ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಈ ಒಂದು `ಕೊಡುಗೆ’ ಕನ್ನಡಿಗರು ಮರೆಯಲು ಹೇಗೆ ಸಾಧ್ಯ??

0
295

ಕನ್ನಡ ಭಾಷೆ, ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡು ಅಲ್ಪ ಸಮಯದಲ್ಲೇ ಕನ್ನಡಿಗರ ಮನ ಗೆದ್ದು, ಇಂದು ಕನ್ನಡ ಚಿತ್ರರಸಿಕರ ಮನಸ್ಸಿನಲ್ಲಿ ಅಚ್ಚೆಯಾಗಿ ಉಳಿದುಕೊಂಡಿರುವ ಸಾಂಗ್ಲಿಯಾನ, ಅಭಿಮಾನಿಗಳ ವಜ್ರ ಮುಷ್ಟಿ, ಆಟೋ ಚಾಲಕರ ನೆಚ್ಚಿನ ಆಟೋ ಶಂಕರ್, ಕರಾಟೆ ಕಿಂಗ್ ಶಂಕರ್ ನಾಗ್ ಅವರು ಯಾರಿಗೆ ಗೊತ್ತಿಲ್ಲ ಹೇಳಿ.?

 

 

ಶಂಕರ್ ನಾಗ್ ಅವರ ಹೆಸರು ಕೇಳಿದರೆ ಸಾಕು ಇಂದಿಗೂ ಕೂಡ ಅಭಿಮಾನಿಗಳಲ್ಲಿ, ಚಿತ್ರರಸಿಕರಲ್ಲಿ ಅದೆನೋ ಒಂದು ಖುಷಿ, ಉತ್ಸಾಹವಿರುತ್ತದೆ. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದ ಪ್ರತಿಯೊಂದು ಚಿತ್ರಗಳಲ್ಲಿ ತಮ್ಮದೇ ಆದ ನಟನಾ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಆಯಾ ಪಾತ್ರಗಳಿಗೆ ಜೀವ ತುಂಬುತ್ತಿದ್ದವರು. ಶಂಕರ್ ನಾಗ್ ಅವರು ನವೆಂಬರ್ 09 1954 ರಂದು ಹೊನ್ನಾವಾರ ತಾಲೂಕು, ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಹುಟ್ಟಿದ್ದು, ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಮುನ್ನ ಒಬ್ಬ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

 

 

ನಂತರದ ದಿನಗಳಲ್ಲಿ ಚಿತ್ರರಂಗದ ಕಡೆ ಒಲವು ಮೂಡಿಸಿಕೊಂಡ ಶಂಕರ್ ನಾಗ್ ಅವರು ಚಿತ್ರರಂಗಕ್ಕೆ ಹೋಗಬೇಕು ಎಂದರೆ ಒಂದಿಷ್ಟು ಕೌಶಲ್ಯಗಳನ್ನು ತರಬೇತಿ ಪಡೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಅವರು ಕೊಳಲು, ತಬಲ, ಹಾರ್ಮೋನಿಯಮ್ ಸೇರಿದಂತೆ ಸಿನಿಮಾಗೆ ಬೇಕಾದ ಕೆಲವೊಂದು ಮುಖ್ಯ ಅಂಶಗಳನ್ನು ತರಬೇತಿ ಪಡೆದಿದ್ದರು.

 

 

