಿ ಕೂಡಾ ಅವರು ನಟಿಸಿದ್ದರು. ಮತ್ತೆ ಅವರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
ಬೆಂಗಳೂರಲ್ಲೇ ಹುಟ್ಟಿ ಬೆಳೆದ ಯಮುನ ಮೊದಲ ಹೆಸರು ಪ್ರೇಮ. ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಯಮುನ ಇಷ್ಟಪಟ್ಟು ಚಿತ್ರರಂಗಕ್ಕೆ ಬಂದವರಲ್ಲ. ಅವರ ಅಕ್ಕ ಒಂದೆರಡು ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಯಮುನಾಗೆ ಆಗಲಿ ಅವರ ಕುಟುಂಬದವರಿಗಾಗಲಿ ಸಿನಿಮಾ ಹಿನ್ನೆಲೆ ಇಲ್ಲ. ತಾಯಿ ಹಾಗೂ ಅಕ್ಕನೊಂದಿಗೆ ಅವರು ಶೂಟಿಂಗ್ ಸೆಟ್ಗೆ ಹೋಗಿಬರುತ್ತಿದ್ದರು. ಆಗ ತಾನೆ ಎಸ್ಎಸ್ಎಲ್ಸಿ ಮುಗಿಸಿದ್ದ ಯಮುನ, ಸ್ನೇಹಿತರೊಬ್ಬರನ್ನು ನೋಡಲು ಹೋದಾಗ ಆಕೆಯನ್ನು ನೋಡಿದ ಸಿನಿಮಾದವರೊಬ್ಬರು ಅವರ ಫೋಟೋಗಳನ್ನು ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ಗೆ ಕಳಿಸಿದ್ದಾರೆ.
ಅಚಾನಕ್ ಆಗಿ ತನಗೆ ಬಂದ ಆಫರನ್ನು ಬೇಡ ಎಂದು ಹೇಳಲು ಹೋದ ಅವರಿಗೆ ಬಲವಂತವಾಗಿ ಮೇಕಪ್ ಕೂಡಾ ಮಾಡಿ ನಟಿಸಲು ಹೇಳಿದ್ದಾರೆ. ಅದು ಕೆ. ಬಾಲಚಂದರ್ ನಿರ್ದೇಶನದ ‘ಮನದಿಲ್ ಉರುದಿ ವೇಂಡುಂ’ ಎಂಬ ತಮಿಳು ಸಿನಿಮಾ. ಆ ಚಿತ್ರದಲ್ಲಿ ಖ್ಯಾತ ನಟಿ ಸುಹಾಸಿನಿ ತಂಗಿ ಪಾತ್ರದಲ್ಲಿ ಯಮುನ ನಟಿಸಿದ್ದರು. ಅಲ್ಲಿವರೆಗೂ ಪ್ರೇಮ ಆಗಿದ್ದವರಿಗೆ ಕೆ. ಬಾಲಚಂದರ್ ಯಮುನ ಎಂದು ಹೆಸರಿಟ್ಟರು. ಬೇಡ ಎನ್ನಲು ಬಂದವರು ಹೇಳಲು ಧೈರ್ಯ ಇಲ್ಲದೆ, ಇಷ್ಟ ಇಲ್ಲದೆ ಸಿನಿಮಾದಲ್ಲಿ ನಟಿಸಿದರು.
