ಸಂಪುಟ ವಿಸ್ತರಣೆ ವಿಳಂಬ, ಡಿಸಿಗಳಿಂದಲೇ ಧ್ವಜಾರೋಹಣ ..!

0
111

ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದರೂ, ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳು ನಿಭಾಯಿಸಲಿದ್ದಾರೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸಂಪುಟ ರಚನೆಗೆ ಬಿಜೆಪಿ ಹೈಕಮಾಂಡ್ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಿ.ಎಂ ಯಡಿಯೂರಪ್ಪ ಅವರ ಏಕವ್ಯಕ್ತಿ ಸರಕಾರ ಅಸ್ತಿತ್ವದಲ್ಲಿದೆ. ಹೀಗಾಗಿ ಇದೇ 15ರಂದು ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳೇ ನಡೆಸುವಂತಾಗಿದೆ.

ಈ ಹಿಂದೆ ರಾಜ್ಯಪಾಲರ ಆಡಳಿತವಿದ್ದ ಸಂದರ್ಭದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಿದ್ದರು. ಆದರೆ ಚುನಾಯಿತ ಸರಕಾರವಿದ್ದಾಗ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸುತ್ತಿರುವುದು ಇದೇ ಪ್ರಥಮ. ಧ್ವಜಾರೋಹಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಿಎಂ ಯಡಿಯೂರಪ್ಪನವರು ಧ್ವಜ ವಂದನೆ ಸಲ್ಲಿಸಲಿದ್ದಾರೆ. ಉಳಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಗಳಲ್ಲಿ ಉಪ ವಿಭಾಗಾಧಿಕಾರಿಗಳು, ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರರು ಈ ಪ್ರಕ್ರಿಯೆ ನಡೆಸಲಿದ್ದು, ನೆರೆಯ ಹಿನ್ನೆಲೆಯಲ್ಲಿಯೇ ಅತ್ಯಂತ ಸರಳವಾಗಿ ಕಾರ್ಯಕ್ರಮ ನಡೆಸಲು ಸೂಚನೆ ನೀಡಲಾಗಿದೆ.

LEAVE A REPLY

Please enter your comment!
Please enter your name here