ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ ..!

0
184

ತೂಕ ಹೆಚ್ಚಿಸಿಕೊಳ್ಳಬೇಕು. ಸದೃಡವಾಗಿ ಕಾಣಬೇಕೆಂಬುದು ಅನೇಕ ಜನರ ಕನಸು. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಔಷಧಿಗಳ ಮೋರೆ ಹೋಗಿದ್ದಾರೆ. ಆದರೆ ಆ ರೀತಿಯ ಔಷಧಿಗಳು ದೇಹದ ಮೇಲೆ ದುಷ್ಟಪರಿಣಾಮ ಬೀರುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಲು ತೆಗೆದುಕೊಂಡ ಔಷಧಿ ಜೀವವನ್ನೇ ತೆಗೆದುಕೊಂಡಿವೆ..! ಹೀಗಾಗಿ ತೂಕ ಹೆಚ್ಚಿಸಿಕೊಳ್ಳಬೇಕೆನ್ನುವವರು ನೈಸರ್ಗಿಕ ಆಹಾರಗಳ ಮೂಲಕವೇ ತೂಕ ಹೆಚ್ಚಿಸಿಕೊಳ್ಳುವುದು ಉತ್ತಮ. ಹೀಗಾಗಿ ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳಲು ಪ್ರತಿದಿನ ಸೇವಿಸಬೇಕಾದ ಆಹಾರ ಪದಾರ್ಥಗಳ ವಿವರ ಇಲ್ಲಿದೆ. ಈ ಆಹಾರ ಪದಾರ್ಥಗಳನ್ನು ಸೇವಿಸಿದ್ರೆ ನೈಸರ್ಗಿಕವಾಗಿ ನಿಮ್ಮ ತೂಕ ಹೆಚ್ಚಳವಾಗುತ್ತದೆ.

ಮೊಟ್ಟೆ – ಮೊಟ್ಟೆಯಲ್ಲಿ ಎ, ಡಿ, ಇ ವಿಟಮಿನ್‍ಗಳು, ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ಸಾಕಷ್ಟು ಪ್ರೋಟೀನ್ ಇದೆ. ದೇಹದ ಸ್ನಾಯುಗಳು ಚೆನ್ನಾಗಿ ಬೆಳವಣಿಗೆಯಾಗಬೇಕೆಂದರೆ ಮೊಟ್ಟೆ ಅತ್ಯುತ್ತಮ. ದಿನಕ್ಕೆ 3 ಮೊಟ್ಟೆಗಳನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ.

ಬಾಳೆಹಣ್ಣು – ಹೆಚ್ಚಿನ ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಹೊಂದಿರುವ ಬಾಳೆಹಣ್ಣು ಮೂಳೆಗಳ ಆರೋಗ್ಯಕ್ಕೆ ಅತ್ಯಗತ್ಯ. ಇದನ್ನು ನೀವು ಚಾಕೋಲೇಟ್ ಬನಾನಾ ಸ್ಮೂತಿಯ ರೂಪದಲ್ಲಿ ಸೇವಿಸಬಹುದು. ಬಾಳೆಹಣ್ಣು ಸೇವನೆ ತೂಕವನ್ನು ಹೆಚ್ಚಿಸುತ್ತದೆ.

ಪೀನಟ್ ಬಟರ್ – ಇದರಲ್ಲಿ ಪ್ರೋಟೀನ್, ಅಗತ್ಯ ಜೀವಸತ್ವಗಳು, ಮೆಗ್ನೀಷಿಯಂ, ಫೈಬರ್, ಫೋಲೇಟ್ ಉತ್ತಮ ಪ್ರಮಾಣದಲ್ಲಿದೆ. ಇದು ಹೃದಯದ ಆರೋಗ್ಯವನ್ನು ಕಾಪಾಡಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಸೋಯಾ – ಸೋಯಾಬೀನ್‍ನಲ್ಲಿ ಅಮೈನೋ ಆಸಿಡ್ ಇದ್ದು, ಬಾಡಿ ಬಿಲ್ಡ್ ಮಾಡಲು ಸಹಕಾರಿಯಾಗಿದೆ.

