ಸೂಕ್ಷ್ಮ‌‌ ಮನಸ್ಸಿನ ಹಳ್ಳಿ ಹಕ್ಕಿ ಎಚ್.ವಿಶ್ವನಾಥ ಅವರ ಮಾತುಕತೆ

0
210

ಸಾರ್ವಜನಿಕ ಬದುಕಿನಲ್ಲಿ ಇರುವ ವ್ಯಕ್ತಿಯ ವೈಯಕ್ತಿಕ ಸಂಗತಿಗಳನ್ನು ಎಲ್ಲ ವಿಷಯಗಳಿಗೆ ಎಳೆದು ತರಬಾರದು.
ಕಾಮ,ಮದುವೆ,ಲೈಂಗಿಕ ಹಗರಣಗಳ ಪ್ರಸ್ತಾಪ ಮಾಡಿ ತೇಜೋವಧೆ ಮಾಡುವುದು ಒಂದು ಸಾಮಾಜಿಕ ಪಿಡುಗು.‌

ಅವರು ತಮ್ಮ ಸಾರ್ವಜನಿಕ ಜೀವನದ ಜವಾಬ್ದಾರಿಯನ್ನು ಜನಪರವಾಗಿ ನಿಭಾಯಿಸುತ್ತಾರಾ ? ಎಂಬ ಪ್ರಶ್ನೆ ಮಾತ್ರ ನಮ್ಮನ್ನು ಕಾಡಬೇಕು.

ಸೂಕ್ಷ್ಮ ಮನಸಿನ ಕೊಂಚ ಬದ್ಧತೆಯನ್ನು ಹೊಂದಿರುವ,ಅತಿ ಜಾಣ ಎಚ್.ವಿಶ್ವನಾಥ ತಮ್ಮ undiplomat ನಡೆಯಿಂದಾಗಿ ಅಧಿಕಾರ ವಂಚಿತರಾದವರು.‌ ರಾಜಕಾರಣದಲ್ಲಿ ಬರೀ ಜಾಣತನ ಸಾಲದು,ಸಂಯಮದೊಂದಿಗೆ ಚಾಣಾಕ್ಷತನವೂ ಬೇಕು.

ನೇರವಾಗಿ ಅನೇಕ ಬಾರಿ ದೇವೇಗೌಡರ ಕುಟುಂಬ‌ ರಾಜಕಾರಣ ಟೀಕಿಸಿ ಲೋಕಸಭಾ ಚುನಾವಣೆಯಲ್ಲಿ ಸೋತರು

‘ಹಳ್ಳಿ ಹಕ್ಕಿ ಹಾಡಿ’ ನಲ್ಲಿ ಎಸ್.ಎಂ.ಕೃಷ್ಣ ಅವರ ಹಳೆ ನಂಬರ್ ವಿಷಯ ಪ್ರಸ್ತಾಪಿಸಿ ಮತ್ತದೇ ಒಕ್ಕಲಿಗರ ವೈರ ಕಟ್ಟಿಕೊಂಡರು.

ಮಂತ್ರಿಯಾಗಿದ್ದಾಗ ಮಠಾಧೀಶರನ್ನು ಎದುರು ಹಾಕಿಕೊಂಡು ಪ್ರಮುಖ ಖಾತೆ ಕಳಕೊಂಡ ಗಟ್ಟಿಗರೆನಿಸಿಕೊಂಡರೂ ಮುಖ್ಯ ಮಂತ್ರಿಗಳು ಕ್ಷಮೆ ಕೇಳುವಂತೆ ಮುಜುಗರ ಉಂಟು ಮಾಡಿದರು.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷದಲ್ಲಿ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಮುತ್ಸದ್ದಿ ಜನಪರ ಆಲೋಚನೆ ಹೊಂದಿದ್ದ ಸಿದ್ದರಾಮಯ್ಯನವರು ರಾಜಕಾರಣದ ಹೊಂದಾಣಿಕೆಯ ಕೆಲ ಪಟ್ಟುಗಳನ್ನು ದೇವೇಗೌಡರು ಕೊಟ್ಟ ಪೆಟ್ಟಿನಿಂದ ಕಲಿತಿದ್ದರು.
ಅದಕ್ಕಾಗಿ ಅವರು ಮುಖ್ಯ ಮಂತ್ರಿಯಾಗಿ ಮಾಡಿಕೊಂಡ ಕೆಲ ಅನಿವಾರ್ಯ ಒಪ್ಪಂದಗಳನ್ನು ವಿಶ್ವನಾಥ ಸಹಿಸಿಕೊಳ್ಳಲಿಲ್ಲ.

