ಒಳ ಒಪ್ಪಂದದ ದರ್ದು ನಮಗೆ ಇಲ್ಲ: ಹೆಚ್ ಡಿ ಕುಮಾರಸ್ವಾಮಿ

0
145

ಬೆಂಗಳೂರು: ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಮಗೆ ಅಂತಾ ದರ್ದು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ತಮ್ಮ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಜಾತಿ ಹೆಸರೇಳಿ ಮತ ಕೇಳುವವರು ನಾವಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು. ನಮ್ಮ ಪಕ್ಷ ಒಳ ಒಪ್ಪಂದ ಮಾಡಿಕೊಳ್ಳುವಂತದ್ದಲ್ಲ. ನಮಗೆ ಅಂತಾ ದರ್ದು ಇಲ್ಲ. ಅವರ ಅಭ್ಯರ್ಥಿ ಗೆಲ್ಲಿಸೋಕೆ ನಾನು ಅಭ್ಯರ್ಥಿ ಹಾಕದೇ ಬೆಂಬಲ ಕೊಡಬೇಕಾ. ಕಾಂಗ್ರೆಸ್ ಮತ್ತು ಬಿಜೆಪಿ ಪರ್ಸೆಂಟೇಜ್ ಸರ್ಕಾರಗಳು ಅಂತಾ ಪರಸ್ಪರ ಆರೋಪ ಮಾಡಿಕೊಳ್ತಿದಾರೆ. ಆದರೆ ನಮ್ಮ ಸರ್ಕಾರ ದ ಬಗ್ಗೆ ಯಾರೂ ಇಂತಹ ಆರೋಪಗಳನ್ನು ಮಾಡಲಿಲ್ಲ. ಶಿರಾ ಕ್ಷೇತ್ರದ ಅಭ್ಯರ್ಥಿ ಯನ್ನು ಈಗಾಗಲೇ ದೇವೇಗೌಡರು ಘೋಷಣೆ ಮಾಡಿದ್ದಾರೆ. ಆರ್ ಆರ್ ನಗರದ ಅಭ್ಯರ್ಥಿ ಘೋಷಣೆ ಸದ್ಯದಲ್ಲಿ ಮಾಡ್ತೀವಿ ಎಂದರು.

ಕಾಂಗ್ರೆಸ್ ಘೋಷಣೆ ಮಾಡಿರುವ ಅಭ್ಯರ್ಥಿ ಯ ತಂದೆ ಜೆಡಿಎಸ್ ನವರಲ್ಲ. ಹಿಂದೆ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ಕೊಟ್ಟಿದ್ದು ನಿಜ. ನಂತರ ಅವರೇ ಬಂದು ಶಿವಕುಮಾರ್ ಜೊತೆ ಹೋಗ್ತೀನಿ ಅಂತಾ ಕೇಳಿದ್ರು. ನಾನೇ ಅವರು ಕಾಂಗ್ರೆಸ್ಸಿಗೆ ವಾಪಸ್ಸು ಹೋಗಲು ಅನುಮತಿ ಕೊಟ್ಟಿದ್ದೆ. ಕಳೆದ ಬಾರಿ ಬಿಜೆಪಿಯ ರಾಮಚಂದ್ರ ಅವರನ್ನು ಕರೆಸಿ ಟಿಕೆಟ್ ಕೊಟ್ಟಿದ್ದೆವು. ಆಗಲೂ ಅರವತ್ತು ಸಾವಿರ ಮತ ಪಡೆದುಕೊಂಡಿದ್ದೆವು ಎಂದು ತಿಳಿಸಿದರು.

ಮುನಿರತ್ನ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಇದ್ದರೆ ಜೆಡಿಎಸ್ ಟಿಕೆಟ್ ಕೊಡುತ್ತಾ..??? ಎಂಬ ಪ್ರಶ್ನೆ ಗೆ ಉತ್ತರಿಸಿದ ಕುಮಾರಸ್ವಾಮಿ, ಈಗಾಗಲೇ ನಮ್ಮ ಪಕ್ಷದಿಂದ ಮೂವರ ಹೆಸರನ್ನು ಅಂತಿಮ ಮಾಡಲಾಗಿದೆ.ಬೇರೆ ಯಾರೂ ನಮ್ಮ ಬಳಿ ಅರ್ಜಿ ಹಾಕಿಕೊಂಡಿಲ್ಲ. ಬೇರೆ ಯಾರಿಗೂ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸಿಲ್ಲ. ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಟ್ಟು ನಮ್ಮ ಕಾರ್ಯಕರ್ತರನ್ನು ಅನಾಥರನ್ನಾಗಿ ಮಾಡಲು ನಮಗೆ ಇಷ್ಟ ಇಲ್ಲ ಎಂದು ಟಾಂಗ್ ನೀಡಿದರು.

