ಕನಸುಗಾರ ಮಾತ್ರ ಭೂಮಿಯ ಮೇಲೆ ಸ್ವರ್ಗ ನಿರ್ಮಿಸುತ್ತಾನೆ

0
516

ಈ ಜಗತ್ತು ಕೋಟ್ಯಂತರ ಜನರಿಂದ ತುಂಬಿದೆ. ಇಲ್ಲಿ ಬಡವರು,ಶ್ರೀಮಂತರು ಮತ್ತು ಅಸಹಾಯಕರು ಇದ್ದಾರೆ. ಎಲ್ಲರೂ ಹೊಟ್ಟೆ, ಬಟ್ಟೆಗಾಗಿ ಹೋರಾಡುತ್ತಾರೆ. ಆಯುಷ್ಯ ತೀರಿದ ಬಳಿಕ ಸದ್ದಿಲ್ಲದೆ ಹೋಗಿಬಿಡುತ್ತಾರೆ. ಆದರೆ ಆ ಕೋಟ್ಯಾಂತರ ಜನರಲ್ಲಿ ಕೆಲವೇ ಕೆಲವು ಜನ ಮಾತ್ರ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.
ಅವರೇ ಸಾಧಕರು I mean star souls.

ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಹಗಲಿರುಳು ಶ್ರಮಿಸುತ್ತಾರೆ. ನೋವು, ಸಂಕಷ್ಟ, ಅವಮಾನಗಳ ಲೆಕ್ಕಿಸದೇ ಹೋರಾಡಿ ಸಾಧನೆಯಲ್ಲಿ ಗೆದ್ದು ಸಂಭ್ರಮಿಸುತ್ತಾರೆ. ಉಳಿದವರು ಅವರ ಸಾಧನೆಯ ಪಾಲುದಾರಿಕೆ ಪಡೆದು ಖುಷಿ ಅನುಭವಿಸುತ್ತಾರೆ. ಇಂತಹ ಸಾಧಕರಿಗೆ ಹುಟ್ಟು ಇದೆ ಆದರೆ ಸಾವು ಇಲ್ಲವೇ ಇಲ್ಲ.
ಮೂರು ದಶಕಗಳ ಪಯಣದಲಿ ಅನೇಕ ಸಾಧಕರು ಹಲವಾರು ಕಾರಣಗಳಿಂದ ಆಪ್ತರಾಗಿ ಮನದಲಿ ಅಚ್ಚಳಿಯದೆ ನೆಲೆಗೊಂಡಿದ್ದಾರೆ.

ಅಂತಹ ಹುಡುಕಾಟದಲ್ಲಿ ಭೇಟಿಯಾದ ಗುಹಾಂತರ ರೆಸಾರ್ಟ್‌ ಒಡೆಯ, ರಾಶಿ ಎಕೋ ಟೂರಿಸಂ ಪಾಲುದಾರ ಎಸ್.ಎನ್. ರಮೇಶ್ ಹೊಸ ಲೋಕವಂದನ್ನು ಪರಿಚಯಿಸಿದ್ದಾರೆ. ವೃತ್ತಿಯಿಂದ ಇಂಜಿನಿಯರ್, ಆರ್ಕಿಟೆಕ್ಟ್ ಪ್ರವೃತ್ತಿಯಿಂದ ಕವಿ,ಕಲಾವಿದ,ರಂಗನಟ, ಅದ್ಭುತ ಕನಸುಗಾರ. ಇಷ್ಟು ಸಾಕಲ್ಲ ಒಬ್ಬ ವ್ಯಕ್ತಿ ಇತಿಹಾಸ ನಿರ್ಮಿಸಲು. ಚಿಕ್ಕಮಗಳೂರಿನ ಪುಟ್ಟ ಹಳ್ಳಿ ಸಾದರಹಳ್ಳಿ ಜನಿಸಿದ ರಮೇಶ್ ಡಿಪ್ಲೊಮಾ ಪದವಿ ಗಳಿಸಿ ಹೊಟ್ಟೆ ಪಾಡಿಗೆ ಬೆಂಗಳೂರು ತಲುಪಿದ್ದು ಕೇವಲ ನೆಪ.

ಈಗ ಸಪ್ತ ಸಾಗರಾದಾಚೆ ಅವರು ಲಕ್ಷಾಂತರ ರಸಿಕರ ಮನದಲ್ಲಿ ನೆಲೆಗೊಳ್ಳಲು ಅವರು ನಿರ್ಮಿಸಿದ ಗುಹಾಂತರ ಮತ್ತು ಇತರ ರೆಸಾರ್ಟ್‌ ಗಳೇ ಕಾರಣ. ಶಿಕ್ಷಕನ ಮಗನಾಗಿ ಹುಟ್ಟಿದ ರಮೇಶ್ ಬೆಳೆಯಲು ಬಾಯಲ್ಲಿ ಬಂಗಾರ ಚಮಚೆ ಬೇಕಿರಲಿಲ್ಲ, ಕಣ್ಣ ತುಂಬ ಕನಸುಗಳ ಸಿರಿವಂತಿಕೆ ಸಾಕಿತ್ತು. ತಮ್ಮ ಸ್ನೇಹಿತ ಸಿ.ಎಚ್. ರಮೇಶ್ ಸಾಂಗತ್ಯದೊಡನೆ R square ಎಂಬ ಕನ್ಸಟ್ರಕ್ಷನ್ ಕಂಪನಿ ಆರಂಭಿಸಿ ಸಾವಿರಾರು ವಿನೂತನ ವಿನ್ಯಾಸದ ಭವ್ಯ ಕಟ್ಟಡಗಳ ನಿರ್ಮಾಣಕೆ ಕಾರಣರಾದರು.

