ಬೆಂಗಳೂರು: “ವಿದ್ಯಾಗಮ ಯೋಜನೆಯನ್ನು ಕೊಂದುಬಿಟ್ಟೆವು ಎಂಬ ನಿಮ್ಮ ಸಂಭ್ರಮ ನೋಡಿ ನಗಬೇಕೋ..? ಆನ್ಲೈನ್ ಎಂಬ ವೇದಿಕೆಗೆ ಪರ್ಯಾಯವಾಗಿ ಇದ್ದ ವಿದ್ಯಾಗಮ ಕಳೆದುಕೊಂಡ ಮಕ್ಕಳನ್ನು ನೋಡಿ ಅಳಬೇಕೋ ಗೊತ್ತಾಗ್ತಾ ಇಲ್ಲ”.. ಹೀಗೊಂದು ವ್ಯಂಗ್ಯ ಭರಿತ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.. ಹಾ ಬರೆದವರು ಚಿಕ್ಕನಾಯಕನಹಳ್ಳಿ ಲೋಕಾಯುಕ್ತ ಡಿವೈಎಸ್ಪಿ ರವೀಶ್.
ವಿದ್ಯಾಗಮ ಯೋಜನೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.. ಸರ್ಕಾರಿ ಶಿಕ್ಷಕರಿಗೆ ಸೋಂಕು ತಗುಲುತ್ತಿದೆ ಎಂದು ಬೆಳಗ್ಗಿಂದ ಸಂಜೆ ವರೆಗೂ ಬಾಯಿಬಡೆದುಕೊಂಡ ಟಿಆರ್ ಪಿ ಚಾನಲ್ ಗೆ ಅಧಿಕಾರಿ ರವೀಶ್ ಈ ರೀತಿಯ ವ್ಯಂಗ್ಯ ಭರಿತ ಪತ್ರ ಬರೆಯುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಿಯ ಮಾಧ್ಯಮ ಮಿತ್ರರೇ, ವಿದ್ಯಾಗಮ ಕೊಂದುಬಿಟ್ಟೆವು ಎಂಬ ನಿಮ್ಮ ಸಂಭ್ರಮ ನೋಡಿ ನಗಬೇಕೋ..? ಆನ್ಲೈನ್ ಎಂಬ ವೇದಿಕೆಗೆ ಪರ್ಯಾಯವಾಗಿ ಇದ್ದ ವಿದ್ಯಾಗಮ ಕಳೆದುಕೊಂಡ ಮಕ್ಕಳನ್ನು ನೋಡಿ ಅಳಬೇಕೋ ಗೊತ್ತಾಗ್ತಾ ಇಲ್ಲ. ನೀವು ಬಡ ಮಕ್ಕಳ ಹಕ್ಕು ಕಸಿದುಕೊಂಡಿದ್ದೀರಿ. ಸೋಮಾರಿ ಶಿಕ್ಷಕರ ಆಸೆ ಈಡೇರಿಸುವ ಸಲುವಾಗಿ ಜೀವ ಉಳಿಸೋ ನೆಪದಲ್ಲಿ ಪುಟ್ಟ ಪುಟ್ಟ ಬಡ ಮಕ್ಕಳ ಭವಿಷ್ಯವನ್ನು ಚಿವುಟಿ ಹಾಕಿದ್ದೀರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರು ಹೇಳಿ ಶಿಕ್ಷಕರ ಸಂಘಗಳು ನಡೆಸಿದ ಪಿತೂರಿ ಇದು”
ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಸರು ಹೇಳಿ ಶಿಕ್ಷಕರ ಸಂಘಗಳು ನಡೆಸಿದ ಪಿತೂರಿಗೆ, ಅವರು ನೀಡಿದ ಸುಳ್ಳು ಆತಂಕದ ಸುದ್ದಿಯ ಸಂಚಿಗೆ ಮಾಧ್ಯಮ ಬಲಿಯಾಗಿದೆ. ಸೆನ್ಸೇಷನ್ ಅಷ್ಟೇ ನಿಮಗೆ ಬೇಕಾಗಿರುವುದು. ಮಾಸ್ ಹಿಸ್ಟೀರಿಯಾ ಸೃಷ್ಟಿಸಿ ನ್ಯೂಸ್ ಚಾನೆಲ್ ನೋಡುವವರ ಸಂಖ್ಯೆ ಹೆಚ್ಚಿಸಿಕೊಳ್ಳುವುದಷ್ಟೇ ನಿಮ್ಮಗಳ ಉದ್ದೇಶ ಎಂಬುದನ್ನು ಈ ಸಮಾಜ ಅರಿತ ದಿನ ನಿಮ್ಮ ಅಂತ್ಯವಾಗಲಿದೆ.
