ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಟಾರ್ ನಟರನ್ನು ಕಂಡರೆ ಮನಸೋ ಇಚ್ಛೆ ಪ್ರೀತಿ. ಇನ್ನು ತಮ್ಮ ಅಭಿಮಾನವನ್ನು ಪ್ರದರ್ಶಿಲು ಅವರು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ. ಇನ್ನು ತಮ್ಮ ಅಭಿಮಾನ ವ್ಯಕ್ತಪಡಿಸುವ ಪರಿ ಒಬ್ಬರಿಂದ ಮತ್ತೊಬ್ಬರಿಗೆ ಭಿನ್ನವಾಗಿರುತ್ತದೆ. ಹೀಗೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಯೊಬ್ಬರು ಅಪಾಯಕಾರಿ ಜಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದು ವಿಶೇಷವಾಗಿದೆ.
ಅದು ಗಣಿ ಎಂದು ಇಂಗ್ಲೀಷ್ ನಲ್ಲಿ ತಮ್ಮ ಗಂಟಲಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನ್ನು ನೋಡಿದ ಗಣೇಶ್ ‘ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ಇದಕ್ಕೆ ನೋ ವರ್ಡ್ಸ್. ಈ ಪ್ರೀತಿಗೆ ಧನ್ಯವಾದಗಳು. ಆದರೆ ನಿಮಗೆ ನೀವು ನೋವು ಮಾಡಿಕೊಳ್ಳದಿರಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಅಭಿಮಾನಿಯ ಪ್ರೀತಿಗೆ ಉತ್ತರಿಸುವುದು ಒಂದೆಡೆಯಾದರೆ ಅವರ ಕಾಳಜಿ ಬಗ್ಗೆಯೂ ಗಮನ ಹರಿಸಬೇಕಾಗಿರುವುದು ಸೌಜನ್ಯ. ಅದನ್ನು ತುಂಬ ಎಚ್ಚರಿಕೆಯಿಂದಲೇ ಗಣೇಶ್ ನಿಭಾಯಿಸಿರುವುದು ವಿಶೇಷವಾಗಿದೆ.
ಇತ್ತ ಗಣೇಶ್ ಅಭಿಮಾನಿಯ ಈ ಕೆಲಸ ಕಂಡು ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ. ಅಭಿಮಾನವನ್ನು ವ್ಯಕ್ತಪಡಿಸುವುದು ಸರಿ, ಆದರೆ ಈ ರೀತಿಯ ಅತಿರೇಕ ಒಳ್ಳೆಯದಲ್ಲ ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ಅಭಿಮಾನ ಓಕೆ, ಅತಿರೇಕ ಬೇಡ’ ಎಂಬಂತಹ ಅಭಿಪ್ರಾಯ ಸಹ ಕೇಳಿಬಂದಿವೆ. ನಟರ ಮೇಲೆ ತಮಗಿರುವ ಪ್ರೀತಿ ಎಂಥದ್ದು ಎಂಬುದನ್ನು ಕೆಲವು ಸಮಾಜಮುಖಿ ಕೆಲಸಗಳ ಮೂಲಕವೂ ತೋರಿಸಬಹುದು. ಅದನ್ನು ಬಿಟ್ಟು ಬಹುತೇಕರು ಟ್ಯಾಟೂ ಮೊರೆ ಹೋಗುವುದೇಕೆ ಎಂಬ ಪ್ರಶ್ನೆ ಅನೇಕರದ್ದಾಗಿದೆ ಎನ್ನಬಹುದು.
ಒಟ್ಟಾರೆ ಈ ರೀತಿ ಮಾಡಿಕೊಂಡಿರುವುದರ ಬಗ್ಗೆ ಹಲವರು ಏನು ಹೇಳಿದರೂ ಗಣೇಶ್ ಉತ್ತರ ಮಾತ್ರ ಎಲ್ಲರಿಗೂ ಮಾದರಿಯಾಗುವಂತಹದಿದೆ.