ತಮಿಳು ಸಿನಿಮಾ ಬಿಡುಗಡೆಯಾಗಿದ್ದೇ ತಡ, ತೆಲುಗು ಸಿನಿಮಾವೊಂದಕ್ಕೆ ಯಮುನಾಗೆ ಆಫರ್ ಬಂತು. ‘ಮೌನ ಪೋರಾಟಂ’ ಅವರು ನಟಿಸಿದ ಮೊದಲ ತೆಲುಗು ಸಿನಿಮಾ. ಅದೃಷ್ಟ ಎಂಬಂತೆ ಆ ಸಿನಿಮಾ ಸೂಪರ್ ಹಿಟ್ ಆಯ್ತು. ಯಮುನಾಗೆ ಒಳ್ಳೆ ಹೆಸರು ಕೂಡಾ ಬಂತು. ಅಲ್ಲಿಂದ ಅವರ ಲಕ್ ಬದಲಾಯಿತು. ಇಷ್ಟವಿಲ್ಲದೆ ಆಕಸ್ಮಿಕವಾಗಿ ಸಿನಿಮಾ ಇಂಡಸ್ಟ್ರಿಗೆ ಬಂದ ಯಮುನ ಹಣ, ಹೆಸರು ಎರಡನ್ನೂ ಸಂಪಾದಿಸಿದರು. ಲಕ್ಷಾಂತರ ಅಭಿಮಾನಿಗಳು ಕೂಡಾ ದೊರೆತರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1996 ರಲ್ಲಿ ಯಮುನ ಉದ್ಯಮಿಯೊಬ್ಬರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಇಷ್ಟೆಲ್ಲಾ ಖ್ಯಾತರಾಗಿದ್ದು ಸಿನಿಮಾ, ಪತಿ, ಮಕ್ಕಳು ಮನೆ ಎಂದು ನೆಮ್ಮದಿಯಿಂದ ಇದ್ದ ಯಮುನ ದುರಾದೃಷ್ಟ ಎಂಬಂತೆ ಮಾಡಿಲ್ಲದ ತಪ್ಪಿಗಾಗಿ ಕೇಸ್ ಒಂದರಲ್ಲಿ ಸಿಲುಕಿದರು. ‘ಖ್ಯಾತ ನಟಿ ಯಮುನ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ’ ಎಂಬ ಬ್ರೇಕಿಂಗ್ ಸುದ್ದಿ 2011 ರಲ್ಲಿ ಎಲ್ಲಾ ಮೀಡಿಯಾಗಳಲ್ಲಿ ಪ್ರಸಾರವಾಯ್ತು. ಜನರು ಈ ಸುದ್ದಿಗೆ ಮತ್ತಷ್ಟು ಬಣ್ಣ ಹಚ್ಚಿ ಮಾತನಾಡಲು ಶುರು ಮಾಡಿದರು. ಈ ಸುದ್ದಿ ಹೊರಬರುತ್ತಿದ್ದಂತೆ ಎಲ್ಲರೂ ಶಾಕ್ನಲ್ಲಿದ್ದರು.
ಯಮುನ ನಿಜಕ್ಕೂ ಹೀಗೆ ಮಾಡಲು ಸಾಧ್ಯವೇ..? ಶೂಟಿಂಗ್ ವೇಳೆ ಯಾರೊಂದಿಗೆ ಕೂಡಾ ಅಸಭ್ಯವಾಗಿ ವರ್ತಿಸದೆ ಇರುವ ಯಮುನ ಹೀಗೆಲ್ಲಾ ಮಾಡಲು ಹೇಗೆ ಸಾಧ್ಯ..? ಅವರ ಪತಿ ಕೂಡಾ ಒಳ್ಳೆ ವ್ಯಕ್ತಿ. ಶೂಟಿಂಗ್ ಸಮಯದಲ್ಲಿ ಅವರೂ ಜೊತೆ ಇದ್ದು ಪ್ರೋತ್ಸಾಹ ನೀಡುತ್ತಿದ್ದರು, ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ಬ್ಯುಸಿ ಇದ್ದು ಕೈತುಂಬಾ ಸಂಭಾವನೆ ಪಡೆಯುತ್ತಿದ್ದ ನಟಿ ಹಣಕ್ಕಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಎಂದರೆ ಯಾರಿಂದಲೂ ನಂಬಲು ಸಾಧ್ಯವಾಗಲಿಲ್ಲ.
ತಾನು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ತೋರಿಸಲು ಯಮುನ ಕೋರ್ಟಿನಲ್ಲಿ ಹೋರಾಡಿದರು. ಕನ್ನಡದ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿಯ ಎಷ್ಟೋ ನಟ-ನಟಿಯರು ಯಮುನ ಪರವಾಗಿ ಮಾತನಾಡಿದರು. ತನ್ನ ಮೇಲಿನ ಇಂತ ಸುಳ್ಳು ಆರೋಪಕ್ಕೆ ನೊಂದು ಯಮುನ ಮಾನಸಿಕವಾಗಿ ಕುಗ್ಗಿ ಹೋದರು. ಸ್ಕೂಲ್ಗೆ ಹೋಗುತ್ತಿದ್ದ ಅವರ ಹೆಣ್ಣುಮಕ್ಕಳ ಬಗ್ಗೆ ಕೂಡಾ ಕೆಲವರು ಮಾತನಾಡತೊಡಗಿದರು. ಅದೇ ಸಮಯಕ್ಕೆ ಯಮುನ ತಂದೆ ಕೂಡಾ ನಿಧನರಾದರು.
