ಸುಧಾ ಮೂರ್ತಿ ಅವರ ಬಗ್ಗೆ ನಿಮಗೆಷ್ಟು ಗೊತ್ತು ??

0
350

ಕರ್ನಾಟಕದ ಈಗಿನ ಮಹಿಳೆಯರಲ್ಲಿ ಅತ್ಯಂತ ಹೆಚ್ಚಿನ ಜನಪ್ರಿಯತೆ, ಗೌರವ ಮತ್ತು ಸಮಾಜ ಸೇವಾ ಕೆಲಸಗಳಲ್ಲಿ ಮಹತ್ವ ಪಡೆದಿರುವ ಹೆಸರು. ಜೊತೆಗೆ ಸರಳತೆಯಿಂದಲೂ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಶ್ರೀಮಂತಿಕೆಯನ್ನು ಕಾರು ಬಟ್ಟೆ ಒಡವೆಗಳಲ್ಲಿ ಪ್ರದರ್ಶಿಸುವ ಇಂದಿನ ದಿನಗಳಲ್ಲಿ, ಅಪಾರ ಹಣವಿದ್ದರೂ ಅದನ್ನು ಉಡುಗೆಗಳಲ್ಲಿ ತೋರ್ಪಡಿಸದ, ಅವರ ಸರಳತೆ ಜನರಲ್ಲಿ ಅವರ ಬಗ್ಗೆ ಅಭಿಮಾನ ಮೂಡಿಸಿದೆ.

ಈಗಾಗಲೇ ಅವರ ಸಾಧನೆ, ಸಾಹಿತ್ಯ ಮತ್ತು ಇತರ ಚಟುವಟಿಕೆಗಳನ್ನು ಮಾಧ್ಯಮಗಳು ಸಾಕಷ್ಟು ಪ್ರಚಾರ ಮಾಡಿವೆ. ಅದರ ಬಗ್ಗೆ ಇಲ್ಲಿ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ.

ಭಾರತದ ಶ್ರೀಮಂತ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಅವರ ಪತ್ನಿಯಾಗಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾಗಿ ತಮ್ಮ ಮಾತು ಮತ್ತು ನಡವಳಿಕೆಯಿಂದ ಬಹುತೇಕ ಕನ್ನಡ ನಾಡಿನ ಜನರಿಗೆ ಚಿರಪರಿಚಿತರಾಗಿದ್ದಾರೆ. ತಮಗೆ ಒಲಿದು ಬಂದ ಆರ್ಥಿಕ ಹರಿವನ್ನು ಈ ಸಮಾಜದ ಅನೇಕ ಸಂಕಷ್ಟಗಳಿಗೆ ಒಂದಷ್ಟು ದಾನ ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿ ಅವರ ತೂಕದ ವ್ಯಕ್ತಿತ್ವ ಬಹಳ ಜನರನ್ನು ಆಕರ್ಷಿಸುತ್ತಿದೆ.

ಅದರಿಂದಾಗಿಯೇ ಈ ಸಂದರ್ಭದಲ್ಲಿ ಈ ಸಮಾಜ ಕೇವಲ ಆರ್ಥಿಕ ಸಂಕಷ್ಟ ಮಾತ್ರವಲ್ಲದೆ ಸಾಮಾಜಿಕ ಅನಾರೋಗ್ಯದಿಂದ ಬಳಲುತ್ತಿದೆ. ಯಾರೋ ರಾಜಕಾರಣಿಗಳೋ, ಧಾರ್ಮಿಕ ಮುಖಂಡರೋ, ಬುದ್ದಿಜೀವಿಗಳೋ, ಸಿನಿಮಾ ತಾರೆಗಳೋ ಹೇಳುವ ಮಾತು ಪ್ರವಚನಗಳಿಗಿಂತ ಸುಧಾ ಮೂರ್ತಿಯವರು ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಮಾತನಾಡಿದರೆ ಸಮಾಜದ ಸಾಮರಸ್ಯಕ್ಕೆ ಸಹಾಯವಾಗುತ್ತದೆ ಎಂಬ ನಿರೀಕ್ಷೆಯಿಂದ ಈ ಮನವಿ.

