ವಿಶ್ವ ವಿಖ್ಯಾತ ದಸರಾಗೆ ವಿದ್ಯುಕ್ತ ಚಾಲನೆ

0
63
dasara

ಮೈಸೂರು: ಚಾಮುಂಡಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ದಸರಾ ಮಹೋತ್ಸವಕ್ಕೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಿದರು.

“ಕೊರೊನಾ ಸೋಂಕಿತರಿಗೆ ಪ್ರೀತಿ, ಮಾನವೀಯತೆ ತೋರಿ”

ಈ ವೇಳೆ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್, ದಸರಾ ಮಹೋತ್ಸವದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ಘಾಟನೆ ಮಾಡಲು ವೈದ್ಯರಿಗೆ ಅವಕಾಶ ಮಾಡಿಕೊಟ್ಟ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು. ಈ ದಸರಾ ಮಹೋತ್ಸವವು ನಾಡಿನ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ದೇಶೀಯತೆ ಯನ್ನು ಸಾರುತ್ತದೆ ಎಂದು ತಿಳಿಸಿದರು.


ಪ್ರಪಂಚ ಕೊರೋನಾ ಸಂಕಷ್ಟಗಳಿಂದ ಮುಕ್ತವಾಗಲಿ. ಬೇಗ ಕೊರೋನಾಗೆ ಲಸಿಕೆ ಸಿಗಲಿ ಹಾಗೂ ರಾಜ್ಯವು ಈ ಜಲಸಂಕಷ್ಟದಿಂದ ಮುಕ್ತವಾಗಲಿ ಎಂದು ಚಾಮುಂಡೇಶ್ವರಿ ತಾಯಿಯಲ್ಲಿ ಕೇಳಿಕೊಂಡಿದ್ದೇನೆ. ವೈಯುಕ್ತಿಕವಾಗಿ ಹಾಗೂ ಕುಟುಂಬಕ್ಕೋಸ್ಕರ ಏನನ್ನೂ ಕೇಳಿಕೊಂಡಿಲ್ಲ. ಪರಿಸರವನ್ನು ನಾವು ಬೆಳೆಸಬೇಕು. ಅದನ್ನು ಹಾಳು ಮಾಡಿದರೆ ಹೇಗೆ ಸಂಕಷ್ಟ ಎದುರಾಗುತ್ತದೆ ಎಂಬುದನ್ನು ಇಂದು ಪ್ರಕೃತಿ ತೋರಿಸುತ್ತಿದೆ. ಇದಕ್ಕಾಗಿ ನಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಸ್ಯಾನಿಟೇಷನ್ ಮಾಡಿಕೊಳ್ಳಬೇಕು, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದವರಿಗೆ ಪ್ರೀತಿ ಹಾಗೂ ಮಾನವೀಯತೆ ತೋರಬೇಕು. ಇಂದು ಕೊರೋನಾ ಕಾಯಿಲೆಗಿಂತ ಅದರ ಭಯದ ಕಾಯಿಲೆಯೇ ಹೆಚ್ಚುತ್ತಿದೆ. ನಾವು ಸೋಂಕಿತರಿಂದ ದೈಹಿಕವಾಗಿ ಮಾತ್ರ ದೂರವಿರಬೇಕು, ಮಾನಸಿಕವಾಗಲ್ಲ. ಇಂದು ವೈದ್ಯರಿಗೆ ಅಭದ್ರತೆ ಕಾಡುತ್ತಿದೆ. ಅವರು ವೃತ್ತಿಯ ಒತ್ತಡ, ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಹಲ್ಲೇ ಭೀತಿಯಿಂದ ಗ್ರಾಮೀಣ ಭಾಗಗಳಿಗೆ ವೈದ್ಯರು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರಿಗೆ ಸೌಹಾರ್ದಯುತ ವಾತಾವರಣ ಹಾಗೂ ಭದ್ರತೆಯನ್ನು ಸರ್ಕಾರ ಕಲ್ಪಿಸಬೇಕಿದೆ ಎಂದು ತಿಳಿಸಿದರು.