ಕನ್ನಡ ಚಿತ್ರರಂಗದಲ್ಲಿ ಅವರು ನಾಯಕ ನಟನಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಚಿತ್ರಕಥೆಯ ರಚನೆಕಾರರಾಗಿ ಕೆಲಸ ಮಾಡುವ ಮೂಲಕ ಆನೇಕ ತಂತ್ರಜ್ಞರಿಗೆ ಹಾಗೂ ಯುವ ಉತ್ಸಾಹಿಗಳಲ್ಲಿ ಸ್ಪೂರ್ತಿ ತುಂಬುತ್ತಿದ್ದರು ಹಾಗೂ ಕಲಿಯುವ ಆಸಕ್ತಿ ಇಟ್ಟುಕೊಂಡಿದ್ದ ಹಲವು ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ಕನ್ನಡ ಸಿನಿಮಾಗಳನ್ನು ಉನ್ನತ ಸ್ಥಾನಕ್ಕೆ ತೆಗದುಕೊಂಡು ಹೋಗಬೇಕೆಂಬ ಮಹಾದಾಸೆಯನ್ನು ಇಟ್ಟುಕೊಂಡು ಪ್ರತಿಯೊಂದು ಸಿನಿಮಾವನ್ನು ಕೂಡ ಬಹಳ ಅಚ್ಚುಕಟ್ಟಾಗಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದರು. ತಮ್ಮ ಪಾತ್ರ ಬಂದಾಗ ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ, ಪಾತ್ರಕ್ಕೆ ಮತ್ತಷ್ಟು ಮೆರಗು ತರುವಂತ ಅಭಿನಯವನ್ನು ಮಾಡುವ ಮೂಲಕ ಚಿತ್ರರಸಿಕರ ಮನಸ್ಸನ್ನು ತಣಿಸುತ್ತಿದ್ದರು.

 

 

ಶಂಕರ್ ನಾಗ್ ಅವರ ಮೊದಲ ಕಮೀರ್ಷಿಯಲ್ ಸಿನಿಮಾ ಎಂದರೆ ಅದು ಸೀತಾರಾಮು. 90ರ ದಶಕದಲ್ಲಿ ಶಂಕರ್ ನಾಗ್ ಅವರು ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದ ಪ್ರತಿಯೊಂದು ಸಿನಿಮಾ ಕೂಡ ಬಹಳ ಅಗ್ರಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿತ್ತು. ಶಂಕರ್ ನಾಗ್ ಅವರು ಅಭಿನಯಿಸಿದಂತ ಆನೇಕ ಸಿನಿಮಾಗಳಲ್ಲಿ ಎಸ್.ಪಿ. ಸಾಂಗ್ಲಿಯಾನ, ಆಟೋ ಶಂಕರ್, ಗೀತಾ ಮತ್ತು ಮಿಂಚಿನ ಓಟಾ ಸಿನಿಮಾಗಳು ಸಾಕಷ್ಟು ಜನಪ್ರಿಯವಾಗಿತ್ತು. ಶಂಕರ್ ಅವರು ನಿರ್ದೇಶನ ಮಾಡಿದ ಜನ್ಮ ಜನ್ಮದ ಅನುಬಂಧ, ಗೀತಾ, ಆಕ್ಸಿಡೆಂಟ್ ಸಿನಿಮಾಗಳು ಆಪಾರ ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಜೊತೆಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಶಂಕರ್ ನಾಗ್ ಅವರಿಗೆ ತಂದುಕೊಟ್ಟಿತ್ತು. ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿಬಂದ ಅದ್ಭುತ ಹಿಂದಿ ಸಿರೀಸ್ ಎಂದರೆ ಅದು ಮಾಲ್ಗುಡಿ ಡೇಸ್.

 

 

ಹೌದು, ಸಣ್ಣ ಕಥೆಗಳನ್ನು ಆಧಾರಿಸಿ ಬರೆವಣಿಗೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದ ಆರ್.ಕೆ. ನಾರಾಯಣ್ ಅವರ ಒಂದು ಸಣ್ಣ ಕಥೆಯನ್ನು ಶಂಕರ್ ನಾಗ್ ಅವರು ಮಾಲ್ಗುಡಿ ಡೇಸ್ ಆಗಿ ನಿರ್ದೇಶಿಸಿ, ಅದನ್ನು ಅದ್ಭುತ ಸರಣಿಯಾಗಿ ಪರಿವರ್ತಿಸಿ ವೀಕ್ಷಕರಿಗೆ ಕೂಡುಗೆಯಾಗಿ ನೀಡಿದರು. ಮಾಲ್ಗುಡಿ ಡೇಸ್, ಧಾರವಾಹಿಗಳಲ್ಲಿ ಒಂದು ಅತ್ಯುತ್ತಮವಾದದ್ದು ಎಂಬ ಬಿರುದು ಕೂಡ ಪಡೆದುಕೊಂಡಿದೆ. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿದ್ದರು ಕೂಡ ಅದನ್ನೆಲ್ಲ ಮೀರಿಸುವಂತ ದೊಡ್ಡ ಕೊಡುಗೆಯೊಂದನ್ನು ಕೂಡ ನೀಡಿದ್ದಾರೆ.