ಹೊರಗೆ ಹೋದರೆ ಜನರ ಚುಚ್ಚುನುಡಿ, ಮನೆಯಲ್ಲಿದ್ದರೆ ಡಿಪ್ರೆಶನ್. ನೋವಿನ ಮೇಲೆ ನೋವು ತಿನ್ನುತ್ತಿದ್ದ ಯಮುನ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು. ಆಸ್ತಿ ಎಲ್ಲವನ್ನೂ ಮಕ್ಕಳು ಹಾಗೂ ಪತಿ ಹೆಸರಿಗೆ ಮಾಡಿ, ಮನಸ್ಸಿನಲ್ಲಿ ಇದ್ದದ್ದನ್ನು ಒಂದು ಡೈರಿಯಲ್ಲಿ ಬರೆದಿಟ್ಟರು. ಆದರೆ ಈ ವಿಚಾರ ಹೇಗೋ ಸ್ನೇಹಿತೆಗೆ ತಿಳಿದು ಆಕೆ ಯಮುನ ಮನಸ್ಸು ಬದಲಿಸಿದರು. ಪತಿ, ಕುಟುಂಬ, ಸ್ನೇಹಿತರು ಅವರ ಜೊತೆ ನಿಂತು ಧೈರ್ಯ ಹೇಳಿದರು.
2015 ಜೂನ್ 30 ರಂದು ಕೋರ್ಟಿನಿಂದ ಯಮುನ ಪರವಾಗಿ ತೀರ್ಪು ಹೊರಬಿತ್ತು. ಅಷ್ಟಕ್ಕೂ ಆಕೆಯನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾದ ಆ ಹೋಟೆಲ್ನಲ್ಲಿ ಯಮುನ ಇರಲೇ ಇಲ್ಲ. ಆಕೆ ತಪ್ಪು ಮಾಡಿದ್ದಾರೆ ಎಂಬುದಕ್ಕೆ ಎಳ್ಳಷ್ಟೂ ಸಾಕ್ಷಿ ಇಲ್ಲ, ಯಮುನ ಏಳಿಗೆ ಸಹಿಸಲಾರದೆ ಕೆಲವರು ಆಕೆಗೆ ಕೆಟ್ಟ ಹೆಸರು ತರುವ ಸಲುವಾಗಿ ಮಾಸ್ಟರ್ ಪ್ಲ್ಯಾನ್ ಮಾಡಿ ಆಕೆ ಈ ಕೇಸ್ನಲ್ಲಿ ಸಿಲುಕುವ ಹಾಗೆ ಮಾಡಿದ್ದಾರೆ. ಇದೊಂದು ಫಾಲ್ಸ್ ಕೇಸ್ ಎಂಬುದು ಸಾಬೀತಾಯಿತು. ಆಕೆಯ ಮೇಲಿದ್ದ ಪ್ರಕರಣವನ್ನು ಖುಲಾಸೆಗೊಳಿಸಲಾಯ್ತು. ಎಲ್ಲಾ ವಿಷಯವನ್ನು ಯಮುನ ವಿಡಿಯೋ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದರು. ತನ್ನದಲ್ಲದ ತಪ್ಪಿಗೆ ನರಕ ಯಾತನೆ ಅನುಭವಿಸಿದ ಯಮುನ ಸ್ಥಿತಿ ಕಂಡು ಎಲ್ಲರೂ ಮರುಗಿದರು.
ಆದರೆ ಈ ಘಟನೆಯಿಂದ ನಾನು ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದೇನೆ ಎನ್ನುತ್ತಾರೆ ಯಮುನ. ಇತ್ತೀಚೆಗೆ ತೆಲುಗು ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಎಲ್ಲಾ ವಿಷಯವನ್ನು ಯಮುನ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಸದ್ಯಕ್ಕೆ ಯಮುನ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಈಟಿವಿ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಎರಡು ಧಾರಾವಾಹಿಗಳಲ್ಲಿ ಅವರು ಬ್ಯುಸಿ ಇದ್ದಾರೆ. ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಮತ್ತೆ ಕನ್ನಡಲ್ಲಿ ನಟಿಸುತ್ತಾರಂತೆ. ಒಟ್ಟಿನಲ್ಲಿ ಯಮುನ ಪರವಾಗಿ ತೀರ್ಪು ಬಂದದ್ದು ಖುಷಿಯ ವಿಚಾರ. ಎಲ್ಲಾ ಕಷ್ಟಗಳನ್ನು ಕಳೆದು ಮತ್ತೆ ನಟನೆಗೆ ವಾಪಸಾಗಿರುವುದು ಅಭಿಮಾನಿಗಳಿಗೂ ಖುಷಿ ನೀಡಿದೆ.