ಅಂಗಿ ಹರಿದಿದ್ದಕ್ಕಾಗಿ ಬಾಲಕನೊಬ್ಬ ಹೈಕೋರ್ಟ್ ಮೆಟ್ಟಿಲೇರಿ ಯಶಸ್ಸು ಕಂಡ ನೋವಿನ ಕಥೆ ಇಲ್ಲಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಂಜುನಾಥ ದೇವರಾಜ ಹರಿಜನ್ ಇಂತಹದೊಂದು ಹೋರಾಟ ಮಾಡಿದ ಬಾಲಕ. ಈ ಹೋರಾಟದ ಫಲವಾಗಿ ಇದೀಗ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಸಮವಸ್ತ್ರ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಮಂಜುನಾಥ ದೇವರಾಜ್ ಹರಿಜನ್ನ ಸಾಧಿಸಿದ ಯಶಸ್ಸು.

ಅದೊಂದು ದಿನ ಮಂಜುನಾಥ ಶಾಲೆಗೆ ತೆರಳಲು ತಯಾರಿ ನಡೆಸಿದ್ದ. ಆದರೆ ಆತನ ಧರಿಸಿದ್ದ ಅಂಗಿ ಕೊಳಕಾಗಿತ್ತು. ಮತ್ತೊಂದು ಅಂಗಿಯನ್ನು ಪೋಷಕರು ನೀಡಿದರಾದರೂ ಅದೂ ಹರಿದಿತ್ತು. ಇನ್ನೊಂದು ಜೊತೆ ಸಮವಸ್ತ್ರ ಇರಲಿಲ್ಲ. ಕಾರಣ, ಸರ್ಕಾರದವರು ಈ ವರ್ಷಕ್ಕೆ ಒಂದೇ ಜೊತೆ ಸಮವಸ್ತ್ರ ನೀಡಿದ್ರು. ಹೀಗಾಗಿ ಸರ್ಕಾರದವರು ಮಾಡುವ ಈ ಅನ್ಯಾಯವನ್ನು ನಾವು ಪ್ರಶ್ನಿಸಬಾರದೇ, ಇಂತಹ ಪರಿಸ್ಥಿತಿ ಆದಲ್ಲಿ ನಾವು ಶಾಲೆಗೆ ಹೇಗೆ ಹೋಗಬೇಕು ಎಂದು ಮಂಜುನಾಥ ಹೋರಾಟಕ್ಕೆ ಅಣಿಯಾದ. ನಂತರ ಮಂಜುನಾಥ್ ಅವರ ತಂದೆ ದೇವರಾಜ ಹರಿಜನ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗುತ್ತಾರೆ. ಮಂಜುನಾಥ್ನ ಮೂಲಕವೇ ಅರ್ಜಿ ಹಾಕಿಸುತ್ತಾರೆ. ಹೀಗೆ ಮಂಜುನಾಥನ ಹೋರಾಟ ಪ್ರಾರಂಭವಾಗುತ್ತದೆ.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಮಹ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಮಂಜುನಾಥನ ಅರ್ಜಿಯನ್ನು ಸುದೀರ್ಘ ವಿಚಾರಣೆ ಮಾಡಿ, ಮಹತ್ವದ ತೀರ್ಪು ನೀಡಿದೆ. 2 ತಿಂಗಳೊಳಗಾಗಿ ರಾಜ್ಯಾದ್ಯಂತ 1ರಿಂದ 8ನೇ ತರಗತಿವರೆಗೂ ಇರುವ ಅರ್ಟಿಇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸಾಕ್ಸ್ ಮತ್ತು ಶೂ ನೀಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. ಅಲ್ಲದೆ ಅರ್ಜಿದಾರ ವಿದ್ಯಾರ್ಥಿಗೆ 2 ವಾರದೊಳಗಾಗಿ 2 ಜೊತೆ ಸಮವಸ್ತ್ರ, ಸಾಕ್ಸ್ ಮತ್ತು ಶೂ ನೀಡುವಂತೆಯೂ ಪ್ರತ್ಯೇಕವಾಗಿ ಸೂಚನೆ ನೀಡಿದೆ ಹೈಕೋರ್ಟ್. ಮಂಜುನಾಥ್ ಹರಿಜನ್ ನಡೆಸಿದ ಹೋರಾಟದ ಫಲವಾಗಿ ಇದೀಗ ರಾಜ್ಯದ ಎಲ್ಲಾ ಶಾಲೆಗಳ ವಿಧ್ಯಾರ್ಥಿಗಳಿಗೂ ಸಮವಸ್ತ್ರ ನೀಡಲಾಗಿದೆ. ಈ ಬಾಲಕನ ಹೋರಾಟ ಇದೀಗ ಎಲ್ಲೆಡೆ ಸುದ್ದಿಯಾಗಿದೆ.