ಬಿಎಸ್ವೈ ನಂಬಿ ‘ಬಲಿಪಶು’ವಾದ ‘ಕುಂದಾಪುರದ ವಾಜಪೇಯಿ’..!

0
1321

ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಜನಪ್ರಿಯ ನಾಯಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ. ಜನರ ಪ್ರೀತಿ, ವಿಶ್ವಾಸಗಳಿಸಿದರೆ, ಚುನಾವಣೆ ಗೆಲ್ಲಲು ಯಾವುದೇ ಪಕ್ಷದ ಚಿಹ್ನೆಯ ಅವಶ್ಯಕತೆಯಿಲ್ಲ ಎಂದು ತೋರಿಸಿಕೊಟ್ಟವರು, ‘ಕುಂದಾಪುರದ ವಾಜಪೇಯಿ’ ಎಂದು ಕರೆಯಲ್ಪಡುವ ಈ ಹಾಲಾಡಿ ಶ್ರೀನಿವಾಸ ಶೆಟ್ಟಿ. ಇದೇ ಕಾರಣದಿಂದಲೇ ಸತತವಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಅವರಿಗೆ ಬಿಜೆಪಿ ಪಕ್ಷದಲ್ಲಿ ಸರಿಯಾದ ಮನ್ನಣೆ ಸಿಕ್ಕಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಹೌದು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಈ ಬಾರಿಯೂ ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕರಾವಳಿಯ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪೈಕಿ ಸಚಿವ ಸ್ಥಾನ ದಕ್ಕಿದ್ದು ಕೋಟ ಶ್ರೀನಿವಾಸ ಪೂಜಾರಿ ಒಬ್ಬರಿಗೆ ಮಾತ್ರ. ಇನ್ನು ಅಚ್ಚರಿ ಎಂದರೆ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ, ಪ್ರಮಾಣವಚನ ಸ್ವೀಕರಿಸಲು ಬೆಂಗಳೂರಿಗೆ ಬನ್ನಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಕರೆ ಹೋಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಶೆಟ್ಟರಿಗೆ ಸಚಿವ ಸ್ಥಾನ ನೀಡದೇ, ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿಗಿರಿ ಲಭಿಸಿತ್ತು.

ಅಂದು ನಡೆದ ಈ ಘಟನೆ ಮೃದು ಸ್ವಭಾವದ ಹಾಲಾಡಿಯವರ ಮನಸ್ಸನ್ನು ಕದಡಿ ಹಾಕಿತ್ತು. ಅಂದು ಅಕ್ಷರಶಃ ಕುಂದಾಪುರದ ಜನತೆಯ ಮುಂದೆ ಹಾಲಾಡಿ ಶ್ರೀನಿವಾಸ್ ಶೆಟ್ಟರು ಕಣ್ಣೀರಿಟ್ಟಿದ್ದರು. ಅದೇ ಘಳಿಗೆಯಲ್ಲಿ ಅವರು ತೆಗದುಕೊಂಡ ನಿರ್ಧಾರವೆಂದರೆ ಬಿಜೆಪಿಯಿಂದ ಹೊರ ಬರುವುದು. ಹೌದು, ಮನನೊಂದ ಹಾಲಾಡಿ ಶ್ರೀನಿವಾಸ್ ಶೆಟ್ಟರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಮುಂದೆ 2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದರು.

ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೇ ಯಡಿಯೂರಪ್ಪನವರ ತೀವ್ರ ಒತ್ತಡದಿಂದ ಮತ್ತೆ ಬಿಜೆಪಿಗೆ ಸೇರಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಂದರು. ಬಿಎಸ್‍ವೈ ಅವರ ಮಾತಿಗೆ ಬೆಲೆಕೊಟ್ಟು ಶೆಟ್ಟರು, ಬಿಜೆಪಿಗೆ ಬಂದರು. ಆದರೆ ಇಂದು ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾರೆ, ಆದರೆ, ಅಂದು ಅವರು ಹಾಲಾಡಿಗೆ ಕೊಟ್ಟಿದ್ದ ಮಾತು ಮಾತ್ರ ಮತ್ತೆ ಹುಸಿಯಾಗಿದೆ. ಬಿ.ಎಸ್. ಯಡಿಯೂರಪ್ಪನವರನ್ನು ನಂಬಿ ಮತ್ತೆ ‘ಬಲಿಪಶು’ವಾಗಿದ್ದಾರೆ ‘ಕುಂದಾಪುರದ ವಾಜಪೇಯಿ’ ಹಾಲಾಡಿ ಶೆಟ್ಟಿ.

LEAVE A REPLY

Please enter your comment!
Please enter your name here