ನಮ್ಮ ಸಮಾಜದ ಬೆಳವಣಿಗೆಯ ಬಹುದೊಡ್ಡ ಶತ್ರು ಜಾತಿ ಎಂಬ ಪೆಡಂಭೂತ. ಅದರಿಂದಾಗಿಯೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಚುನಾವಣಾ ಅಕ್ರಮ ಮುಂತಾದ ಎಲ್ಲಾ ಕೆಡುಕುಗಳು ಸಂಭವಿಸುತ್ತಿದೆ. ಅದಕ್ಕೆ ಮೂಲ ಕಾರಣವೇ ಜಾತಿ ವ್ಯವಸ್ಥೆ. ಅದರ ವಿರುದ್ಧ ಅವರು ಮಾತನಾಡಬೇಕಿದೆ.ಜಾತಿ ವ್ಯವಸ್ಥೆ ಭಾರತದ ಅಭಿವೃದ್ಧಿಗೆ ಶಾಪದಂತೆ ಕಾಡುತ್ತಿದೆ. ಜಾತಿಯ ನಿರ್ಮೂಲನೆ ಮಾಡಿದರೆ ಅಥವಾ ಜಾತಿಯ ಮೇಲು ಕೀಳು ಅಥವಾ ಅಭಿಮಾನ ಕಡಿಮೆ ಮಾಡಿದರೆ ಅದರ ಪರೋಕ್ಷ ಪರಿಣಾಮದಿಂದ ಸಮಾಜದ ಆರೋಗ್ಯ ಸುಧಾರಿಸುತ್ತದೆ. ಈ ವಿಷಯದಲ್ಲಿ ಅವರ ಮಾತಿಗೆ ಒಂದಷ್ಟು ಬೆಲೆ ಸಿಗುತ್ತದೆ.

ಸುಧಾ ಮೂರ್ತಿ ಯವರು ಹಿರಿಯರು, ಅನುಭವಿಗಳು, ಸೌಮ್ಯ ಸ್ವಭಾವದವರು, ವಿವಾದಗಳಿಂದ ದೂರ ಇರುವರು. ಅವರ ಮಾತುಗಳು ಜನರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸುತ್ತದೆ. ಅದನ್ನು ಉಪಯೋಗಿಸಿಕೊಂಡು ಈ ಸಮಾಜದ ಮೂಡ ನಂಬಿಕೆಗಳನ್ನು ಅವರು ಖಂಡಿಸಬೇಕು. ಜನರಿಗೆ ಅಪಾಯಕಾರಿಯಾದ, ಸುಲಭವಾಗಿ ಶೋಷಣೆಗೆ ಒಳಪಡುತ್ತಿರುವ ವಿಷಯಗಳನ್ನು ಹೇಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಅಜ್ಞಾನದ ಕಾರಣಕ್ಕಾಗಿ ಬಡತನದಲ್ಲಿ ಇರುವವರಿಗೆ ನೀಡುವ ಆರ್ಥಿಕ ಸಹಾಯ ಒಂದು ತೂಕದ್ದಾದರೆ ಇಡೀ ಸಮಾಜದ ಅಜ್ಞಾನವನ್ನು ಹೋಗಲಾಡಿಸಲು ಪ್ರಯತ್ನಿಸುವುದು ಇನ್ನೂ ಹೆಚ್ಚು ಸಾರ್ಥಕತೆಯನ್ನು ಪಡೆಯುತ್ತದೆ. ಆರ್ಥಿಕ ಸಹಾಯ ತಾತ್ಕಾಲಿಕ. ವೈಚಾರಿಕ ಪ್ರಜ್ಞೆ ಮೂಡಿಸುವುದು ಶಾಶ್ವತ ಸಹಾಯ. ಇದು ಮನುಷ್ಯನ ವ್ಯಕ್ತಿತ್ವ ಮತ್ತು ಆ ಮುಖಾಂತರ ಜನರ ಜೀವನಮಟ್ಟವನ್ನೇ ಮೇಲ್ದರ್ಜೆಗೇರಿಸುತ್ತದೆ.

