ಇಂದಿಗೂ ಬಗೆಹರಿಯದ ‘ಎಂದಿರನ್’ ಕಾನೂನು ಸಮಸ್ಯೆ….

0
209

ಕೃತಿ ಚೌರ್ಯ ಪ್ರಕರಣಗಳು ಇಂದು ನಿನ್ನೆಯದಲ್ಲ. ನನ್ನ ಹಾಡನ್ನು ಕದಿಯಲಾಗಿದೆ. ನನ್ನ ಕಥೆಯನ್ನು ಕದಿಯಲಾಗಿದೆ ಎಂದುಕೊಂಡು ಮೂಲ ಕತೃಗಳು ಕೋರ್ಟ್​ ಮೆಟ್ಟಿಲೇರಿರುವ ಪ್ರಕರಣ ಬಹಳಷ್ಟು ನಡೆದಿದೆ. ಎಷ್ಟೋ ಪ್ರಕರಣಗಳಲ್ಲಿ ಕೆಲವರು ಪಬ್ಲಿಸಿಟಿಗಾಗಿ ಹೀಗೆಲ್ಲಾ ಗಿಮಿಕ್ ಮಾಡುವುದೂ ಉಂಟು. ಕೆಲವೊಂದು ಪ್ರಕರಣಗಳಲ್ಲಿ ರಾಜಿ ಆಗಿರುವುದುಂಟು. ಆದರೆ ಕೆಲವೊಂದು ಪ್ರಕರಣಗಳು ವರ್ಷಗಟ್ಟಲೇ ಕೋರ್ಟಿನಲ್ಲಿ ವಿಚಾರಣೆ ಎದುರಿಸುತ್ತವೆ. ತಮಿಳು ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಹಾಗೂ ಐಶ್ವರ್ಯ ರೈ ನಟಿಸಿರುವ ‘ಎಂದಿರನ್’ ಚಿತ್ರ ಕೂಡಾ ಇದೀಗ ಕೃತಿ ಚೌರ್ಯ ಆರೋಪ ಎದುರಿಸುತ್ತಿದೆ. 2010 ರಿಂದ ಚಿತ್ರ ಬಿಡುಗಡೆಯಾದಾಗಿನಿಂದ ಇದುವರೆಗೂ ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥವಾಗಿಲ್ಲ. ಇದೀಗ ನಿರ್ದೇಶಕ ಶಂಕರ್ ಪರ ವಕೀಲರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಲು ಸಕಲ ತಯಾರಿ ನಡೆಸಿದ್ದಾರೆ. ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದರೂ ಕಾನೂನು ಸಮಸ್ಯೆ ಮಾತ್ರ ಇನ್ನೂ ಮುಗಿದಿಲ್ಲ.

ಅಷ್ಟಕ್ಕೂ ಈ ಪ್ರಕರಣ ಏನು ಅಂತೀರಾ..? 2010 ಅಕ್ಟೋಬರ್ 1 ರಂದು ತಮಿಳಿನ ‘ಎಂದಿರನ್’ ಸಿನಿಮಾ ಹಿಂದಿಯಲ್ಲಿ ‘ರೋಬೋಟ್’​ ಹಾಗೂ ತೆಲುಗಿನಲ್ಲಿ ‘ರೋಬೋ’ ಹೆಸರಿನಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಯ್ತು. ತಮಿಳುನಾಡು, ಆಂಧ್ರ, ಕರ್ನಾಟಕ, ಕೇರಳದಲ್ಲಿ ಭಾರೀ ಯಶಸ್ಸು ಗಳಿಸಿದ ಸಿನಿಮಾ ಬಾಕ್ಸ್​​ ಆಫೀಸ್​​​​ನಲ್ಲಿ ದೊಡ್ಡ ಲಾಭ ಮಾಡಿತ್ತು. ಸಿನಿಮಾದ ಗ್ರಾಫಿಕ್ಸ್​​​​ಗಾಗಿ 58ನೇ ನ್ಯಾಷನಲ್ ಫಿಲ್ಮ್​ ಅವಾರ್ಡ್​ ಕೂಡಾ ಪಡೆಯಿತು. ಸಿನಿಮಾ ಯಶಸ್ಸು ಗಳಿಸುತ್ತಿದ್ದಂತೆ ಆರೂರು ತಮಿಳ್​ನಾದನ್ ಎಂಬುವವರು ನಿರ್ದೇಶಕ ಶಂಕರ್ ಮೇಲೆ ಕೃತಿ ಚೌರ್ಯ ಆರೋಪ ದಾಖಲಿಸಿದರು.