ಮತ್ತದೇ ನೇರ ದಾಳಿಯ undiplomat ನುಡಿ-ನಡೆ. ಸಿದ್ದರಾಮಯ್ಯವರ ಹಾಗೆ ಜಾತಿ ಬೆಂಬಲ ಮತ್ತು ಅಹಿಂದ ಸಾಮೂಹಿಕ ನಾಯಕತ್ವ ಗುಣ ಹೊಂದಿರದ ವಿಶ್ವನಾಥ ತಮ್ಮ ಮಿತಿ ಅರಿತು ಸಹನೆ ಕಳೆದುಕೊಳ್ಳಬಾರದಿತ್ತು.

ಸಿದ್ದರಾಮಯ್ಯನವರೊಂದಿಗಿನ ಹೊಂದಾಣಿಕೆಗೆ ಅವರ ಮನಃಸಾಕ್ಷಿ ಒಪ್ಪದಿದ್ದಾಗ ಅನಿವಾರ್ಯವಾಗಿ ಜಾತ್ಯಾತೀತ ಎಂಬ ಹಣೆಪಟ್ಟಿ ಅಂಟಿಸಿಕೊಂಡ ತೆನೆ ಹೊತ್ತ ಮಹಿಳೆಯ ಕೈ ಹಿಡಿದು
ವಿಧಾನಸಭೆಯನ್ನು ಪ್ರವೇಶಿಸಿದರು.

ದೈಹಿಕವಾಗಿ,ಮಾನಸಿಕವಾಗಿ, ಆರ್ಥಿಕವಾಗಿ ಜರ್ಝರಿತರಾಗಿದ್ದ ವಿಶ್ವನಾಥ ಅವರಿಗೆ ಅಧಿಕಾರದ ಅಗತ್ಯವಿತ್ತು. ಆದರೆ ಏಕಪಕ್ಷೀಯ ಮನಸ್ಥಿತಿಯ ಗೌಡರು ಸಿದ್ದರಾಮಯ್ಯನವರ ನೆಪ ಇಟ್ಟುಕೊಂಡು ಮಂತ್ರಿ ಪದವಿ ನೀಡದೇ ಸತಾಯಿಸಿದರು.

ಕೆಲ ಸಚಿವರ ಅಪ್ರಬುದ್ಧ ನಡೆಯಿಂದ ತತ್ತರಿಸಿ ಹೋದರು.
ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಸೈದ್ಧಾಂತಿಕ ವಿರೋಧಿಗಳ ಅಟ್ಟಹಾಸ ಕಂಡು ಅಸಹಾಯಕರಾದರು.

ಜೆಡಿಎಸ್ ಕುಟುಂಬದ ಪಕ್ಷ ಎಂದು ಗೊತ್ತಿದ್ದರೂ ಅಂತಹ ಪಕ್ಷದ ಡೆಮ್ಮಿ ಅಧ್ಯಕ್ಷರಾದರು. ರಾಕ್ಷಸ ರಾಜಕಾರಣದ ಮಾತು ಪ್ರಾರಂಭಿಸಿದರು.
ಹಣ,ಅಧಿಕಾರ,ಆರೋಗ್ಯ ಕಳೆದುಕೊಂಡು ಹತಾಶರಾದರು.

ಮುಖ್ಯ ಮಂತ್ರಿಗಳು ಮತ್ತವರ ಜಾತಿ ಬಾಂಧವರ ಬಹಿರಂಗ ವರ್ತನೆಯನ್ನು ಸಹಿಸಿಕೊಳ್ಳಲಾಗದ ಸ್ಥಿತಿ ತಲುಪಿದಾಗ ಬಂಡಾಯ ಬಾವುಟ ಹಾರಿಸಿದರು.

ಹಳೆಯ ಸಂಗಾತಿಗಳಾದ ಎಸ್.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ ಅವರ ಮೂಲಕ ಈಗ ಅನಿವಾರ್ಯವಾಗಿ ಹೊಸ ಮಾರ್ಗ ಕಂಡುಕೊಂಡು ತಮ್ಮ ಸಿಟ್ಟನ್ನು ಶಮನ ಮಾಡಿಕೊಂಡಿದ್ದಾರೆ.