ರಾಜಕಾರಣಿಗಳಿಗಿಂತ ಹೆಚ್ಚಾಗಿ ಜನರನ್ನು ಇಂದು ಮಾನಸಿಕವಾಗಿ ಭ್ರಷ್ಟರನ್ನಾಗಿ ಮಾಡುತ್ತಿರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳು. ಅನೇಕರಿಗೆ ಪ್ರಚಾರದ ಹುಚ್ಚು, ತಮ್ಮ ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದಾಗಿ ಚಿತ್ರಿಸಿ ತಮ್ಮ ತೇಜೋವಧೆ ಮಾಡಬಹುದೆಂಬ ಭಯದಿಂದ ಮಾಧ್ಯಮಗಳ ವಿರುದ್ಧ ಯಾರೂ ಹೆಚ್ಚು ಮಾತನಾಡುತ್ತಿಲ್ಲ. ಹೆಚ್ಚು ಕಡಿಮೆ ಕ್ಲೀನ್ ಇಮೇಜ್ ಹೊಂದಿರುವ ಸುಧಾಮೂರ್ತಿಯವರು ಮಾಧ್ಯಮಗಳ ಹುಚ್ಚಾಟ, ಉಡಾಫೆ, ಸಮಾಜ ವಿರೋಧಿ ಸುದ್ದಿಗಳ ವಿಜೃಂಭಣೆಯ ಬಗ್ಗೆ ಧ್ವನಿ ಎತ್ತಿದರೆ ಅದಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಜನರು ಸಹ ಅವರ ಮಾತುಗಳ ಬಗ್ಗೆ ಒಂದಷ್ಟು ಗಂಭೀರವಾಗಿ ಚಿಂತಿಸುತ್ತಾರೆ. ಇಲ್ಲದಿದ್ದರೆ ಈ ಮಾಧ್ಯಮಗಳು ಸಾಮಾನ್ಯ ಜನರ ಚಿಂತನಾ ಶಕ್ತಿಯನ್ನೇ ಹಾಳು ಮಾಡುತ್ತಾರೆ.ಮುಂದೆ ಅದನ್ನು ಸರಿಪಡಿಸುವುದು ಕಷ್ಟ.

ಮುಖ್ಯವಾಗಿ, ಆಹಾರವನ್ನು ವ್ಯರ್ಥ ಮಾಡುವುದು, ಆಹಾರದ ಕಲಬೆರಕೆ, ವೈದ್ಯಕೀಯ ಮಾಫಿಯಾಗಳು ಜನರನ್ನು ದಿನನಿತ್ಯ ನರಕಕ್ಕೆ ತಳ್ಳುತ್ತಿವೆ. ಅತಿ ಶ್ರೀಮಂತರನ್ನು ಹೊರತುಪಡಿಸಿ ಇತರ ‌ಎಲ್ಲಾ ವರ್ಗದವರು ಇದರಿಂದ ತುಂಬಾ ತುಂಬಾ ಕಷ್ಟ ಪಡುತ್ತಿದ್ದಾರೆ. ಎಲ್ಲೋ ಕೆಲವರಿಗೆ ಇದರ ಅರಿವಿದ್ದರೆ ಬಹುತೇಕರಿಗೆ ಇದರ ಬಗ್ಗೆ ಅರಿವೇ ಇಲ್ಲ. ಎಲ್ಲಾ ನಮ್ಮ ಕರ್ಮಫಲ ಎಂದು ಅನುಭವಿಸುತ್ತಿದ್ದಾರೆ.