 

 

ನಾವು ನೀವು ನೋಡಿ ತಿಳಿದುಕೊಂಡಿರುವ ಪ್ರಕಾರ ಇಂದು ಕನ್ನಡ ಚಿತ್ರರಂಗದ ಪ್ರತಿಯೊಂದು ಕೆಲಸಗಳು ಕೂಡ ಬೆಂಗಳೂರಿನಲ್ಲೇ ನಡೆಯುತ್ತಿದೆ. ಆದರೆ 90ರ ದಶಕದಲ್ಲಿ ಕನ್ನಡ ಸಿನಿಮಾಗಳ ಚಿತ್ರಿಕರಣ ಮಾತ್ರ ಕರ್ನಾಟಕ ಸೇರಿದಂತೆ, ಆನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಮಿಕ್ಕಂತೆ ಸಿನಿಮಾದ ಡಬ್ಬಿಂಗ್, ಸಂಕಲನ, ಪೋಸ್ಟ್ ಪ್ರೋಡಕ್ಷನ್, ರೀ ರೇರ್ಕಾಡಿಂಗ್ ಇಂಥ ಕೆಲಸಗಳು ಮಾಡಬೇಕು ಎಂದರೆ ಚೆನೈಗೆ ಹೋಗಬೇಕಾಗಿತ್ತು.

 

 

ಯಾಕೆಂದರೆ ಕರ್ನಾಟಕದಲ್ಲಿ ಆ ಸಮಯಕ್ಕೆ ಸಿನಿಮಾಗೆ ಬೇಕಾದ ಯಾವ ರೀತಿಯ ತಂತ್ರಜ್ಞಾನಗಳು ಕೂಡ ಬೆಂಗಳೂರಿನಲ್ಲಿ ಇರಲಿಲ್ಲ. ಚೆನೈ ಸ್ಟುಡಿಯೋಗೆ ಒಮ್ಮೆ ಹೋದರೆ ಅವರು ನೀಡುವ ಸಮಯದವರೆಗೂ ಕಾಯಬೇಕಿತ್ತು. ಅಲ್ಲಿಯೇ ಇದ್ದಂತ ಹೋಟೆಲ್ ಗಳಲ್ಲಿ ತಿಂಗಳವರೆಗೂ ಕಾಯ್ದುಕೊಂಡು ಅವರು ನೀಡುವ ಡೇಟ್ಸ್ ಪಡೆದು ಚಿತ್ರದ ಕೆಲಸಗಳನ್ನು ಮುಗಿಸಿಕೊಳ್ಳುವಂತ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿದ ಶಂಕರ್ ನಾಗ್ ಅವರು ನಾವು ಅಲ್ಲಿಯವರೆಗೂ ಏಕೆ ಹೋಗಬೇಕು.? ನಮ್ಮ ಕನ್ನಡ ಚಿತ್ರರಂಗಕ್ಕೆ ಯಾಕೆ ಒಂದು ಸ್ಟುಡಿಯೋಂದನ್ನು ಬೆಂಗಳೂರಿನಲ್ಲಿ ನಿರ್ಮಿಸಬಾರದು ಎಂಬ ಧೀರ್ಘ ಯೋಚನೆಯನ್ನು ಮಾಡಿ, 1985 ರಲ್ಲಿ ಸಂಕೇತ್ ಸ್ಟುಡಿಯೋ ನಿರ್ಮಾಣ ಮಾಡುತ್ತಾರೆ.

