ಎಷ್ಟೋ ಮಂದಿಗೆ ಷೇರು ಮಾರುಕಟ್ಟೆ ಬಗ್ಗೆ ಗೊತ್ತಿರುವುದೇ ಇಲ್ಲ. ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದೂ ತಿಳಿದಿರುವುದಿಲ್ಲ. ಆ ಷೇರು ಮಾರುಕಟ್ಟೆಯಲ್ಲಿ ಜನಸಾಮಾನ್ಯರಾದ ನಾವು ಹೇಗೆ ಹಣವನ್ನು ವಿನಿಯೋಗ ಮಾಡಬೇಕು?, ಯಾವಾಗ ವಿನಿಯೋಗ ಮಾಡಿದರೆ ನಮಗೆ ಹೆಚ್ಚು ಲಾಭ ಸಿಗಲು ಸಾಧ್ಯ? ಎಂಬುದರ ಮಾಹಿತಿ ನಮಗೆ ಗೊತ್ತಿರುವುದಿಲ್ಲ.
ಷೇರು ಮಾರುಕಟ್ಟೆ ಎಂದರೇನು ಎಂದು ಮೊದಲು ತಿಳಿದುಕೊಳ್ಳುವುದು ಮುಖ್ಯ. ಮಾರುಕಟ್ಟೆಯಲ್ಲಿ ಮಾರುತಿ ಟೆಕ್ ಕಂಪನಿಯೊಂದು ಇದ್ದು, ಅದು ನೀರಿನ ಡ್ರಮ್ಗಳನ್ನು ಉತ್ಪಾದನೆ ಮಾಡುತ್ತಿರುತ್ತದೆ. ತಿಂಗಳಿಗೆ 1000 ಡ್ರಮ್ ಉತ್ಪಾದನೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆ ಇದೆ. 1,000 ಡ್ರಮ್ ಅನ್ನು ಉತ್ಪಾದನೆ ಮಾಡಲು ಸುಮಾರು 1 ಲಕ್ಷ ರೂಪಾಯಿ ಬೇಕಾಗುತ್ತದೆ. ಇದಕ್ಕೆ ಬೇಕಾದ ಹಣವನ್ನು ಮಾಲೀಕ ಹೋಗೂ ಹೊಂದಿಸಬಹುದು. ಅಥವಾ ಬ್ಯಾಂಕ್ನಿಂದ ಸಾಲ ಪಡೆಯಬಹುದು. ಆದರೆ ಆ ಕಂಪನಿಯ ಡ್ರಮ್ಗಳಿಗೆ ತಿಂಗಳಲ್ಲಿ 10 ಲಕ್ಷ ಡ್ರಮ್ಗಳನ್ನು ತಯಾರಿಸುವ ಬೇಡಿಕೆ ಬಂದರೆ, ತಮ್ಮ ಕಂಪನಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕಾಗುತ್ತದೆ.

ಹಾಗಾಗಿ ಮತ್ತಷ್ಟು ಹಣವನ್ನು ಬಂಡವಾಳವನ್ನಾಗಿ ಹೂಡಿಕೆ ಮಾಡಬೇಕಾಗುತ್ತದೆ. ಕಂಪನಿಗೆ ಬೇಕಾದ ಬಂಡವಾಳವನ್ನು ಹೂಡಿಕೆ ಮಾಡಲು ಸರಿಸುಮಾರು 10 ಕೋಟಿ ರೂಪಾಯಿ ಹಣ ಬೇಕಾಗುತ್ತದೆ. ಒಂದು ವೇಳೆ ಬ್ಯಾಂಕ್ ನಲ್ಲಿ ಸಾಲ ಕೇಳಿದರೆ ಸಿಕ್ಕದೇ ಇರಬಹುದು. ಅಥವಾ ಆಸ್ತಿಯನ್ನು ಅಡ ಇಡಬೇಕಾಗಬಹುದು, ಪಡೆದುಕೊಂಡ ಸಾಲಕ್ಕೆ ಬಡ್ಡಿ ಕೂಡ ಕಟ್ಟಬೇಕಾಗಬಹುದು.
ಹಾಗಾಗಿ ಕಂಪನಿ ಸ್ಟಾಕ್ ಎಕ್ಸ್ಚೇಂಜ್ ಮುಂದೆ ಹೋಗುತ್ತದೆ. ಅಲ್ಲಿ ತನಗೆ ಬೇಕಾದ ಬಂಡವಾಳವನ್ನು ಕ್ರೂಢೀಕರಿಸಲು ತನ್ನ ಕಂಪನಿಯ ಷೇರುಗಳನ್ನು ಮಾರಾಟ ಮಾಡಲು ಮುಂದಾಗುತ್ತದೆ. ಕಂಪನಿ ತನಗೆ ಬೇಕಿರುವ 10 ಕೋಟಿ ರೂಪಾಯಿ ಬಂಡವಾಳವನ್ನು ಕಲೆ ಹಾಕಲು ಪ್ರತಿ ಷೇರಿಗೆ 100 ರೂ.ನಂತೆ 10 ಲಕ್ಷ ಷೇರುಗಳನ್ನು ಬಿಡುಗಡೆ ಮಾಡುತ್ತದೆ.