“ಸಮಾಜ ಜಾಲಾಡುತ್ತಿವೆ ಸಾಮಾಜಿಕ ಜಾಲತಾಣ”

ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಸಮಾಜವನ್ನು ಜಾಲಾಡುತ್ತಿದೆ. ಜನರ ದಿಕ್ಕು ತಪ್ಪಿಸುತ್ತಿದೆ. ಕೊರೋನಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಪ್ಪು ಮಾಹಿತಿಗಳು ರವಾನೆಯಾಗುತ್ತಿದೆ. ಇಂಥದ್ದು ನಿಲ್ಲಬೇಕಿದ್ದು, ನೈಜ ಸುದ್ದಿಯನ್ನು ಮಾತ್ರ ರವಾನಿಸಬೇಕು. ಯಾರು ಎಷ್ಟೇ ವಿದ್ಯೆ ಪಡೆದಿದ್ದರೂ ನಮ್ಮ ಸಂಸ್ಕಾರ ಬಹಳ ಮುಖ್ಯವಾಗುತ್ತದೆ. ನಾವು ಸಹ ಜನರ ಜೀವ ಮೊದಲು. ಆಮೇಲೆ ಶುಲ್ಕ ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಬಳಸಿ

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ದೇಶ ಹಾಗೂ ರಾಜ್ಯ ಕೊರೋನಾ ಮುಕ್ತವಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಕೋರಿಕೊಂಡಿದ್ದೇನೆ. ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. ವೈದ್ಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ದಾದಿಯರು ಕೊರೋನಾ ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ್ದಕ್ಕೆ ಧನ್ಯವಾದಗಳು. ಮಾಸ್ಕ್ – ಸಾಮಾಜಿಕ ಅಂತರ – ಸ್ಯಾನಿಟೈಸರ್ ಅನ್ನು ಬಳಸಿ ಕೊರೋನಾ ಹೋಗಲಾಡಿಸಲು ಶ್ರಮಿಸಬೇಕು. ಅಲ್ಲದೆ, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಬಲಕ್ಕೆ ಲಭ್ಯವಿರುವುದಾಗಿ ಹೇಳಿದ್ದರಿಂದ ನೆಮ್ಮದಿ ಉಂಟಾಗಿದೆ ಎಂದು ತಿಳಿಸಿದರು.

ಸಂಪ್ರದಾಯಕ್ಕಾಗಿ ಸರಳ ದಸರಾ ಆಚರಣೆ

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ, ಈ ಬಾರಿ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ, ಸಾಂಪ್ರದಾಯಿಕವಾಗಿ ಆಚರಿಸಬೇಕಾದ ಅನಿವಾರ್ಯತೆ ಬಂದಿದೆ. ರಾಜಪ್ರಭುತ್ವದ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಆಚರಿಸಿಕೊಂಡು ಬಂದಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದು. ಕೊರೋನಾ ಇದ್ದರೂ ದಸರಾ ಮಹೋತ್ಸವದ ಸಂಪ್ರದಾಯ ಮತ್ತು ಪರಂಪರೆಯನ್ನು ನಿಲ್ಲಿಸಬಾರದು ಎಂಬ ಉದ್ದೇಶದಿಂದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾಗಿ ಚಾಮುಂಡಿಬೆಟ್ಟದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.

ಇನ್ನು ಕೆಆರ್ ಎಸ್, ಮೈಸೂರು ಮೃಗಾಲಯ, ಚಾಮುಂಡಿಬೆಟ್ಟ ಹಾಗೂ ಅರಮನೆಗಳಿಗೆ ಪ್ರವಾಸಿಗರನ್ನು ದಸರಾ ಮುಗಿಯುವವರೆಗೆ ಪ್ರವೇಶ ನಿರ್ಬಂಧ ಹೇರಿರುವ ಕ್ರಮವನ್ನು ಮುಖ್ಯಮಂತ್ರಿಗಳು ಹಿಂಪಡೆಯುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಶುಕ್ರವಾರ ಸಭೆ ನಡೆಸುವ ವೇಳೆ ಈ ಬಗ್ಗೆ ವಿವರಣೆ ಪಡೆದು, ಈ ಆದೇಶವನ್ನು ಹೊರಡಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಮಾಸ್ಕ್ ಗಳನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಎಲ್ಲರಿಗೂ ಪ್ರವೇಶವನ್ನು ನೀಡಲು ಸೂಚನೆ ನೀಡಿದ್ದಾರೆಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಕೊರೋನಾ ವಾರಿಯರ್ಸ್ ಗಳಿಗೆ ಸನ್ಮಾನ

ಕೊರೋನಾ ವಾರಿಯರ್ಸ್ ಗಳಾದ ಮೈಸೂರಿನ ಪೌರ ಕಾರ್ಮಿಕ ಶ್ರೀಮತಿ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ಸ್ಟಾಫ್ ನರ್ಸ್ ಶ್ರೀಮತಿ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ನೂರ್ ಜಾನ್, ಪೊಲೀಸ್ ಕಾನ್ಸ್ ಟೇಬಲ್ ಶ್ರೀ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತರಾದ ಆಯೂಬ್ ಅಹಮದ್ ಅವರನ್ನು ಆಯಾ ಕ್ಷೇತ್ರದ ಪ್ರತಿನಿಧಿಗಳನ್ನಾಗಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here