ತಮ್ಮ ಪುತ್ರಿಯನ್ನು ಟ್ಯೂಷನ್ ಗೆ ಬಿಡಲು ಹೋಗುವ ವೇಳೆ ನಟ ಕೋಮಲ್ ಅವರ ಮೇಲೆ ಮಲ್ಲೇಶ್ವರಂ ಸಂಪಿಗೆ ರಸ್ತೆಯ ಅಂಡರ್ ಪಾಸ್ ಬಳಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋಮಲ್ ನೀಡಿದ ದೂರಿನ ಅನ್ವಯ ಅವರ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಮ್ಮ ಸಹೋದರನ ಮೇಲೆ ನಡೆದ ಹಲ್ಲೆ ಕುರಿತು ಪ್ರತಿಕ್ರಿಯೆ ನೀಡಿದ್ದ ನಟ ಜಗ್ಗೇಶ್ ಈ ಹಿಂದೆ ತಮ್ಮ ಪುತ್ರನ ಮೇಲೆ ಹಲ್ಲೆ ನಡೆಸಲಾಗಿತ್ತು. ಈಗ ಸಹೋದರನ ಮೇಲೆ ಹಲ್ಲೆ ನಡೆದಿದೆ. ಇದರ ಹಿಂದಿನ ಉದ್ದೇಶವೇನೆಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದರು.

ಇದೀಗ ಕೋಮಲ್ ದೂರಿನ ಅನ್ವಯ ಬಂಧಿತನಾಗಿರುವ ಆರೋಪಿ ವಿಚಾರಣೆ ವೇಳೆ, ಈತ ಜಕ್ಕರಾಯನಕೆರೆ ನಿವಾಸಿ ವಿಜಯ್ ಎಂದು ಹೇಳಲಾಗಿದ್ದು, ವೃತ್ತಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಎಂದು ತಿಳಿದುಬಂದಿದೆ. ವಿಜಯ್ ಬೈಕಿನಲ್ಲಿ ಹೋಗುವ ವೇಳೆ ಕೋಮಲ್ ಅವರ ಕಾರು ಬೈಕಿಗೆ ತಾಕಿದ್ದು, ಈ ಸಂದರ್ಭದಲ್ಲಿ ವಿಜಯ್ ಅವಾಚ್ಯ ಶಬ್ದದಿಂದ ನಿಂದಿಸಿದರೆಂದು ಹೇಳಲಾಗಿದೆ. ಇದನ್ನು ಪ್ರಶ್ನಿಸಲು ಕೋಮಲ್ ಕಾರಿನಿಂದ ಇಳಿದಾಗ ಹಲ್ಲೆ ನಡೆಸಲಾಗಿದೆ.