ಪೊಲೀಸರಿಗೆ ಫೋನ್ ಮಾಡುವ ಮುನ್ನ ಜನ ಮಾಧ್ಯಮಗಳಿಗೆ ಫೋನ್ ಮಾಡೋದು ನಿಮ್ಮ ಮೇಲಿನ ನಂಬಿಕೆಯಿಂದ. ಆದರೆ, ಆ ನಂಬಿಕೆಯನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಪೋಷಕರ ಆತಂಕ ದೂರ ಮಾಡುವ ಬದಲು ಇನ್ನಷ್ಟು ಹೆಚ್ಚಿಸಿದ್ದೀರಿ ಅಷ್ಟೇ.
ಎಲ್ಲಾ ಟೂರಿಸಂ ತಾಣಗಳಲ್ಲು ಮಕ್ಕಳು ಓಡಾಡುತ್ತಿದ್ದಾರೆ. ಟೀನೇಜ್ಗೆ ಬಂದ ಗಂಡು ಮಕ್ಕಳನ್ನು ಕಂಟ್ರೋಲ್ ಮಾಡಲಾಗದ ಎಷ್ಟೋ ಪೋಷಕರ ಕಷ್ಟ ನಿಮಗೆ ಅರಿವಾಗುತ್ತಿಲ್ಲ. ಕೆಳ ಮಧ್ಯಮ ಮತ್ತು ಬಡ ಕುಟುಂಬಗಳು ಅದೇ ಮಕ್ಕಳನ್ನು ಕೂಲಿಗೆ ಕಳಿಸುತ್ತಿದ್ದಾರೆ. ಆನ್ಲೈನ್ ಕ್ಲಾಸ್ ಹೆಸರಲ್ಲಿ ಮಕ್ಕಳ ಕೈ ಸೇರುವ ಫೋನು ಬೇರೆ ಏನೇನೋ ಕುತೂಹಲ ತಣಿಸುವ ಸಾಧನವಾಗಿರೋದು ಸುಳ್ಳಾ..? ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಹೀಗೆ ಮಾಡಿದಿರಿ.. ಎಷ್ಟು ಮಕ್ಕಳು ಸತ್ತರು ಸ್ವಾಮಿ..?
ಶಿಕ್ಷಕರ ಜೀವ ದೊಡ್ಡದು ಅನ್ನೋದಾದರೆ ಉಳಿದ ಉದ್ಯೋಗ ಮಾಡುತ್ತಿರುವವರದು ಜೀವ ಅಲ್ಲವೇ..? ಎಷ್ಟು ಡಾಕ್ಟರ್ಸ್, ಎಷ್ಟು ನರ್ಸ್ಗಳು ಸತ್ತಿದ್ದಾರೆ ಅನ್ನೋದರ ಲೆಕ್ಕ ಇಟ್ಟು ಆಸ್ಪತ್ರೆಗಳನ್ನು ಮುಚ್ಚಿಸೋ ತನಕ ನೀವು ಲೈವ್ ಮಾಡಲೇಬೇಕು. ನಿಮ್ಮ ಮನೆಯ ಕಸ ಎತ್ತುತ್ತಿರುವ ಪೌರಕಾರ್ಮಿಕರಿಗೂ ಮಕ್ಕಳಿವೆ ಸ್ವಾಮಿ, ಆದರೂ ಅವರು ಕಸ ಎತ್ತುವುದು ನಿಲ್ಲಿಸಿಲ್ಲ. ಪೌರಕಾರ್ಮಿಕರಿಗೆ ಸೋಂಕು ತಗುಲಿದೆ, ಎಷ್ಟು ಪೌರಕಾರ್ಮಿಕರ ಸತ್ತಿದ್ದಾರೆ ಎಂಬ ಲೆಕ್ಕವನ್ನೂ ನಿರಂತರ ಪ್ರಸಾರ ಮಾಡಿ ಪೌರಕಾರ್ಮಿಕರನ್ನ ಮನೆಯಲ್ಲಿ ಕೂರಿಸಿ ಸಂಬಳ ಕೊಡಿಸಿ ಎಂದು ಟೀಕಿಸಿದ್ದಾರೆ.
