ಹಳ್ಳಿಯಿಂದ ದಿಲ್ಲಿವರೆಗೆ…ಚಿಕ್ಕಬಳ್ಳಾಪುರದ ಈ ಸಾಧಕಿ ಬಗ್ಗೆ ನಿಮಗೆಷ್ಟು ಗೊತ್ತು…?

0
271

ಮಮತಾ ಸನತ್‍ಕುಮಾರ್, ದಕ್ಷಿಣ ಭಾರತದ ಮೊದಲ ಮಹಿಳಾ ಬಾಡಿ ಬಿಲ್ಡರ್. ಈಕೆ ನಮ್ಮ ಕರ್ನಾಟಕದವರು ಎಂಬುದು ವಿಶೇಷ ಹಾಗೂ ನಿಜಕ್ಕೂ ಹೆಮ್ಮೆಯ ಸಂಗತಿ. ಮಮತಾ ಹಿನ್ನೆಲೆ ಏನು..? ಅವರು ಬಾಡಿ ಬಿಲ್ಡರ್ ಆಗಲು ಸ್ಫೂರ್ತಿ ಯಾರು..? ಅವರ ಈ ಸಾಧನೆಗೆ ಪ್ರೋತ್ಸಾಹ ನೀಡಿದವರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

 

 

ಮಮತಾ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಸವಾಪುರ ಗ್ರಾಮದವರು. ತಂದೆ ರೈತ, ತಾಯಿ ಗೃಹಿಣಿ, ಗೌರಿಬಿದನೂರಿನಲ್ಲಿ ಶಾಲಾ ಶಿಕ್ಷಣ ಮುಗಿಸಿ, ತುಮಕೂರಿನಲ್ಲಿ ಕಾಲೇಜಿಗೆ ಸೇರಿದ ಮಮತಾ ಆರ್ಥಿಕ ತೊಂದರೆಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಬಂದು ಕಂಪನಿಯೊಂದರಲ್ಲಿ ಕೇವಲ 6ಸಾವಿರ ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದರು. ಕೆಲವು ದಿನಗಳ ನಂತರ ತಂದೆತಾಯಿಗಳನ್ನು ಬೆಂಗಳೂರಿಗೆ ಕರೆಸಿಕೊಂಡರು. ಕ್ರಮೇಣ ಕೆಲಸದಲ್ಲಿ ಕೂಡಾ ಪ್ರಮೋಷನ್ ಪಡೆದರು. ಮಮತಾಗೆ 22 ನೇ ವಯಸ್ಸಿಗೆ ಮದುವೆ ಕೂಡಾ ಆಯ್ತು.

 

 

ಮಮತಾ ಇದೀಗ 5 ವರ್ಷದ ಹೆಣ್ಣು ಮಗುವಿನ ತಾಯಿ. ಆಕೆ ಗರ್ಭಿಣಿಯಾಗಿದ್ದಾಗ 89 ಕಿಲೋ ಇದ್ದರು. ಹೆರಿಗೆ ಆಗಿ ಕೆಲವು ದಿನಗಳ ನಂತರ ತೂಕ ಇಳಿಸಲು ಜಿಮ್ ಸೇರಿದರು. ಪತಿ ಕೆಲಸ ಕಳೆದುಕೊಂಡಿದ್ದರಿಂದ ಅವರಿಗೆ ಸಹಾಯ ಮಾಡಲು ಜಿಮ್ ಟ್ರೈನರ್ ಆಗಿ ಕೂಡಾ ಕೆಲಸ ಮಾಡಿದರು. ಸ್ನೇಹಿತರೊಬ್ಬರ ಸಲಹೆಯಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿ ಬಾಡಿ ಬಿಲ್ಡಿಂಗ್ ಮಾಡಲು ನಿರ್ಧರಿಸಿದರು. ಈ ವಿಷಯದಲ್ಲಿ ಯೋಗೇಶ್ ಗೌಡ ಎಂಬುವವರು ಮಮತಾಗೆ ಸಹಾಯ ಮಾಡಿದರು.