ದೇವರಾಜ ಅರಸು ಅವರ ಕಾಲದಲ್ಲಿ ತಮ್ಮೊಂದಿಗೆ ವಿಧಾನಸಭೆ ಪ್ರವೇಶಿಸಿದ್ದ ಸ್ಪೀಕರ್ ಸಾಹೇಬರ ಕಠೋರ ಮಾತುಗಳನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದೆ.

ವಿಧಾನ ಸಭೆಯಲ್ಲಿ ಇವರ ಆರ್ಥಿಕ ಅಸಹಾಯಕತೆ ಮತ್ತು ವೈಯಕ್ತಿಕ ಆಡಿಯೋ ಕುರಿತು ಕೀಳಾಗಿ ಆಡಿಕೊಂಡರೂ ಸುಮ್ಮನಿರಬೇಕಾಗಿದೆ.

ವಿಶ್ವನಾಥ ಅವರು ಅನೇಕ ಬಾರಿ ಶಾಸಕರಾಗಿ,ಮಂತ್ರಿಗಳಾಗಿ,ಸಂಸದರಾಗಿ ಹೊರಗೆ,ಒಳಗೆ ತಮ್ಮ ಬದ್ಧತೆಯ ಮಾತುಗಳ ಮೂಲಕ ಇಡೀ ನಾಡಿನ ಜನರ ಪ್ರೀತಿ,ವಿಶ್ವಾಸ ಗಳಿಸಿಕೊಂಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ ಇಲಾಖೆಗಳ ಸಚಿವರಾಗಿ ಪ್ರಜ್ಞಾವಂತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ
.‌
ಓದು,ಬರಹ,ಮಾತು ಮತ್ತು ಆಡಳಿತದಲ್ಲಿ ಸೂಕ್ಷ್ಮತೆ ಉಳಿಸಿಕೊಂಡಿರುವ ವಿಶ್ವನಾಥ ಅವರ ಸ್ಥಿತಿ ‘ತೋಳ ತೆಗ್ಗಿಗೆ ಬಿದ್ದರೆ ಆಳಿಗೊಂದು ಕಲ್ಲು’ ಎಂಬಂತಾಗಿದೆ.

ವಿಧಾನಸಭೆಯಲ್ಲಿ ವಿಶ್ವಾಸ ಮತದ ಸಂದರ್ಭದಲ್ಲಿ ವೀರಾವೇಶದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿದವರಿಗೆ ಬೇಗ ಉತ್ತರಿಸುವ ಕಾಲ ಕೂಡಿಬರಲಿ.

ವಿಶ್ವನಾಥ ಅವರು ಸಮ್ಮಿಶ್ರ ಸರಕಾರ ಬೀಳಿಸುವ ಗಟ್ಟಿ ನಿರ್ಧಾರ ಮಾಡಿ ತಾತ್ಕಾಲಿಕ ವಿಜಯದ ನಗೆ ಬೀರಿದ್ದಾರೆ.

ಈಗ ಚುನಾವಣಾ ರಾಜಕಾರಣದ ಸಹವಾಸ ಬೇಡ ಅನ್ನುತ್ತಲೇ ದೇವೇಗೌಡರು ಮತ್ತು ‌ಯಡೆಯೂರಪ್ಪನವರನ್ನು ಹೊಗಳಿದ್ದಾರೆ.
ಇದೊಂದು ವಿಚಿತ್ರ ಜಾಣತನ.
ಡಿ.ಕೆ.ಶಿವಕುಮಾರ ಕುರಿತು ಸಾಫ್ಟ್ ಕಾರ್ನರ್ ಇಟ್ಟುಕೊಂಡಿದ್ದಾರೆ.

ಎಚ್.ವಿಶ್ವನಾಥ ಅವರಂತಹ ಜಾಣರು ನಮ್ಮ ಸಂಸದೀಯ ವ್ಯವಸ್ಥೆಯ ಭಾಗವಾಗಿ ಉಳಿಯಬೇಕು. ತುಂಬಾ ನೊಂದಿರುವ ಅವರು ಈಗ ಆವೇಶದಲ್ಲಿ ಮಾತನಾಡಿದ್ದಾರೆ.

