ಅರುಣ್ ಜೇಟ್ಲಿ ನಿಜ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು ..?

0
236

ಬಾಲ್ಯ ಜೀವನ:- ಅರುಣ್ ಜೇಟ್ಲಿ 1957 ಡಿಸೆಂಬರ್​​​​ 28 ರಂದು ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ಎಂಬ ದಂಪತಿಗೆ ದೆಹಲಿಯಲ್ಲಿ ಜನಿಸಿದರು. ಇವರ ತಂದೆ ವಕೀಲರಾಗಿದ್ದರು. ಜೇಟ್ಲಿ 1969-70ನೇ ವರ್ಷದ ಅವಧಿಯಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಬಳಿಕ 1973ರಲ್ಲಿ ಇಲ್ಲಿನ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್​​ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ದಿ ಲಾ ಎಂಬಲ್ಲಿ ಕಾನೂನು ಪದವಿ ಪಡೆದರು. ತಮ್ಮ ವಿದ್ಯಾರ್ಥಿ ಜೀವನದಲ್ಲೇ ವಿದ್ಯಾಭ್ಯಾಸದ ಮೂಲಕ ಉತ್ತಮ ಮಟ್ಟದ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗಳಿಸಿದ್ದರು.

ವೈಯಕ್ತಿಕ ಜೀವನ:- ಜೇಟ್ಲಿಯವರು 1982ರಲ್ಲಿ ಸಂಗೀತಾ ಜೇಟ್ಲಿಯವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ರಾಜಕೀಯ ಜೀವನ:- ವಿದ್ಯಾರ್ಥಿ ಸಂಘದ ನಾಯಕನಾಗಿ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭವಾಯ್ತು. ಎಪ್ಪತ್ತರ ದಶಕದಲ್ಲೇ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ‌ಬಿವಿಪಿ) ನಾಯಕನಾಗಿದ್ದರು. ಬಳಿಕ 1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು.

ಇನ್ನು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು. 1973ರಲ್ಲಿ ರಾಜ್ ನರೇನ್ ಹಾಗೂ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಜಯ ಪ್ರಕಾಶ್ ನಾರಾಯಣ್ ಅವರೇ, ಇವರನ್ನು ವಿದ್ಯಾರ್ಥಿಗಳ ರಾಷ್ಟೀಯ ಸಮಿತಿ ಸಂಯೋಜಕರನ್ನಾಗಿ ನೇಮಕಗೊಳಿಸಿದರು. ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರೀಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪಿಯುಸಿಎಲ್ ಬುಲೆಟಿನ್ ಹೊರತಂದರು. ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿದರು.

ಕಾನೂನು ವೃತ್ತಿ:- 1977ರಿಂದ ವಕೀಲ ವೃತ್ತಿ ಆರಂಭಿಸಿದರು. ದೇಶದ ಹಲವಾರು ಹೈಕೋರ್ಟ್‌ ಸೇರಿದಂತೆ ಸುಪ್ರೀಂಕೋರ್ಟ್​​ನಲ್ಲಿಯೂ ವಕೀಲ ವೃತ್ತಿ ಮಾಡಿದರು. 1989ರಲ್ಲಿ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರನ್ನು ಅಡಿಷನಲ್ ಸಾಲಿಸಿಟರ್ ಜನರಲ್ ಆಗಿ ನೇಮಕ ಮಾಡಲಾಯಿತು. ಅವರು ಬೋಫೋರ್ಸ್ ಹಗರಣದ ಎಲ್ಲಾ ಕಾಗದ ವ್ಯವಹಾರಗಳ ಕೆಲಸವನ್ನು ಮಾಡಿದರು. ಜನತಾ ದಳದ ಶರದ್ ಯಾದವ್​​ರಿಂದ ಹಿಡಿದು, ಕಾಂಗ್ರೆಸ್‌ನ ಮಾಧವ್‌ರಾವ್ ಸಿಂಧ್ಯಾ, ಬಿಜೆಪಿಯ ಎಲ್.ಕೆ. ಅಡ್ವಾಣಿಯವರವರೆಗೂ ಇವರು ವಕೀಲರಾಗಿದ್ದರು ಎಂಬುದು ಗಮನಾರ್ಹ.