ಗ್ರಾಹಕರು ತಮಗೆ ಬೇಕಾದಷ್ಟು ಹಣವನ್ನು ಹೂಡಿಕೆ ಮಾಡಿ ಷೇರುಗಳನ್ನು ಕೊಂಡುಕೊಳ್ಳುತ್ತಾರೆ. ಹೀಗೆ ಕಂಪನಿ ತನಗೆ ಬೇಕಾದಷ್ಟು ಬಂಡವಾಳವನ್ನು ಸ್ಟಾಕ್ ಎಕ್ಸ್ಚೇಂಜ್ ಮೂಲಕ ಪಡೆದುಕೊಳ್ಳುತ್ತದೆ. ಗ್ರಾಹಕರು ತಮಗೆ ಬೇಕಾದಷ್ಟು ಷೇರುಗಳನ್ನು ಪಡೆದುಕೊಳ್ಳುತ್ತಾರೆ.

ನೀವು ಷೇರುಗಳನ್ನು ಖರೀದಿ ಮಾಡಬೇಕಾದರೆ ಮೊದಲು ನೀವು ಡಿಮ್ಯಾಟ್ ಅಕೌಂಟನ್ನು ತೆರೆಯಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ನಗರದಲ್ಲಿರುವ ಸ್ಟಾಕ್ ಬ್ರೋಕರ್ ನ ಕಚೇರಿಗೆ ಹೋಗಬೇಕಾಗುತ್ತದೆ. ನಿಮ್ಮ ಸ್ಟಾಕ್ ಬ್ರೋಕರ್ ನ ಬಳಿಯೇ ನಿಮ್ಮ ಡಿಮ್ಯಾಟ್ ಖಾತೆಯನ್ನು ತೆರೆಯಬಹುದಾಗಿದೆ. ಡಿಮ್ಯಾಟ್ ಖಾತೆಯನ್ನು ತೆರೆಯಬೇಕಾದರೆ ಮೊದಲು ನೀವು ಬ್ಯಾಂಕ್ ಖಾತೆಯನ್ನು ಹೊಂದಿರಬೇಕಾಗುತ್ತದೆ. ಖಾತೆ ತೆರೆಯಲು ನೀವು ಬ್ಯಾಂಕ್ ಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿಎಲ್ ಹೀಗೆ ಯಾವುದಾದರೂ ಒಂದು ದಾಖಲೆಯನ್ನು ನೀಡಬೇಕಾಗುತ್ತದೆ. ಇದಾದ ನಂತರ ಸ್ಟಾಕ್ ಬ್ರೋಕರ್ ನಿಮಗೆ ಡಿಮ್ಯಾಟ್ ಖಾತೆಯನ್ನು ತೆರೆದುಕೊಡುತ್ತಾರೆ.
ಡಿಮ್ಯಾಟ್ ಖಾತೆಯನ್ನು ತೆರೆದ ನಂತರ ಕನಿಷ್ಠ ಮೊತ್ತದಿಂದಲೂ ಕೂಡ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಷೇರುಗಳನ್ನು ಖರೀದಿಸಬಹುದು. ನೀವು ಒಮ್ಮೆಗೇ ಇಷ್ಟೇ ಹಣವನ್ನು ಹೂಡಿಕೆ ಮಾಡಬೇಕು ಎಂಬ ಯಾವುದೇ ನಿಯಮವಿಲ್ಲ. ನಿಮ್ಮಲ್ಲಿ ಎಷ್ಟು ಹಣ ಲಭ್ಯವಿರುತ್ತದೆಯೋ ಅಷ್ಟೇ ಹಣವನ್ನು ಹೂಡಿಕೆ ಮಾಡಬಹುದು. ಆ ಮೂಲಕ ಷೇರುಗಳನ್ನು ಖರೀದಿ ಮಾಡಲು ಪ್ರಾರಂಭಿಸಬಹುದು.
ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳದ ಹೊರತು ದೊಡ್ಡ ಮೊತ್ತದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮುಂದಾಗಬೇಡಿ. ಸಣ್ಣ ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡುವ ಮೂಲಕ ಮಾರುಕಟ್ಟೆಯ ಬಗ್ಗೆ ಮಾಹಿತಿ ಮತ್ತು ಅನುಭವ ಪಡೆದುಕೊಂಡ ನಂತರ ಅಲ್ಲಿ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡಲು ಮುಂದಾಗುವುದು ಒಳಿತು. ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳದೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಮುಂದಾಗಬೇಡಿ. ಇದನ್ನು ಎಂದಿಗೂ ಗಮನದಲ್ಲಿ ಇಟ್ಟುಕೊಳ್ಳಿ.