ಆದರೆ ರಾಜಕಾರಣದಲ್ಲಿ ಯಾವ ಮಾತುಗಳು ಸತ್ಯವೂ ಅಲ್ಲ, ಸುಳ್ಳು ಅಲ್ಲ. ಮಾತು ಬರೀ ಮಾತಿಗಾಗಿ ಅಷ್ಟೇ.
ಜನರ ಒತ್ತಾಯದ ನೆಪದಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಮರಳಲಿ.

ಇಂದಿನ ಶಾಸಕರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಎಷ್ಟೋ ಜನ ಮಾತನಾಡುವುದು ದೂರದ ಮಾತು, ದಿನಪತ್ರಿಕೆ ಓದಲಾರದವರೂ ಇದ್ದಾರೆ.
ಶಾಸನ ಸಭೆಯ ಯಾವುದೇ ಚರ್ಚೆಗಳಲ್ಲಿ ಭಾಗವಹಿಸುವ ಯೋಗ್ಯತೆ ಕೂಡ ಇಲ್ಲ. ವೃತ್ತಿ ರಾಜಕಾರಣಿಗಳ ಅನಿವಾರ್ಯತೆ ಇದೆ.

ದಿನದಿಂದ ದಿನಕ್ಕೆ ಪ್ರಜ್ಞಾವಂತರ ಕೊರತೆ ಹೆಚ್ಚಾಗುತ್ತಿರುವಾಗ ವಿಶ್ವನಾಥ ಅವರಂತಹ ಜಾಣರು ಹೊರಗುಳಿಯಬಾರದು.
ಎಡ-ಬಲ ಸಿದ್ಧಾಂತಗಳ ಲೆಕ್ಕಾಚಾರ ದೂರ ಮಾಡಿ ರಾಷ್ಟ್ರೀಯ ಪಕ್ಷಗಳ ಮೂಲಕ ತಮ್ಮ ಅಸ್ಮಿತೆ ಉಳಿಸಿಕೊಳ್ಳುವ ಅನಿವಾರ್ಯ ವಾತಾವರಣ ಇರುವಾಗ ಯಾವ ಪಕ್ಷವಾದರೇನು?

ವಾಸವಿರಲು ಮನೆ ಬೇಕೇ ಬೇಕು, ಸ್ವಂತದ್ದೋ, ಬಾಡಿಗೆಯದೋ ಮುಖ್ಯ ಅಲ್ಲ.

ಹಾಗೇನಾದರು ಪವಾಡ ನಡೆದು ವಿಶ್ವನಾಥ ಅವರಿಗೆ ಅಧಿಕಾರ ಸಿಕ್ಕರೆ…

ಮುಂದಿನ ದಿನಗಳಲ್ಲಿ ಸಿಗುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಸುವರ್ಣ ಯುಗ ದಕ್ಕಿಸಿಕೊಳ್ಳಲಿ.

ಬಿಜೆಪಿ ಕೋಮುವಾದಿ,ರಾಷ್ಟ್ರೀಯವಾದಿ ಪಕ್ಷ ಎಂಬ ಟೀಕೆ ಹೊತ್ತುಕೊಂಡು ಅಧಿಕಾರ ಹಿಡಿದುಕೊಂಡಿದ್ದು ಈಗ ಇತಿಹಾಸ. ಅದು ವಿಶ್ವನಾಥ ಅವರಿಗೂ‌ ಗೊತ್ತಿದೆ.

ಮುಂದೊಂದು ದಿನ ಆ ಪಕ್ಷವನ್ನು ಟೀಕಿಸದೇ ಅರ್ಥಪೂರ್ಣ ಜನಪರ ಕೆಲಸಗಳ ಮೂಲಕ ಸಾರ್ವಜನಿಕ ಬದುಕಿನ ವಾಸ್ತವ ಅರಿತುಕೊಳ್ಳಲಿ.

ಅಸಹನೆ, ಸಾತ್ವಿಕ ಸಿಟ್ಟು, ಪ್ರಾಮಾಣಿಕತೆ, ಪಕ್ಷ ನಿಷ್ಠೆ ಇತ್ಯಾದಿ ಪದಗಳು ರಾಜಕಾರಣದ ಅಂಗಳದಿಂದ ದೂರ ಸರಿದು ಈಗ ಕೇವಲ ಅಧಿಕಾರ ರಾಜಕೀಯ ಉಳಿದುಕೊಂಡ ಸತ್ಯ ವಿಶ್ವನಾಥ ಅವರಿಗೆ ಗೊತ್ತಿರದ ಸಂಗತಿಯಲ್ಲ ಆದರೂ…

#ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here