ಮಿನಿ ಸಮರಕ್ಕೆ ಮಾಜಿ ಸಿಎಂಗಳ ಕಾದಾಟ: ಈ ಶತಮಾನದ ಮಾಹಾ ಸುಳ್ಳುಗಾರ ಸಿದ್ದರಾಮಯ್ಯ ಎಂದ ಹೆಚ್ ಡಿಕೆ

0
112

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಯ್ ಹಾಯ್ ಎಂದು ಕೈ ಕುಲುಕಿ ವಿಧಾನಸೌಧದ ಮೆಟ್ಟಿಲು ಹತ್ತಿದ್ದ ಮಾಜಿ ಸಿಎಂ ಗಳು ಈಗ ಕಾಳಗಕ್ಕೆ ನಿಂತಿದ್ದಾರೆ. ಸಮ್ಮಿಶ್ರ ಸರ್ಕಾರ ಪತನ ಗೊಂಡು ಸಿಎಂ ಆಗಿದ್ದ ಕುಮಾರಸ್ವಾಮಿ ಮಾಜಿ ಸಿಎಂ ಆಗಿ, ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ವರ್ಷಗಳೇ ಕಳೆದಿವೆ. ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಈ ಇಬ್ಬರು ಮಾಜಿ ಸಿಎಂ ಗಳು ನೋಡಿಯೂ ನೋಡದ ಹಾಗೆ ಕೇಳಿಯೂ ಕೇಳದ ಹಾಗೆ ಇದ್ದವರು ಇಂದು ಮಿನಿ ಸಮರದ ಸಂದರ್ಭದಲ್ಲಿ ಕಾದಾಟಕ್ಕೆ ನಿಂತಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂಬಂಧ  ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಈ ‘ಶತಮಾನದ ಮಹಾ ಸುಳ್ಳುಗಾರ’ ಎಂದು ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಶತಮಾನದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಒಬ್ಬರಿಗೆ ಅಂಟಿದ್ದ ‘ಮಹಾನ್ ಸುಳ್ಳುಗಾರ’ ಎಂಬ ಕಳಂಕವನ್ನು ತಾನಾಗಿಯೇ ಕಸಿದುಕೊಂಡಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರರಾಗಿ ಹೊರಹೊಮ್ಮಿದ್ದಾರೆ. ಮಂಡ್ಯದ ಮೂಲಕ ಇಂಡಿಯಾ ಹಿಡಿಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸಿಗರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ. ಅನ್ನದಾತರ ಬಗೆಗಿನ ಬದ್ಧತೆ ಬಗ್ಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕರುಳಬಳ್ಳಿಯ ಸಂಬಂಧ ಜೆಡಿಎಸ್ ಗಿದೆ ಎಂದರು.

ಜೆಡಿಎಸ್ ನೊಂದಿಗೆ ಯಾವುದೇ ಮಾತುಕತೆ ನಡೆಸದೆ ಸಿದ್ದರಾಮಯ್ಯ ಹಸಿ ಸುಳ್ಳು ಹೇಳುವ ಮೂಲಕ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕು. ರೈತರ ಪರ ಕಾಳಜಿ, ಬದ್ಧತೆಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಕಲಿಯಬೇಕಾದದ್ದು ಏನೂ ಇಲ್ಲ. ಸಂತೆ ಭಾಷಣ ಮಾಡುವ ಸಿದ್ದರಾಮಯ್ಯ ವಿದೂಷಕನಂತೆ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವುದು ಪ್ರತಿ ಪಕ್ಷದ ನಾಯಕನಿಗೆ ಭೂಷಣವಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾಡಿದ ಸಾಲ ಮನ್ನಾ ದಲ್ಲಿ ಲೋಪದೋಷಗಳು ಇದ್ದವು. ಪತ್ರಕರ್ತರ ಪ್ರಶ್ನೆಗೆ ನಾನು ಪ್ರತಿಕ್ರಿಯಿಸಿದ್ದೆ. ನಾನು ಮಾಡಿದ 25 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾದಲ್ಲಿ ಇಂತಹ ಅನ್ಯಾಯಗಳನ್ನು ಸರಿಪಡಿಸಿದ್ದೆ. ಇದರಲ್ಲಿ ಹುಳುಕು ಹುಡುಕುವ ಕಾಂಗ್ರೆಸ್ ನಾಯಕರು ಅನ್ನದಾತನಿಗೆ ಮಂಕು ಬೂದಿ ಎರಚಲು ಯತ್ನಿಸುತ್ತಿದ್ದಾರೆ. ನಾನು ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತೇನೆ ಎಂದು ಮೂದಲಿಸುವ ಸಿದ್ದರಾಮಯ್ಯ ‘ಅಹಿಂದ’ ರಾಮಯ್ಯ ಆಗಿದ್ದು ಏಕೆ? ನಕಲಿ ಸಮಾಜವಾದಿಯ ‘ಅಹಿಂದ ‘ಮುಖವಾಡ ಇಡೀ ನಾಡಿಗೆ ಗೊತ್ತಿದೆ ಎಂದು ಕುಟುಕಿದರು.

ಒಟ್ಟಿನಲ್ಲಿ ಉಪ ಚುನಾವಣೆಯಲ್ಲಿನ ನಾಯಕರುಗಳ ವಾಕ್ಸಮರ ಪ್ರಾರಂಭವಾಗಿದ್ದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ನೋಡಬೇಕಿದೆ.

LEAVE A REPLY

Please enter your comment!
Please enter your name here