ಚಿತ್ರಕ್ಕೆ ಶಂಕರ್ ಅವರೇ ಕಥೆ ಬರೆದಿದ್ದಾರೆ ಎಂದು ಚಿತ್ರದ ಟೈಟಲ್ ಕಾರ್ಡ್​ನಲ್ಲಿ ಇದೆ. ಆದರೆ ‘ಎಂದಿರನ್’ ಚಿತ್ರದ ಕಥೆಯನ್ನು ನಾನು ಬರೆದ ‘ಜುಗಿಬ’ ಎಂಬ ಪುಸ್ತಕದಿಂದ ಕದಿಯಲಾಗಿದೆ. 1996 ಹಾಗೂ 2007 ರಲ್ಲಿ ಈ ಕಥೆ ತಮಿಳು ಮ್ಯಾಗಜಿನ್​​​ಗಳಲ್ಲಿ ಎರಡು ಬಾರಿ ಪ್ರಕಟವಾಗಿದೆ ಎಂದು ಚೆನ್ನೈನಲ್ಲಿ ಕೇಸ್ ದಾಖಲಿಸಿದರು. ಆದರೆ ನಿರ್ದೇಶಕ ಶಂಕರ್ ತಮಿಳ್​​​ನಾದನ್ ಆರೋಪನ್ನು ಅಲ್ಲಗಳೆದಿದ್ದಾರೆ. ಈ ಪ್ರಕರಣವನ್ನು ವಜಾಗೊಳಿಸುವಂತೆ ಶಂಕರ್ ಸಲ್ಲಿಸಿದ್ದ ಅರ್ಜಿಯನ್ನು ಚೆನ್ನೈ ಹೈಕೋರ್ಟ್ ವಜಾಗೊಳಿಸಿದೆ. ಇದೀಗ ಈ ಪ್ರಕರಣ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ವಶೀಕರನ್ ಎಂಬ ವಿಜ್ಞಾನಿ ಚಿಟ್ಟಿ ಎಂಬ ರೋಬೋಟ್ ಒಂದನ್ನು ತಯಾರಿಸುತ್ತಾನೆ. ನಂತರ ಅದಕ್ಕೆ ಮನುಷ್ಯನ ಭಾವನೆಗಳನ್ನೂ ತುಂಬುತ್ತಾನೆ. ಮುಂದೆ ಚಿಟ್ಟಿಯಿಂದ ವಶೀಕರನ್​​​, ಆತನ ಪ್ರೇಯಸಿ ಸನಾ ಹಾಗೂ ಕುಟುಂಬದವರು ಏನೆಲ್ಲಾ ಸಮಸ್ಯೆ ಅನುಭವಿಸುತ್ತಾರೆ ಹಾಗೂ ಆ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ ಎಂಬುದೇ ‘ಎಂದಿರನ್’ ಕಥೆ. ಈ ಚಿತ್ರದ ಹಾಡುಗಳಿಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದು ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಿತ್ತು. ಇದೀಗ ಈ ಕೃತಿಚೌರ್ಯ ಪ್ರಕರಣ ಎಲ್ಲಿಗೆ ಬಂದು ಮುಟ್ಟಲಿದೆಯೋ ಕಾದು ನೋಡಬೇಕು.

LEAVE A REPLY

Please enter your comment!
Please enter your name here