ದರ್ಶನ್ ಸಿನಿಮಾಗಳೇ ಹಾಗೆ ಅವರ ಸಿನಿಮಾ ಬರುತ್ತಿದೆ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕಾಯುವುದಂತು ಸತ್ಯ.. ಇನ್ನು ಈ ವರ್ಷ ತೆರೆಕಂಡ ಮೊದಲ ಅವರ ಸಿನಿಮಾ ಯಜಮಾನ ನೂರು ದಿನಗಳನ್ನು ಪೂರೈಸಿದ್ದು, ಕುರುಕ್ಷೇತ್ರ ಸಿನಿಮಾ ನೂರು ಕೋಟಿ ಗಳಿಸಿರುವುದು ಅಭಿಮಾನಿಗಳ ಮನಸ್ಸಲ್ಲಿ ಸಂತಸ ಮೂಡಿಸಿದೆ .. ಇದರ ನಡುವೆ ಒಡೆಯ ಸಿನಿಮಾ ಕೂಡ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ದರ್ಶನ್ ಹ್ಯಾಟ್ರಿಕ್ ಹೊಡೆಯೋದು ಫಿಕ್ಸ್ ಎನ್ನುತ್ತಿದೆ ಗಾಂಧಿನಗರ.
ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿರುವ ಚಿತ್ರ ‘ರಾಬರ್ಟ್’, ಪ್ರಾರಂಭವಾದಾಗಿನಿಂದಲೂ ಒಂದಲ್ಲಾ ಒಂದು ರೀತಿ ಸದ್ದು ಮಾಡುತ್ತಲೇ ಇದೆ.ಚಿತ್ರದ ಮೊದಲ ಪೋಸ್ಟರ್ ಭಾರೀ ವೈರಲ್ ಆಗಿದ್ದು,ಚಿತ್ರಕ್ಕಾಗಿ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.. ಇನ್ನು ಪ್ರೇಕ್ಷಕರ ಮನ ಸೆಳೆಯಲು ನಿರ್ದೇಶಕ ತರುಣ್ ಸುಧೀರ್ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ.. ಈಗಾಗಲೇ ಪಾಂಡಿಚೇರಿ, ಚೆನ್ನೈ, ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬನಾರಸ್ನತ್ತ ಮುಖ ಮಾಡಿದೆ..
ಇದೀಗ ರಾಬರ್ಟ್ ಚಿತ್ರ ತಂಡ ಚಿತ್ರೀಕರಣಕ್ಕಾಗಿ ಕಾಶಿಯಲ್ಲಿ ಬೇರೂರಿದ್ದು, ಪ್ರತಿಯೊಂದು ಶೆಡ್ಯೂಲ್ನಲ್ಲೂ ವಿಭಿನ್ನವಾದ ಜಾಗದಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಮೇಕಿಂಗ್ ಹೇಗಿರಬಹುದು ಎಂಬ ಕುತೂಹಲಗಳು ಡಿ.ಬಾಸ್ ಅಭಿಮಾನಿಗಳ ಮನದಲ್ಲಿ ಗೂಡು ಬಿಟ್ಟಿದೆ.
ಹಾಗೆಯೇ ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಅವರ ಕೆರಿಯರ್ನಲ್ಲೇ ಸೂಪರ್ ಡೂಪರ್ ಹಿಟ್ ನೀಡಲು ಪಣತೊಟ್ಟಿದ್ದು, ರಾಬರ್ಟ್ ಅನ್ನು ವಿಭಿನ್ನ ಕ್ವಾಲಿಟಿಯಲ್ಲಿ ಚಿತ್ರೀಕರಿಸುತ್ತಿದೆ. ಅದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾ, ಅದ್ಧೂರಿ ಸೆಟ್ಗಳನ್ನು ನಿರ್ಮಿಸಲಾಗಿದೆ. ಒಂದು ಮೂಲದ ಪ್ರಕಾರ ಹಾಲಿವುಡ್ ಚಿತ್ರ ಡಾರ್ಕ್ ನೈಟ್ ಮಾದರಿಯಲ್ಲಿ ರಾಬರ್ಟ್ ಮೇಕಿಂಗ್ ನಡೆಯುತ್ತಿದೆಯಂತೆ.
ದರ್ಶನ್ ಅವರೇ ಸ್ವತಃ ಹೇಳುವಂತೆ, ಅವರು ಸ್ನೇಹಕ್ಕೆ ಮತ್ತು ಸ್ನೇಹಿತರಿಗೆ ಅಪಾರ ಗೌರವವನ್ನು ನೀಡುತ್ತಾರೆ.. ಅಂತೆಯೇ ಅವರ ಆಪ್ತರಲ್ಲಿ ಒಬ್ಬರಾಗಿರುವ ನಿರ್ಮಾಪಕ ಉಮಾಪತಿ ಅವರಿಗೆ ಚಿತ್ರದಲ್ಲಿ ಬಂಡವಾಳ ಹೂಡಲು ಅವಕಾಶ ಒದಗಿಸಿದ್ದಾರೆ. ದಾಸನ ಮೇಲೆ ತುಂಬಾ ನಂಬಿಕೆಯನ್ನೂ ಇಟ್ಟಿರುವ ಉಮಾಪತಿ ಕೂಡ ಬಂಡವಾಳ ಸುರಿಯಲು ಹಿಂದೆ ಮುಂದೆ ನೋಡುತ್ತಿಲ್ಲ. ರಾಬರ್ಟ್ ದರ್ಶನ್ ಅವರ ಕೆರಿಯರ್ನ ಬ್ಲಾಕ್ ಬ್ಲಸ್ಟರ್ ಸಿನಿಮಾವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಗಾಂಧಿನಗರ ಸಿನಿಮಾ ತಜ್ಞರ ಬಾಯಲ್ಲಿ ಕೇಳಿ ಬರುತ್ತಿದೆ.
ದೇವರಾಜ್, ಚಿಕ್ಕಣ್ಣ, ಟಾಲಿವುಡ್ ನಟ ಜಗಪತಿ ಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಬಹು ದೊಡ್ಧ ತಾರಾಬಳಗವನ್ನೇ ಹೊಂದಿರುವ ರಾಬರ್ಟ್ , ಚಿತ್ರದ ಟೈಟಲ್ ಟ್ರ್ಯಾಕ್ಗೆ ಬರೋಬ್ಬರಿ 20 ಗಾಯಕರು ಒಂದಾಗಿರುವಿದು ವಿಶೇಷ..ಈ ಎಲ್ಲಾ ಕಾರಣದಿಂದ ರಾಬರ್ಟ್ ದಿನ ಕಳೆದಂತೆ ದಾಸ ಅಭಿಮಾನಿಗಳ ನಿರೀಕ್ಷೆಯನ್ನು ಡಬಲ್ ಮಾಡುತ್ತಾ ಹೋಗುತ್ತಿದೆ.
ಈಗಾಗಲೇ ಕೆಲ ಆ್ಯಕ್ಷನ್ ಸೇರಿದಂತೆ ಶೇ. 70 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮತ್ತಷ್ಟು ಪ್ರಮುಖ ಸನ್ನಿವೇಶಗಳ ಚಿತ್ರೀಕರಣಕ್ಕಾಗಿ ಬನಾರಸ್ಗೆ ತೆರಳಿದೆ. ಕೇವಲ ಟೈಟಲ್ ಪೋಸ್ಟರ್ ಮೂಲಕ ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹುಟ್ಟುಹಾಕಿರುವ ರಾಬರ್ಟ್ ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.