ಇವರು ಕಾನೂನು ಹಾಗೂ ಪ್ರಸಕ್ತ ವ್ಯವಹಾರಗಳ ಬಗ್ಗೆ ಹಲವಾರು ಪುಸ್ತಕಗಳು ಬರೆದು ಪ್ರಕಟಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ “ಭಾರತದಲ್ಲಿ ಅಪರಾಧಗಳು” ಎಂಬ ವಿಷಯಾಧಾರಿತ ಪತ್ರಗಳನ್ನು ಇಂಡೋ-ಬ್ರಿಟಿಷ್ ಲೀಗಲ್ ಫೋರಂ ಎದುರಿಗೆ ಮಂಡಿಸಿದರು. ಜೂನ್​​ 1998ರಲ್ಲಿ ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ಹಗರಣಗಳ ಸಂಬಂಧ ನಡೆದ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

ಆರ್​ಎಸ್​​ಎಸ್​​ ನಂಟು: ಅರುಣ್ ಜೇಟ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯ ಸದಸ್ಯರಾಗಿದ್ದರು. 1999ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪಕ್ಷದ ವಕ್ತಾರರಾದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ ಜೇಟ್ಲಿ ನೇಮಕಗೊಂಡರು.

ಬಳಿಕ ಜೇಟ್ಲಿಯವರು 2000ರಲ್ಲಿ ಜುಲೈ 23ರಂದು ಕಾನೂನು ಮಂತ್ರಿಯಾಗಿದ್ದರು. ಹಾಗೆಯೇ, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆ ವಹಿಸಿಕೊಂಡು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಂಡರು. 2003 ಜನವರಿ 9ರಂದು ಮತ್ತೊಮ್ಮೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾಗಿದ್ದರು.

ಚುನಾವಣಾ ಉಸ್ತುವಾರಿ:- 2002ರ ಗುಜರಾತ್‌‌ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹಾಯ ಮಾಡಿದರು. ಈ ಚುನಾವಣೆಯಲ್ಲಿ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 126 ಗೆದ್ದಿತ್ತು. ಬಳಿಕ ಇಲ್ಲಿಂದಲೇ ಜೇಟ್ಲಿ ರಾಜ್ಯಸಭೆಗೆ ಆಯ್ಕೆಯಾದರು. 2007ರಲ್ಲಿ ಕಾಂಗ್ರೆಸ್​ ವಿರೋಧಿ ಚಳುವಳಿ ಕಟ್ಟುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಿದರು.

ಈ ಮುನ್ನವೇ 2003ರಲ್ಲಿ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯ ಉಸ್ತುವಾರಿ ಜೇಟ್ಲಿ ಹೊತ್ತುಕೊಂಡಿದ್ದರು. ಉಮಾ ಭಾರತಿಯವರ ಜೊತೆಗೂಡಿ ಈ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 230 ಸ್ಥಾನಗಳಲ್ಲಿ 173 ಸೀಟು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಬೆನ್ನಲ್ಲೇ 2004ರಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ವಿಶೇಷ ಉಸ್ತುವಾರಿ ನೀಡಲಾಗಿತ್ತು. ಇಲ್ಲಿಯೂ ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಉತ್ತಮ ಸ್ಥಾನಗಳಿಸಲು ಸಹಾಯ ಮಾಡಿದ್ದರು.

ಒಟ್ಟಿನಲ್ಲಿ ಬಿಜೆಪಿಯ ಸದಸ್ಯರಾಗಿ ರಾಜಕೀಯ ಜೀವ ಶುರು ಮಾಡಿದ ಇವರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದರು. ಅಲ್ಲದೇ ಭಾರತ ಸರ್ಕಾರದಲ್ಲಿ ವಾಣಿಜ್ಯ, ಕೈಗಾರಿಕೆ, ಕಾನೂನು ಹಾಗೂ ನ್ಯಾಯಾಂಗದ ಯೂನಿಯನ್ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here