ವೈಯಕ್ತಿಕ ತುಡಿತದ ಹಸಿವು ನೀಗಿಸಲು ಕನಕಪುರ ರಸ್ತೆಯ ಕಗ್ಗಲಿಪುರದ ಹತ್ತಿರದಲ್ಲಿ ಜಮೀನು ಖರೀದಿಸಿ ಗುಹಾಂತರ ನಿರ್ಮಾಣ ಆರಂಭಿಸಿದರು. ನಿರ್ಮಾಣ ಹಂತದ ಗುಹಾಂತರ ಕಂಡವರು ಇವರ ಹುಚ್ಚು ಕನಸಿಗೆ ಬೆಚ್ಚಿ ಬಿದ್ದು ಹೌಹಾರಿದರು. ಕನಸುಗಾರರ ಕನಸುಗಳ ಕಲರವ ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಕನಸುಗಳಿಗೆ ಬಣ್ಣ ತುಂಬಿ ಮೈದಾಳಿದಾಗ ವಾಸ್ತವ ನೆಲೆಗೊಳ್ಳುತ್ತದೆ.

ಪಟ್ಟಣದಿಂದ ಇಷ್ಟೊಂದು ದೂರದ ಈ ಗುಹೆಗೆ ಯಾರು ಬರುತ್ತಾರೆ ಎಂಬ ಮೂದಲಿಕೆಯ ಕೇಳಿಸಿಕೊಳ್ಳದ ಭರವಸೆ ರಮೇಶ್ ಅದ್ವಯರದು‌. 2008 ರಲ್ಲಿ ಆರಂಭವಾದ ಈ ಗುಹಾಂತರ ಲಕ್ಷಾಂತರ ಮನಸುಗಳ ಅಚ್ಚುಮೆಚ್ಚಿನ ತಂಗುದಾಣ. ಗುಹೇಶ್ವರ ಮತ್ತು ಅಲ್ಲಮಪ್ರಭುವಿಗೂ ಎತ್ತಣಿದೆತ್ತ ಸಂಬಂಧವಯ್ಯ?

ಹಾಗೆ ಈ ರಮೇಶ್ ಮತ್ತು ಗುಹೇಶ್ವರನಿಗೂ ಎತ್ತಣದೆತ್ತ ಸಂಬಂಧ ಎನ್ನಲಾಗದು. ಗುಹೆ-ಬಯಲು-ಆಲಯ ರಮೇಶ್ ಅವರ ಪರಿಕಲ್ಪನೆಯೂ ಹೌದು. ಕತ್ತಲ ಇಕ್ಕಟ್ಟಾದ ದಾರಿಯಲ್ಲಿ ಸಾಗಿದ ಮೇಲೆ ಗುಹೇಶ್ವರನಿಗೆ ನಮಿಸಿ ಒಳ ಪ್ರವೇಶಿದ ಕೂಡಲೇ ವಿಶಾಲ ಬಯಲು. ಮತ್ತೆ ತೆರೆದುಕೊಳ್ಳುವ ನೀರಾಟದ ಪರಿಸರ. ಕೇವಲ ಅನುಭವಿಸಬೇಕು. ವಿವರಿಸಲಾಗದ ಅವರ್ಣನೀಯ ಆನಂದ.

ಗುಹೆಯ ಕಲ್ಪನೆಯ ರೂಮುಗಳ ಪರಿಸರದೊಂದಿಗೆ ಆಧುನಿಕ ಸೌಲಭ್ಯಗಳು. ಸ್ವಿಮ್ಮಿಂಗ್ ಕೊಳಗಳ ಆಟ, ರೇನ್ ಡ್ಯಾನ್ಸ್ ನರ್ತನ,ರುಚಿಕಟ್ಟಾದ ಊಟ, ಕುದುರೆ ಸವಾರಿ, ಸೈಕಲ್ ಓಡಿಸುವ ಬಾಲ್ಯದಾಟ. ಎಲ್ಲ ಹೇಳಿದರೆ ಮಜಾ ಇರಲ್ಲ. ಅದಮ್ಯ ಖುಷಿ ಅನುಭವಿಸಲು ಗುಹಾಂತರದೊಳಗೆ ಒಮ್ಮೆ ವಾಸಿಸಿ ಬನ್ನಿ.

ಕನಸುಗಾರ ರಮೇಶ್ ಅವರ ಸಾಧನೆ,ಕನಸಿನ ಮನೆ ಮತ್ತು ಇತರ ರೆಸಾರ್ಟ್ ವಿಶೇಷತೆಗಳನ್ನು ಮತ್ತೆ ಮುಂದೆ ಹೇಳುವೆ. ಈಗ ನಮ್ಮ ಕನ್ನಡ YouTube ವಾಹಿನಿಯ #Life_Guru ಮತ್ತು #ಕಾವ್ಯಲೋಕ ಕಾರ್ಯಕ್ರಮಗಳಿಗೆ ಲೊಕೆಶನ್ ನೆರವು ನೀಡಿದ್ದಾರೆ. ಕಾವ್ಯಲೋಕದಲ್ಲಿ ತಮ್ಮ ಕವಿತೆಗಳ ರಸಗವಳ ಉಣ ಬಡಿಸಲಿದ್ದಾರೆ. ಉಳಿದದ್ದು ಮತ್ತೆ ಹೇಳುವೆ…

ಸದ್ಯ ಇಂಜಿನಿಯರ್ ದಿನಾಚರಣೆಯ ಪ್ರಯುಕ್ತ ರಮೇಶ್ ಅದ್ವಯರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

ಸಿದ್ದು_ಯಾಪಲಪರವಿ.

ಲೈಫ್ ಗುರು ಖ್ಯಾತಿಯ ಬರಹಗಾರ

LEAVE A REPLY

Please enter your comment!
Please enter your name here