ಓಡಾಡಲು ಆಗಲ್ಲ ಎಂದು‌ ಕಣ್ಣೀರಿಟ್ಟ ಕಾರಜೋಳ: ಆಗ್ಲಿಲ್ಲ ಅಂದ್ರೆ ಅಧಿಕಾರ ಬಿಟ್ಟು ಮನೆಗೆ ಹೋಗಿ ಎಂದು ವಿಪಕ್ಷದಿಂದ ಒತ್ತಾಯ

0
68

ಬೆಂಗಳೂರು: ನನಗೆ 70 ವರ್ಷ ವಯಸ್ಸಾಗಿದೆ. ನಾನು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದೇನೆ. 600, 700 ಕಿ.ಮೀ.ಓಡಾಡಲು ಆಗುವುದಿಲ್ಲ ಎಂದು ಅಸಹಾಯಕತೆಯಿಂದ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಕಣ್ಣೀರು ಹಾಕಿದ್ದೇ ತಡ ಪ್ರತಿಪಕ್ಷಗಳಿಂದ ಟೀಕೆಯ ಮಹಾಪೂರವೇ ಹರಿದು ಬರ್ತಿದೆ.

“ಕೈಯಲ್ಲಿ ಆಗಿಲ್ಲ ಅಂದ್ರೆ ಅಧಿಕಾರ ಬಿಡಿ”

ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಭೇಟಿ ನೀಡಲು ತಮಗೆ ವಯಸ್ಸಾಗಿದೆ, ಕೋವಿಡ್ ಇದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ಕಣ್ಣೀರು ಹಾಕಿರುವ ಕುರಿತು ಉತ್ತರಿಸಿದ ಡಿ.ಕೆ ಶಿವಕುಮಾರ್, ‘ಜನರ ಸಮಸ್ಯೆಗೆ ಸ್ಪಂದಿಸಲು ಆಗದಿದ್ದರೆ, ಸಚಿವ ಸ್ಥಾನ ಬಿಡಬೇಕು. ಅಧಿಕಾರ ಬಿಟ್ಟು ಮನೆ ಸೇರಿಕೊಂಡರೆ ಉತ್ತಮ. ನಿಮ್ಮ ಸ್ವಂತ ಹಿತಕ್ಕಾಗಿ ರಾಜ್ಯ ಹಾಗೂ ರಾಜ್ಯದ ಜನರನ್ನು ಬಲಿ ಕೊಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸ್ಥಳೀಯ ನಾಯಕರಿಗೆ ಈಗಾಗಲೇ ತಮ್ಮ ಕೈಲಾದ ಸಹಾಯ ಮಾಡಿ ಅಂತಾ ಸೂಚನೆ ನೀಡಿದ್ದೇವೆ. ಅವರಿಗೆ ಧೈರ್ಯ ತುಂಬಲು ಹೇಳಿದ್ದೇವೆ. ಮಿಕ್ಕ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ’. ‘ಪ್ರಧಾನ ಮಂತ್ರಿಗಳು ಸಹಾಯ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರು ಇಲ್ಲಿಗೆ ಬರಲೂ ಇಲ್ಲ. ಯಾವ ಸಹಾಯವನ್ನು ಮಾಡಲೂ ಇಲ್ಲ. ಈ ಸರ್ಕಾರದಲ್ಲಿ ಜೀವಕ್ಕೆ ರಕ್ಷಣೆ ಇಲ್ಲದಾಗಿದೆ ಎಂದು ವಾಗ್ದಾಳಿ ನಡೆಸಿದರು.

“ಕೊರೊನಾ ನೆಪ ಹೇಳಿ ಚುನಾವಣೆಗೆ ಸಿದ್ದತೆ ”

ನೆರೆ ಹಾವಳಿಯಿಂದಾಗಿ ಕಲ್ಯಾಣ ಕರ್ನಾಟಕ ನಲುಗಿ ಹೋಗಿದ್ದರೂ ಸಂತ್ರಸ್ತರ ಮೊರೆ ಆಲಿಸಬೇಕಾದ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಹದಿಂದ ಕಲ್ಯಾಣ ಕರ್ನಾಟಕ ಕೊಚ್ಚಿ ಹೋಗುತ್ತಿದೆ. ಜನ ತಮ್ಮ ಜೀವ ಉಳಿದರೆ ಸಾಕು ಎಂದು ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ್ರರ ಮೊರೆ ಆಲಿಸಬೇಕಾದ, ಅವರಿಗೆ ಸಾಂತ್ವನ ಹೇಳಬೇಕಾದ ಸಚಿವರುಗಳು ನಾಪತ್ತೆಯಾಗಿದ್ದಾರೆ. ಕೆಲ ಸಚಿವರು ಉಪ ಚುನಾವಣೆಯಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿ ಪ್ರವಾಹದ ಬಗ್ಗೆ ಮೈ ಮರೆತಿದೆ. ಇನ್ನಾದರೂ ಸರ್ಕಾರ ಪ್ರವಾಹ ಸಂತ್ರಸ್ತ್ರರನ್ನು ಕಣ್ತೆರೆದು ನೋಡಲಿ. ಕೂಡಲೇ ಅವರ ನೆರವಿಗೆ ಧಾವಿಸಲಿ. ಕೊರೊನಾ ನೆಪ ಹೇಳಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲಿ ಸಭೆಗಳನ್ನು ನಡೆಸುವುದನ್ನು ಬಿಟ್ಟು ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ಕೊಟ್ಟು ನೊಂದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದರು.

ಕಾರಜೋಳ ಹೇಳಿಕೆ ಏನು..?

ಪ್ರಚಾರ ಮಾಡ್ತಾರೆ, ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದವರ ಬಳಿ ಹೋಗಲ್ಲ ಎಂಬುದರ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ  ಗೋವಿಂದ ಕಾರಜೋಳ, ನನಗೆ 70 ವರ್ಷ. ನಾನು ಇಷ್ಟು ವರ್ಷ ಯಾವ ರೀತಿ ಕೆಲಸ ಮಾಡಿದ್ದೇನೆ, ಕೊರೊನಾ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ನಿಮಗೆ ತಿಳಿದಿದೆ. ನಾನು, ನನ್ನ ಕುಟುಂಬ ನಿರಂತರವಾಗಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ 600-700 ಕಿ.ಮೀ. ಹೋಗಲು ಆಗಲ್ಲ. ನನ್ನ ಪರಿಸ್ಥಿತಿ ಅರಿತು ಮುಖ್ಯಮಂತ್ರಿಗಳು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ರಾಜ್ಯ ಪ್ರವಾಸಕ್ಕೆ ಕಳುಹಿಸಿದ್ದಾರೆ. ನನ್ನ ಕುಟುಂಬದ ಸದಸ್ಯರು ಕೊರೊನಾದಿಂದ ಬಳಲುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಹೇಳುತಿದ್ದೇನೆ. ದಯಮಾಡಿ ಒಂದು ಘಟನೆಯನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಅಳೆಯಬೇಡಿ ಎಂದು ಕಣ್ಣೀರು ಹಾಕಿದ್ದರು.

LEAVE A REPLY

Please enter your comment!
Please enter your name here