ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಅಕ್ಕ ಆರತಿ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದ ಚೆಂದುಳ್ಳಿ ಚೆಲುವೆಯ ಹೆಸರು ಅಶ್ವಿನಿ. ಮನೋಜ್ಞ ಅಭಿನಯದ ಮೂಲಕ ಸೀರಿಯಲ್ ಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಅಶ್ವಿನಿ ಇಂದು ಆರತಿ ಎಂದೇ ಫೇಮಸ್ಸು. ಆಕೆ ಇಂದು ಎಲ್ಲಿ ಹೋದರೂ ಜನ ಆಕೆಯನ್ನು ಗಟ್ಟಿಮೇಳದ ಆರತಿ ಎಂದೇ ಗುರುತಿಸುವುದು. ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅವನಿ ಆಗಿ ನಟಿಸಿದ್ದ ಅಶ್ವಿನಿ ಇದೀಗ ಆರತಿ ಎಂದೇ ಜನಪ್ರಿಯ.
ಇಂತಿಪ್ಪ ಚೆಲುವೆ ಇದೀಗ ತೆಲುಗಿನ ಧಾರಾವಾಹಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿಯೂ ತಮ್ಮ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ. ತೆಲುಗಿನಲ್ಲಿ ಆರಂಭವಾಗಲಿರುವ ನಾಗಭೈರವಿ ಧಾರಾವಾಹಿಯಲ್ಲಿ ಅಶ್ವಿನಿ ಅಭಿನಯಿಸಲಿದ್ದಾರೆ. ನಾಗಭೈರವಿ ಯಲ್ಲಿ ಎರಡು ಶೇಡ್ ನಲ್ಲಿ ಅಶ್ವಿನಿ ಕಾಣಿಸಿಕೊಳ್ಳಲಿದ್ದು ಏಕ ಕಾಲಕ್ಕೆ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಭಿನಯಿಸಲಿದ್ದಾರೆ.
ಅಂದ ಹಾಗೇ ಈ ಪಾತ್ರಕ್ಕಾಗಿ ಅಶ್ವಿನಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಪಾತ್ರದ ಸಲುವಾಗಿ ಏಳು ಕೆಜಿ ಇಳಿಸಿಕೊಂಡು ತೆಳ್ಳಗಾಗಿರುವ ಈಕೆ ಇದುವರೆಗೂ ನಿಭಾಯಿಸದ ಪಾತ್ರವೊಂದನ್ನು ಇದೀಗ ನಿಭಾಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೇ ಅಶ್ವಿನಿ ಅವರಿಗೆ ಲಾಕ್ ಡೌನ್ ಮೊದಲೇ ಈ ಧಾರಾವಾಹಿಯಲ್ಲಿ ನಟಿಸುವ ಆಫರ್ ಬಂದಿತ್ತು. ಇದೀಗ ಶೂಟಿಂಗ್ ನಡೆದಿದ್ದು ಸದ್ಯದಲ್ಲಿಯೇ ಧಾರಾವಾಹಿ ಆರಂಭವಾಗಲಿದೆ. ಇದು ನನ್ನ ನಟನಾ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂಬ ನಿರೀಕ್ಷೆಯಲ್ಲಿರುವ ಅಶ್ವಿನಿ ಬಹಳ ಸಂತಸವಾಗಿದ್ದಾರೆ.
ಈಗಾಗಲೇ ಧಾರಾವಾಹಿಯ ಪ್ರೋಮೋಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಸಾಹಸ ದೃಶ್ಯಗಳಲ್ಲಿಯೂ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರಿಗೆ ಸಾಹಸ ಹೇಳಿ ಕೊಟ್ಟ ಮಾಸ್ಟರ್ ಅಶ್ವಿನಿ ಅವರಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಧಾರಾವಾಹಿಗಾಗಿ ಅದನ್ನು ಕಲಿತಿರುವ ಅಶ್ವಿನಿ ಗಟ್ಟಿಮೇಳದ ಜೊತೆಗೆ ನಾಗಭೈರವಿಯಲ್ಲಿ ಅಭಿನಯಿಸುತ್ತಿರುವ ಕಾರಣ ಇನ್ನು ಮೇಲೆ ಸಕತ್ ಬ್ಯುಸಿ. ಜೊತೆಗೆ ಎರಡು ಶೇಡ್ ನಲ್ಲಿ ಅವರ ಪಾತ್ರವಿದ್ದು ತುಂಬಾ ಚಾಲೆಂಜಿಗ್ ಎಂದರೆ ತಪ್ಪಿಲ್ಲ.
ವಿಭಿನ್ನ ಪಾತ್ರಗಳಲ್ಲಿ ಮಿಂಚಬೇಕೆಂಬ ಆಸೆ ಇದ್ದ ಅಶ್ವಿನಿ ಅವರಿಗೆ ಜನ ಮೆಚ್ಚುವಂತಹ ಪಾತ್ರ ಮಾಡಬೇಕೆಂಬ ಆಲೋಚನೆ ಇತ್ತು. ಅದು ಗಟ್ಟಿಮೇಳ ಧಾರಾವಾಹಿಯಿಂದ ಈಡೇರಿತು. ಇದೀಗ ಪರಭಾಷೆಯ ಜನರ ಮನ ಸೆಳೆಯಲು ತಯಾರಾಗಿರುವ ಅಶ್ವಿನಿ ಉತ್ತಮ ಅವಕಾಶ ದೊರೆತಿರುವುದಕ್ಕೆ ಖುಷಿಯಾಗಿದ್ದಾರೆ.
” ಪ್ರತಿ ಕಲಾವಿದನಿಗೂ ತನ್ನ ಭಾಷೆಯಲ್ಲಿಯೇ ಬೆಳೆಯಬೇಕೆನ್ನುವ ಆಸೆ ಇರುತ್ತದೆ. ಬೇರೆ ಭಾಷೆಯಲ್ಲಿ ಹೆಸರು ಮಾಡಿದರೆ ಕನ್ನಡದಲ್ಲಿ ಹೆಸರು ಮಾಡಿದಂತೆ ಆಗೋದಿಲ್ಲ. ಆದರೆ ಇಲ್ಲಿ ನಮಗೆ ಬೇಕಾದ ಪಾತ್ರಗಳು ಸಿಗದಿದ್ದಾಗ ಬೇರೆಭಾಷೆಗೆ ಹೋಗುವುದು ಸಾಮಾನ್ಯ. ಆದರೆ ನಾನು ಕನ್ನಡ ಚಿತ್ರರಂಗ ಬಿಡುವುದಿಲ್ಲ. ಜೀಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾ ಮಾಡುವ ಯೋಚನೆಯಿದೆ” ಎಂದಿದ್ದಾರೆ.
– ಅಹಲ್ಯಾ