ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕರ್ನಾಟಕ ರಾಜ್ಯಕ್ಕೂ ಕೂಡ ಮಳೆಯ ಆರ್ಭಟ ತಟ್ಟಿದ್ದು, ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಬಿಜಾಪುರ,ಬಾಗಲಕೋಟೆ ಜನರಿಗೆ ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಮಂದಹಾಸ ಮೂಡಿದೆ ಎನ್ನಬಹುದು. ಆಲಮಟ್ಟಿ ಡ್ಯಾಂ ಸಂಪೂರ್ಣ ಭರ್ತಿಯಾಗಿರುವುದು ಜನರಲ್ಲಿ ಖುಷಿ ಮನೆ ಮಾಡಿದೆ. ಜಲಾಶಯ ಗರಿಷ್ಠ ಮಟ್ಟ ೫೧೯.೬೦ ಮೀಟರ್ ಇದ್ದು, ಸದ್ಯ ೫೧೯.೨೦ ಮೀಟರ್ ತುಂಬಿದೆ ಎನ್ನಲಾಗಿದೆ. ೧ ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದು, ಡ್ಯಾಂನ ಆರು ಕ್ರಸ್ಟ್ ಗೇಟ್’ಗಳನ್ನು ತೆರೆದು ನೀರನ್ನು ನಾರಾಯಣ ಜಲಾಶಯಕ್ಕೆ ಹೊರಬಿಡಲಾಗುತ್ತಿದೆ. ಇದೇ ರೀತಿಯಲ್ಲಿ ಯಾದಗಿರಿಯ ಬಸವಸಾಗರದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ವಿಜಯಪುರದ ಆಲಮಟ್ಟಿ ಡ್ಯಾಂನಿಂದ ಬಸವಸಾಗರಕ್ಕೂ ನೀರು ಬಿಡಲಾಗುತ್ತಿದೆ.ಆಲಮಟ್ಟಿ ಡ್ಯಾಂ ತುಂಬಿರುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ಭಾರಿ ಸಂಖ್ಯೆಯಲ್ಲಿ ಡ್ಯಾಂಗೆ ಭೇಟಿ ನೀಡುತ್ತಿದ್ದಾರೆ.