 

 

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರಿದ್ದರು ಕೂಡ ಯಾರೊಬ್ಬರಿಂದಲೂ ಆಗದ ಆ ಒಂದು ಕೆಲಸವನ್ನು ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುತ್ತಾರೆ. ಕನ್ನಡ ಚಿತ್ರರಂಗದ ಮೇಲೆ ಅವರಿಗಿದ್ದ ಆಸಕ್ತಿ, ಶ್ರದ್ಧೆ, ಪ್ರೀತಿ ಹೇಗಿತ್ತು ಎಂಬುದನ್ನು ಈ ಒಂದು ಕೆಲಸದಲ್ಲಿ ನಾವು ಗಮನಿಸಬಹುದು. ಆದಾದ ನಂತರ ಕನ್ನಡ ಚಿತ್ರರಂಗದ ಪ್ರತಿಯೊಂದು ಡಬ್ಬಿಂಗ್, ಪೋಸ್ಟ್ ಪ್ರೋಡಕ್ಷನ್ ಕೆಲಸಗಳೆಲ್ಲ ಸಂಕೇತ್ ಸ್ಟುಡಿಯೋದಲ್ಲಿಯೇ ನಡೆಯುತ್ತಿತ್ತು.

 

 

ಶಂಕರ್ ನಾಗ್ ಅವರು ನಮ್ಮ ಕನ್ನಡ ಚಿತ್ರರಂಗ ಯಾವುದೇ ಕಾರಣಕ್ಕೂ ಬೇರೆ ನೆಲದಲ್ಲಿ ಕೈ ಕಟ್ಟಿ ನಿಲ್ಲಬಾರದು ಎಂಬ ಮಹತ್ವಕಾಂಕ್ಷೆಯಲ್ಲಿ ಸಂಕೇತ್ ಸ್ಟುಡಿಯೋ ನಿರ್ಮಿಸಿ, ಕನ್ನಡ ಚಿತ್ರರಂಗದ ಕೆಲಸಗಳನ್ನು ಸುಗಮವಾಗಿಸಿ, ದೊಡ್ಡ ಮಟ್ಟದ ಕೊಡುಗೆ ನೀಡಿದರು. ಕನ್ನಡ ಚಿತ್ರರಂಗಕ್ಕೆ ಶಂಕರ್ ನಾಗ್ ಅವರ ಕೊಡುಗೆ ಆಪಾರವಾದದ್ದು, ಶಂಕರ್ ನಾಗ್ ಅವರು ಸಿನಿಮಾ ಮಾತ್ರವಲ್ಲದೇ ಹಲವು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.

 

 

ಶಂಕರ್ ನಾಗ್ ಅವರನ್ನು ಬಹಳ ಹತ್ತಿರದಿಂದ ಗಮನಿಸಿರುವ ಆನೇಕ ಸ್ನೇಹಿ ಜೀವಿಗಳು ಹೇಳುವುದು ಶಂಕರ್ ನಾಗ್ ಎಂದರೆ ಸಮಯ, ಸಮಯ ಎಂದರೆ ಶಂಕರ್ ನಾಗ್ ಎಂದು.! ಹೌದು, ಶಂಕರ್ ನಾಗ್ ಅವರು ತಮ್ಮ ಎಲ್ಲಾ ಕೆಲಸಗಳು ಮುಗಿಸಿ ಯಾವ ಕೆಲಸ ಇಲ್ಲದಿದ್ದರೂ ಕೂಡ ಆ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಬದಲು, ಒಂದಲ್ಲ ಒಂದು ಕೆಲಸವನ್ನು ಹುಡುಕಿಕೊಂಡು ಮಾಡುತ್ತಿದ್ದವರು.

 

 

ಸಮಯಕ್ಕೆ ಬಹಳ ಪ್ರಾಶಸ್ತ್ಯ ನೀಡುತ್ತಿದ್ದ ಶಂಕರ್ ನಾಗ್ ಅವರು ತಮ್ಮ ಯುವ ಬಳಗದವರಿಗೆ, ಸ್ನೇಹಿತರಿಗೆ ಸಮಯವನ್ನು ವ್ಯರ್ಥ ಮಾಡಬೇಡಿ, ನಿದ್ರೆ ಮಾಡುವ ಮೂಲಕ ಸಮಯ ವ್ಯರ್ಥ ಮಾಡಬೇಡಿ ಯಾಕಂದರೆ ಸತ್ತ ಮೇಲೆ ನಿದ್ರಿಸುವುದು ಇದದ್ದೆ.! ಹೀಗಾಗಿ ನಿಮ್ಮ ಹೆಸರನ್ನು ನೀವು ಸತ್ತ ಮೇಲೂ ಹೇಳಬೇಕು ಹಾಗೆ ಕೆಲಸವನ್ನು ಮಾಡಿ ಎಂದು ಹೇಳುತ್ತಿದ್ದವರು.

