ಚಿದಂಬರಂ ಬಂಧನದ ಬಗ್ಗೆ ದೇವೇಗೌಡರು ಹೇಳಿದ್ದೇನು ಗೊತ್ತೇ..?

0
779

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಹಿಂದೆಂದೂ ಈ ರೀತಿ ನಡೆದಿರಲಿಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ತುಂಬಾ ಹಳೆಯ ಘಟನೆ. ಅದರ ಬಗ್ಗೆ ಹೆಚ್ಚಿಗೆ ತಿಳಿದಿಲ್ಲ. ಏಕೆ ಹೀಗಾಯಿತೋ ಗೊತ್ತಿಲ್ಲ. ಇದರ ಹಿಂದೆ ಏನೋ ಇರಬೇಕು. ಅದೂ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ ಈಗಿನ ಗೃಹ ಸಚಿವರನ್ನು ಬಂಧಿಸಿದ್ದರು. ಸೇಡಿಗೆ ಪ್ರತಿ ಸೇಡು ಎಂಬಂತೆ ಮಾಡಲಾಗುತ್ತಿದೆ ಎಂಬ ವಿಚಾರ ಸುದ್ದಿ ವಾಹಿನಿಯಲ್ಲಿ ಪ್ರಸ್ತಾಪವಾಗಿರುವುದನ್ನು ಗಮನಿಸಿದ್ದೇನೆ ಎಂದರು. ಖಾಸಗಿ ವಾಹಿನಿ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ. ಎಲ್ಲಿಗೆ ಹೋಗಿ ನಿಲ್ಲುತ್ತೋ, ಪತ್ರಿಕಾ ಸ್ವಾತಂತ್ರ್ಯ, ಎಲ್ಲವೂ ಏನಾಗತ್ತೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿದಂಬರಂ ಅವರ ಪುತ್ರ 2004ರ ಘಟನೆ ಬಗ್ಗೆ 2017ರಿಂದ ಸಿಬಿಐ, ಇಡಿ ತಮ್ಮನ್ನು ವಿಚಾರಣೆಗೊಳಪಡಿಸಿದೆ. 22 ಬಾರಿ ಹಾಜರಾಗಿದ್ದೇನೆ. ಆದರೂ ಚಾರ್ಜ್‍ಶೀಟ್ ಹಾಕಿಲ್ಲ ಎಂದು ಹೇಳಿರುವುದನ್ನು ಕೇಳಿದ್ದೇನೆ. ಈ ಹಂತಕ್ಕೆ ಏಕೆ ಹೋಯ್ತೋ ಗೊತ್ತಿಲ್ಲ ಎಂದರು.

ಪ್ರತಿಕ್ರಿಯಿಸಲ್ಲ: ಮಾಜಿ ಸಚಿವ ಉಮೇಶ್ ಕತ್ತಿ ಭೇಟಿ ವಿಚಾರವನ್ನು ನಿರಕಾರಿಸಿದ ಗೌಡರು, ಊಹಾಪೋಹ, ಈ ವಿಚಾರಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆಧಾರ ರಹಿತ ವಿಚಾರಗಳಿಗೆ ನಮ್ಮನ್ನು ಎಳೆಯಬೇಡಿ. ನಮ್ಮದು ಚಿಕ್ಕ ಪಕ್ಷವಾಗಿದ್ದು, ಅದನ್ನು ಕಟ್ಟಿಕೊಳ್ಳುತ್ತೇವೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಎಂದು ದೇವೇಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here