ಪೊಲೀಸರು, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರಿಗೂ ಕೊರನಾ ತಗುಲಿದೆ, ಬ್ಯಾಂಕು ನೌಕರರು, ಕಂದಾಯ ಇಲಾಖೆಯಲ್ಲಿ ದುಡಿಯುತ್ತಿರುವವರಿಗೂ ಮನೆಯಲ್ಲಿ ಮಕ್ಕಳಿಲ್ಲವೇ. ಅಷ್ಟೆ ಯಾಕೆ ಮಾಧ್ಯಮ ಮಿತ್ರರಾದ ನಿಮ್ಮಲ್ಲೂ ಅನೇಕರಿಗೆ ಕೊರೊನಾ ತಗುಲಿ ಚೇತರಿಸಿಕೊಂಡಿದ್ದೀರಿ, ಕೆಲವರು ಮೃತಪಟ್ಟಿದ್ದೀರಿ ಕೂಡ. ಯಾವ ಮಾಧ್ಯಮ ಕಚೇರಿ ಬಾಗಿಲು ಹಾಕಿ ಕೆಲಸ ನಿಲ್ಲಿಸಿದ್ದೀರಿ ಹೇಳಿ..?
ಖಾಸಗಿ ಶಾಲೆಗಳು ಸಂಬಳ ನೀಡುತ್ತಿಲ್ಲ. ಆ ಖಾಸಗಿ ಶಾಲೆಯಲ್ಲಿ ದುಡಿವವನ ಮಕ್ಕಳ ಜೀವನಕ್ಕೆ ತೊಂದರೆಯಾಗಿದೆ. ಸರ್ಕಾರದ ಸಂಬಳ ಸಿಗುತ್ತಿರೋ ಶಿಕ್ಷಕನನ್ನು ನೋಡಿ ಅಯ್ಯೋ ಅನಿಸುವ ನಿಮ್ಮ ಕಣ್ಣುಗಳಿಗೆ ಖಾಸಗಿ ಶಾಲೆಯ ಶಿಕ್ಷಕನ ಕುಟುಂಬಕ್ಕೆ ನಿಮ್ಮ ಸುದ್ದಿಗಳು ಬೆಂಕಿ ಹಚ್ಚಿವೆ ಎಂದು ಕುಟುಕಿದ್ದಾರೆ.
ಜೀವಕ್ಕಿಂತ ಜೀವನ ದೊಡ್ಡದು. ಜೀವನವೇ ಇಲ್ಲದ ಜೀವ ಉಳಿದು ಪ್ರಯೋಜನ ಏನು..? ಜೀವ ಅಮೂಲ್ಯ ಹೌದು, ಜೀವನ ಅದಕ್ಕಿಂತ ದೊಡ್ಡದು. ಮತ್ತೊಬ್ಬರ ಜೀವನದ ಜೊತೆ ಚಲ್ಲಾಟ ನಿಲ್ಲಿಸಿ. ವಿದ್ಯಾಗಮ ಕೊಂದ ನಿಮ್ಮ ಸಂಭ್ರಮ ನಿಮ್ಮ ಮನೆಯ ಸುಡುವ ಮುನ್ನವಾದರೂ ಎಚ್ಚೆತ್ತುಕೊಳ್ಳಿ. ಆಡಳಿತ ನಡೆಸೋರಿಗಾಗಿ, ಖ್ಯಾತ ಆರ್ಥಿಕ ತಜ್ಞ ಜೆರೋಮಿ ಬೆಂಥಮ್ ಒಂದು ಮಾತು ಹೇಳ್ತಾನೆ. Greatest happiness of the greatest numbers ಅಂತ. ಅಂದ್ರೆ ಅತಿ ಹೆಚ್ಚು ಜನರ ಅನುಕೂಲ ನೋಡಿಕೊಂಡು ಯೋಜನೆಗಳನ್ನು ರೂಪಿಸಬೇಕು ಅಂತ. ಆದ್ರೆ, ನಮ್ಮ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ಜನರ ಎಮೋಷನ್ ಗಳನ್ನು ಉದ್ವೇಘಗಕ್ಕೆ ತಳ್ಳಿ ಆಡಳಿತಕ್ಕೆ ಮುಂದಾಗಿದ್ದಾರೆ. ಸೋಷಿಯಲ್ ಇಂಜಿನಿಯರಿಂಗ್ ಅನ್ನು ಹಾಳುಗಡೆವುತ್ತಿರುವ ನಿಮ್ಮನ್ನು ಈ ಸಮಾಜ ಕ್ಷಮಿಸುವುದಿಲ್ಲ. ಕೊರೊನಾಗಿಂತಲೂ ಕ್ರೂರ ನೀವು. ನಿಮಗೆ ಇನ್ನಾದರೂ ಬುದ್ದಿ ಬರಲಿ ಎಂದು ವ್ಯಂಗ್ಯ ಮಾಡಿದ್ದಾರೆ.