 

 

ಅಭಿಮಾನಿಗಳ ಆಟೋ ಶಂಕರ್ ಆದ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ 13 ವರ್ಷಗಳು. 13 ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಚಿತ್ರಗಳು, ಕೆಲಸಗಳು, ಕೊಡುಗೆಗಳು ಆಪಾರ ಹಾಗೂ ಶ್ಲಾಘನೀಯ. ಕನ್ನಡ ಚಿತ್ರರಂಗಕ್ಕೆ ಕೇವಲ 13 ವರ್ಷಗಳ ಸೇವೆ ಸಲ್ಲಿಸಿರಬಹುದು. ಆದರೆ ಅವರ ಹೆಸರು ಯುಗ ಯುಗಗಳು ಕಳೆದರೂ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರ ಉಸಿರಲ್ಲಿ ಬೆರತು ಹೋಗಿರುವುದಂತೂ ಖಂಡಿತ. ಜೀವ ಹೋದ ಮೇಲೂ ಒಬ್ಬ ಕಲಾವಿದನ ಹೆಸರು ಮಾಸದೆ ಆಟೋಗಳ ಮೇಲೆ, ಕನ್ನಡ ಸಂಘಟನೆಗಳ ಭಾವುಟಗಳ ಮೇಲೆ, ಮೂರ್ತಿಗಳ ಮೇಲೆ ಇವೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರ ಅದ್ಭುತ ಮುಂದಾಲೋಚನೆಗಳು ಇಂದು ಯೋಜನೆಯಾಗಿ ನಿಂತಿರುವ ಆನೇಕ ಉದಾಹರಣೆಗಳೇ ಅವರ ಹೆಸರನ್ನು ಹೇಳುತ್ತವೆ.

 

 

ಒಟ್ಟಿನಲ್ಲಿ ಶಂಕರ್ ನಾಗ್ ಅವರು ಬದುಕಿದ್ದರೆ ಕನ್ನಡ ಭಾಷೆ, ಕನ್ನಡ ಚಿತ್ರರಂಗವನ್ನು ಉನ್ನತ ಸ್ಥಾನಕ್ಕೆ ತಂತ್ರಜ್ಞಾನಗಳ ಮೂಲಕ ಕರೆದುಕೊಂಡು ಹೋಗುತ್ತಿದ್ದರು ಎಂಬುದರಲ್ಲಿ ಅನುಮಾನವೇ ಬೇಡ.! ಶಂಕರ್ ನಾಗ್ ಅವರ ಹೆಸರು ಕನ್ನಡಿಗರು ಮತ್ತು ಆನೇಕರಲ್ಲಿ ಅಚ್ಚಾಗಿ ಉಳಿಯುವಂತೆ ಮಾಡಿರುವುದು ನಮ್ಮ ಪ್ರೀತಿಯ ಆಟೋ ಚಾಲಕರು ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ಆಟೋ ಚಾಲಕರು ತಮ್ಮ ವಾಹನದಲ್ಲಿ ದೇವರ ಪೋಟೋಗಳಿಗಿಂತ ಶಂಕರ್ ನಾಗ್ ಅವರ ಪೋಟೋ ಇಟ್ಟು ಪೂಜಿಸುತ್ತಿರುವುದೇ ಶಂಕರ್ ನಾಗ್ ಎಂಬ ಹೆಸರನ್ನು ನಮಗೆ ನೆನಪಿಸುತ್ತದೆ. ಶಂಕರ್ ನಾಗ್ ಅವರು ಸದಾ ಅಜರಾಮರ.

-Mohan shetty

LEAVE A REPLY

Please enter your comment!
Please enter your name here