ಸಾಮಾನ್ಯ ಜನರಿಗಿಂತ ಈಗಾಗಲೇ ಸಮಾಜದಲ್ಲಿ ಹೆಚ್ಚು ಜನಪ್ರಿಯರಾದವರು ಇದರ ಬಗ್ಗೆ ಧ್ವನಿ ಎತ್ತಿದರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ.

ಮೇಲೆ ಪ್ರಸ್ತಾಪಿಸಿರುವ ಯಾವ ವಿಷಯಗಳು ಸಹ ಯಾವುದೇ ಜಾತಿ ಧರ್ಮ ಪಕ್ಷ ಅಥವಾ ವಿವಾದಾತ್ಮಕ ವಿಷಯಗಳ ಅಡಿಯಲ್ಲಿ ಬರುವುದಿಲ್ಲ. ಒಂದಷ್ಟು ಸಾಂಪ್ರದಾಯಿಕ ಮತ್ತು ವೈಚಾರಿಕ ಪ್ರಜ್ಞೆಯಿಂದ ಜನರ ಜೀವನಮಟ್ಟ ಸುಧಾರಿಸಬಹುದಾದ ವಿಷಯಗಳು.

ಬಡವರಿಗೆ ಸಹಾಯ ಮಾಡುವುದಕ್ಕಿಂತ ಬಡತನವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುವುದು ಸಹ ಅಷ್ಟೇ ಮುಖ್ಯ. ಬಡತನ ನಿರ್ಮೂಲನೆ ಆಗಬೇಕಾದರೆ ವ್ಯಕ್ತಿಗಳ ಮತ್ತು ಸಮಾಜದ ಒಟ್ಟು ಮಾನಸಿಕ ಸ್ಥಿತಿಯನ್ನು ಬದಲಿಸಬೇಕಿದೆ.

ಕೊನೆಯದಾಗಿ, ತಾವು ಏನು ಮಾಡಬೇಕು, ಏನು ಮಾಡಬಾರದು, ತಮ್ಮ ಇತಿಮಿತಿಗಳೇನು ಎಂಬ ಎಲ್ಲಾ ಸ್ವಾತಂತ್ರ್ಯ ಸುಧಾ ಮೂರ್ತಿ ಅವರಿಗೆ ಇರುತ್ತದೆ. ಅದರಲ್ಲಿ ಮೂರನೆಯವರು ಮೂಗು ತೂರಿಸಬಾರದು ಎಂಬ ಅರಿವಿದ್ದರೂ ಈ ಸಮಾಜದಲ್ಲಿ ಈಗಾಗಲೇ ಒಂದು ಗೌರವಯುತ ಸ್ಥಾನ ಪಡೆದಿರುವವರು ಇನ್ನೊಂದಿಷ್ಟು ಸಮಾಜದ ಬದಲಾವಣೆಗೆ ಪ್ರಯತ್ನಿಸಲಿ ಎಂಬ ಆಶಯ ಮಾತ್ರ ಈ ಲೇಖನದ ಉದ್ದೇಶ.

ಸುಧಾ ಮೂರ್ತಿ ಯವರ ಹೆಸರು ಇಲ್ಲಿ ಒಂದು ಸಾಂಕೇತಿಕ. ಅವರಷ್ಟೇ ಪ್ರಾಮುಖ್ಯತೆ ಪಡೆದ ಮಹತ್ವದ ವ್ಯಕ್ತಿಗಳು ಈ ಸಮಾಜದಲ್ಲಿ ಇದ್ದಾರೆ. ಅವರೆಲ್ಲರೂ ಈ ಬಗ್ಗೆ ಯೋಚಿಸಲಿ ಎಂಬುದು ನಮ್ಮ ಅಪೇಕ್ಷೆ..

LEAVE A REPLY

Please enter your comment!
Please enter your name here