ಮೊಸರು – ಮೊಸರು ಸಂಕೀರ್ಣ ಸಕ್ಕರೆ, ಅಮೈನೋ ಆಮ್ಲಗಳು ಮತ್ತು ಕರಗಬಲ್ಲ ಪ್ರೊಟೀನ್ ಗಳ ಮೂಲವಾಗಿದೆ. ಇವೆಲ್ಲವೂ ದಪ್ಪಗಾಗಲು ಸಹಾಯ ಮಾಡುತ್ತಲೇ, ಆರೋಗ್ಯವನ್ನೂ ಕಾಪಾಡುತ್ತವೆ.

ಡಾರ್ಕ್ ಚಾಕೋಲೇಟ್ – ಡಾರ್ಕ್ ಚಾಕೋಲೇಟ್‍ಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‍ಗಳು ಹೇರಳವಾಗಿರುತ್ತವೆ. ಕೋಕಾ ಪದಾರ್ಥವು ಶೇ.70ರಷ್ಟಾದರೂ ಇರುವ ಡಾರ್ಕ್ ಚಾಕೋಲೇಟ್ ಪ್ರತಿ ದಿನ ಸೇವಿಸಿ.

ಚೀಸ್ – ಚೀಸ್ ಕೂಡಾ ಹೆಚ್ಚು ಕ್ಯಾಲೋರಿಗಳನ್ನೂ, ಫ್ಯಾಟನ್ನೂ ಹೊಂದಿದೆ. ನಿಮ್ಮ ಆಹಾರದಲ್ಲಿ ಚೀಸ್ ಬಳಕೆ ಹೆಚ್ಚಿಸಿದರೆ ಪ್ರೋಟೀನ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ.

ಬಾದಾಮಿ – ಬಾದಾಮಿಯಲ್ಲಿ ಕೂಡಾ 7 ಗ್ರಾಂನಷ್ಟು ಪ್ರೋಟೀನ್ ಹಾಗೂ 18 ಗ್ರಾಂನಷ್ಟು ಆರೋಗ್ಯಕರ ಫ್ಯಾಟ್ ಇರುತ್ತದೆ. ಪ್ರತಿನಿತ್ಯ ಬಾದಾಮಿ ಸೇವಿಸುವುದನ್ನು ಡಯಟ್‍ಗೆ ಸೇರಿಸಿಕೊಳ್ಳಿ.

ದವಸ ಧಾನ್ಯಗಳು – ಸದೃಢ ಮೈಕಟ್ಟು ಹೊಂದಬೇಕೆಂದಿದ್ದರೆ ಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ಸೇವಿಸಬೇಕು! ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಜೊತೆಗೆ ಪ್ರೊಟೀನ್ ಹೇರಳವಾಗಿದ್ದು ಸ್ನಾಯುಗಳ ಆರೋಗ್ಯ ರಕ್ಷಿಸಲೂ ಸಹಾಯ ಮಾಡುತ್ತದೆ.

ಡ್ರೈಫ್ರೂಟ್ಸ್ – ವಾಲ್‍ನಟ್, ದ್ರಾಕ್ಷಿ, ಗೋಡಂಬಿ, ಅಂಜೂರ ಮುಂತಾದ ಡ್ರೈ ಫ್ರೂಟ್‍ಗಳಲ್ಲಿ ಶುಗರ್ ಹೆಚ್ಚಿದ್ದು, ತೂಕ ಹೆಚ್ಚಿಸುವುದಕ್ಕೆ ಸಹಕಾರಿ. ರುಚಿಯಲ್ಲಿ ಕೂಡಾ ರಾಜಿ ಮಾಡಿಕೊಳ್ಳಬೇಕಿಲ್ಲ.

LEAVE A REPLY

Please enter your comment!
Please enter your name here