 

 

ಅರಂಭದಲ್ಲಿ ಮಮತಾ ಪತಿ ಇದಕ್ಕೆ ಸಹಕಾರ ನೀಡದಿದ್ದರೂ ನಂತರ ಒಪ್ಪಿಗೆ ನೀಡಿದರು. ಬಾಡಿ ಬಿಲ್ಡರ್‍ಗಳಿಗೆ ಪ್ರೋಟೀನ್ ಹೆಚ್ಚು ಅವಶ್ಯಕವಿರುವುದರಿಂದ ಸಸ್ಯಹಾರಿಯಾಗಿದ್ದ ಮಮತಾ ಕ್ರಮೇಣ ಮಾಂಸ, ಮೊಟ್ಟೆ ಸೇವಿಸಲು ಆರಂಭಿಸಿದರು. 2018 ಮಾರ್ಚನಲ್ಲಿ ಗೋವಾದಲ್ಲಿ ಮೊದಲ ಸ್ಪರ್ಧೆಯಲ್ಲಿ ಮಮತಾ ಭಾಗವಹಿಸಿದರು. ಸ್ಫರ್ಧೆಯಲ್ಲಿ ಆಕೆ ಗೆಲ್ಲದಿದ್ದರೂ, ಮಮತಾಗೆ ಸಾಕಷ್ಟು ಅಭಿಮಾನಿಗಳು ದೊರೆತರು. ಜನರ ಪ್ರೀತಿ, ಬೆಂಬಲ ಗಳಿಸಿದರು. ನಂತರ ಬೆಂಗಳೂರಿನಲ್ಲಿ ನಡೆದ ‘ವುಮನ್ ಫಿಸಿಕ್ ಅಥ್ಲೆಟ್’ ಸ್ಫರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು.

 

 

ಆದರೆ ಮೊದಲ ಸ್ಥಾನ ಗಳಿಸಲೇಬೇಕೆಂಬ ಹಠದಿಂದ ಮಮತಾ ಶ್ರಮ ಪಟ್ಟು 3 ತಿಂಗಳು ಸಾಕಷ್ಟು ವರ್ಕೌಟ್ ಮಾಡಿ 2018 ಡಿಸೆಂಬರ್‍ನಲ್ಲಿ ನಡೆದ ಸ್ಫರ್ಧೆಯಲ್ಲಿ ಚಿನ್ನದ ಪದಕ ಗಳಿಸಿದರು. ನಂತರ 2019 ಫೆಬ್ರವರಿಯಲ್ಲಿ ನಡೆದ ನ್ಯಾಷನಲ್ ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‍ನಲ್ಲಿ ಮಮತಾ ಪ್ರೋ ಕಾರ್ಡ ಪಡೆದು, ಈ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ಮಮತಾಗೆ ಇಡೀ ಕುಟುಂಬವೇ ಪ್ರೋತ್ಸಾಹ ನೀಡುತ್ತಿದೆ. ಸಾಧನೆ ಮಾಡಬೇಕು ಎಂಬುವವರಿಗೆ ನಿಜಕ್ಕೂ ಈಕೆ ಸ್ಫೂರ್ತಿಯಾಗಿದ್ದಾರೆ. ಖುಷಿಯ ವಿಚಾರ ಎಂದರೆ ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದಲ್ಲಿ ಮಮತಾ ನಟಿಸುತ್ತಿದ್ದಾರೆ. ಆದರೆ ಈ ಪಾತ್ರದ ಬಗ್ಗೆ ಆಕೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

 

 

ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಅದರಲ್ಲೂ ಹಳ್ಳಿ ಹುಡುಗಿಯಾಗಿ ತಮ್ಮ ಜೀವನದಲ್ಲಿ ಒಂದು ಬಾರಿಯೂ ತುಂಡುಡುಗೆ ಧರಿಸದ ಮಮತಾ, ಬಾಡಿ ಬಿಲ್ಡಿಂಗ್ ಸ್ಫರ್ಧೆಗಳಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಾಗ ಜನರು ಆಕೆಯನ್ನು ಟೀಕಿಸಿದ್ದುಂಟು. ಆದರೆ ಇದಾವುದಕ್ಕೂ ಕಿವಿ ಕೊಡದ ಮಮತಾ ವರ್ಕೌಟ್ ಮಾಡಿ, ಕುಟುಂಬವನ್ನೂ ಸಂಭಾಳಿಸಿಕೊಂಡು, ಅದರಲ್ಲೂ ಒಂದು ಮಗುವಿನ ತಾಯಿಯಾಗಿ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್. ಆಕೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ, ಆಕೆಗೆ ಸ್ಪಾನ್ಸರ್‍ಶಿಪ್ ದೊರೆಯಲಿ, ನಮ್ಮ ರಾಜ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವಂತಾಗಲಿ ಎಂಬುದು ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here