“ಹೌದು ನಾನು ಪೆದ್ದ”

ಕುಮಾರಸ್ವಾಮಿ ಪೆದ್ದ ಎಂಬ ಸಿದ್ದರಾಮಯ್ಯ ಆರೋಪದ ಕುರಿತು ಮಾತನಾಡಿದ ಅವರು, ಹೌದು ನಾನು ಪೆದ್ದನೇ, ಜನರ ಒಳಿತಿಗಾಗಿ ಹೃದಯದಿಂದ ತೀರ್ಮಾನ ಮಾಡುವವನು ನಾನು. ಸಿದ್ದರಾಮಯ್ಯ ಅವರಿಗೆ ಮುಂದೆ ಬಿಜೆಪಿ ಗಿಂತಲೂ ಜೆಡಿಎಸ್ ಬಗ್ಗೆ ಭಯ ಇದೆ. ಕುಮಾರಸ್ವಾಮಿ ಬಗ್ಗೆ ಇನ್ನೂ ಭಯ ಇದೆ. ಅವರ ಬಗ್ಗೆ ಮಾತಾಡಬಾರದು ಎಂದು ಕೊಂಡರೂ ಪದೇ ಪದೇ ಅವರೇ ಕೆಣಕುತ್ತಾರೆ. ಅವರಿಗೆ ನಮ್ಮ ಬಗ್ಗೆ ಭಯ ಇದೆ ಎಂದು ಸಿದ್ದರಾಮಯ್ಯ ಗೆ ಟಾಂಗ್ ನೀಡಿದರು.

ದೇಶದ ನಾನಾ ಕಡೆಗಳಲ್ಲಿ ಉಪ ಚುನಾವಣೆ ಗಳು ಘೋಷಣೆ ಆಗಿವೆ. ಇವೆಲ್ಲ ಮೂರು ತಿಂಗಳು ಮುಂದೆ ಹಾಕಿದ್ದರೆ ಏನಾಗುತ್ತಿತ್ತು.ಚುನಾವಣಾ ಆಯೋಗ ಯೋಚಿಸಬೇಕಿತ್ತು. ರಾಜಕಾರಣಿಗಳು ಜೀವದ ಭಯ ಬಿಟ್ಟು ಹೋರಾಡುತ್ತಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾದ್ಯವೇ.? ಎಂದು ಪ್ರಶ್ನಿಸಿದರು.

ಶಾಲಾ ಕಾಲೇಜು ಆರಂಭಕ್ಕೆ ಎಚ್ಡಿಕೆ ವಿರೋಧ

ಶಾಲಾ-ಕಾಲೇಜು ಪ್ರಾರಂಭ ಮಾಡುವ ವಿಚಾರದ ಕುರಿತು ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡೋದು ಬೇಡ.ಪೋಷಕರಲ್ಲಿ ಆತಂಕ ಇದೆ. ಸಿದ್ದತೆ ಇಲ್ಲದೆ ಶಾಲೆಗಳು ಪ್ರಾರಂಭ ಮಾಡೋದು ಸೂಕ್ತವಲ್ಲ. ಮಕ್ಕಳ ಜೊತೆ ಚೆಲ್ಲಾಟ ಆಡೋದು ಬೇಡ. ಏಕಾಏಕಿಯಾಗಿ ಶಾಲೆ ಪ್ರಾರಂಭ ಮಾಡಿ ಮಕ್ಕಳ ಜೊತೆ ಚೆಲ್ಲಾಟ ಆಡೋದು ಬೇಡ. ಸರ್ಕಾರ ಶಾಲೆ ಪ್ರಾರಂಭ ಮಾಡೋ ನಿರ್ಧಾರ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here