ನಮ್ಮ ಸಮಾಜದಲ್ಲಿ ನಿತ್ಯ ಅಪರಾಧ ಸಂಬಂಧ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಕೊಲೆ, ಅತ್ಯಾಚಾರ, ಸುಲಿಗೆಯಂತಹ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಪ್ರತಿಭಟನೆ ಮಾಡುವುದನ್ನು ನೋಡಿರುತ್ತೇವೆ. ಹಾಗಾದರೆ ಪೊಲೀಸರು ಮತ್ತು ಸಿಬಿಐಗೂ ಇರುವ ವ್ಯತ್ಯಾಸವಾದರೂ ಏನು? ಪೊಲೀಸರಿಗೆ ಇರದ ಅಧಿಕಾರ ಸಿಬಿಐಗೆ ಇದೆಯಾ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ನಿಮ್ಮನ್ನು ಕಾಡಬಹುದು. ಅವುಗಳಿಗೆ ಈ ಸುದ್ದಿ ಮೂಲಕ ಉತ್ತರ ನೀಡುತ್ತಿದ್ದೇವೆ. ಓದಿ ತಿಳಿದುಕೊಳ್ಳಿ.
ನಮ್ಮ ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇದ್ದರೂ ಕೂಡ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ. ಸಾಮಾನ್ಯವಾಗಿ ಸ್ಥಳೀಯ ಪೊಲೀಸರು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುತ್ತಾರೆ. ಹಾಗಾಗಿ ರಾಜ್ಯ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಕೆಲ ರಾಜಕಾರಣಿಗಳು, ಉದ್ಯಮದಾರರು ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರು ತಮ್ಮ ಅಪರಾಧವನ್ನು ಮುಚ್ಚಿಕೊಳ್ಳುವ ಸಲುವಾಗಿ ಹಣ ಮತ್ತು ತೋಳ್ಬಲಗಳನ್ನು ಪ್ರದರ್ಶನ ಮಾಡುತ್ತಿರುತ್ತಾರೆ.
ಆದರೆ ಇಂತಹ ಅದೆಷ್ಟೋ ನೀಚರ ಎದೆಯಲ್ಲೂ ನಡುಕ ಭರಸುವ ಶಕ್ತಿ ಸಿಬಿಐಗೆ ಇದೆ ಎಂದರೆ ನಂಬಲೇಬೇಕು. ಅಲ್ಲದೇ ಸಿಬಿಐ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಿಬಿಐ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರಿಗೆ ಪ್ರಮುಖವಾದ ವ್ಯತ್ಯಾಸವೆಂದರೆ ಸ್ಥಳೀಯ ಪೊಲೀಸರಿಗೆ ತಾವು ಕಾರ್ಯನಿರ್ವಹಿಸುವ ಪೊಲೀಸ್ ಸ್ಟೇಷನ್ ಗಳಿಗೆ ಭೌಗೋಳಿಕ ವ್ಯಾಪ್ತಿಯನ್ನು ಗುರುತಿಸಿರಲಾಗುತ್ತದೆ. ಹುದ್ದೆಗೆ ಅನುಗುಣವಾಗಿ ಸ್ಟೇಷನ್ ಮಿತಿಯನ್ನು ನೀಡಿರಲಾಗಿರುತ್ತದೆ.
ಆದರೆ ಸಿಬಿಐನವರಿಗೆ ವಹಿಸಿದ ಯಾವುದೇ ಪ್ರಕರಣ ಸಂಬಂಧ ಅಪರಾಧಿಯನ್ನು ದೇಶದ ಯಾವುದೇ ಭೌಗೋಳಿಕ ಪ್ರದೇಶಕ್ಕೂ ಪ್ರವೇಶ ನೀಡಿ ಬಂಧಿಸುವ ಅಧಿಕಾರವಿರುತ್ತದೆ. ಉದಾಹರಣೆಗೆ ಕರ್ನಾಟಕದ ಸಿಬಿಐ ಅಧಿಕಾರಿಗೆ ತಮಿಳುನಾಡಿನ ಪ್ರಕರಣವೊಂದನ್ನು ವಹಿಸಿದರೆ, ಆ ಅಧಿಕಾರಿ ನೆರೆಯ ತಮಿಳುನಾಡಿಗೆ ತೆರಳಿ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬಹುದು.
ಒಂದು ವೇಳೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಯಾವುದೇ ದೂರನ್ನು ದಾಖಲಿಸಿಕೊಳ್ಳಲು ಮುಂದಾಗದೇ ಇದ್ದಾಗ ಸಿಬಿಐ ಅಧಿಕಾರಿಗಳಿಗೆ ದೂರು ಸಲ್ಲಿಸಲು ಅವಕಾಶವಿದೆ. ಆದಾಯ ತೆರಿಗೆ ಇಲಾಖೆ ಇರುವುದು ಯಾರು ನಿಗದಿತ ತೆರಿಗೆ ಕಟ್ಟದೇ ಇರುವವರನ್ನು ಮಟ್ಟ ಹಾಕಲು. ಆದರೆ ಅವರೇ ಬೇಲಿ ಹಾರಿದರೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಮಟ್ಟ ಹಾಕುವುದು ಕೂಡ ಇದೇ ಸಿಬಿಐ ಅಧಿಕಾರಿಗಳು.
ಸಾಮಾನ್ಯವಾಗಿ ನಮ್ಮ ಸ್ಥಳೀಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಹೇಗಿರುತ್ತದೆ ಎಂಬುದರ ಮಾಹಿತಿ ನಿಮಗಿದೆ. ಕಮೀಷನರ್, ಡಿಸಿಪಿ, ಎಸಿಪಿ, ಡಿವೈಎಸ್ಪಿ ಹೀಗೆ ಮೇಲಿನ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳನ್ನು ಸಸ್ಪೆಂಡ್ ಅಥವಾ ವರ್ಗಾವಣೆ ಮಾಡುವ ಅಧಿಕಾರವಿರುತ್ತದೆ. ಆದರೆ ಸಿಬಿಐಗೆ ಬಂದಾಗ ಸಿಬಿಐ ಡೈರೆಕ್ಟರ್ಗೆ ಕೆಳಹಂತದ ಇನ್ಸ್ಪೆಕ್ಟರ್ಗಳನ್ನು ಮಾತ್ರವೇ ವರ್ಗಾವಣೆ ಮಾಡಲು ಅಧಿಕಾರವಿರುತ್ತದೆ. ಇನ್ಸ್ಪೆಕ್ಟರ್ಗಳಿಗೂ ಮೇಲ್ಪಟ್ಟ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಧಿಕಾರ ಸಿಬಿಐ ಡೈರೆಕ್ಟರ್ಗೆ ಇರುವುದಿಲ್ಲ. ಹಾಗಾಗಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬಹುದು.
ಸಿಬಿಐ ಅಧಿಕಾರಿಗಳಿಗೆ ಮಾಮೂಲಿ ಪೊಲೀಸರಂತೆ ಸಮವಸ್ತ್ರ ಕಡ್ಡಾಯವಿರುವುದಿಲ್ಲ. ಸಿಬಿಐ ಅಧಿಕಾರಿಗಳಿಗೆ ವಿಶೇಷ ಪ್ರಕರಣಗಳಲ್ಲಿ ಮಾತ್ರವೇ ಗನ್ ನೀಡಲಾಗಿರುತ್ತದೆ. ಭಾರತದಲ್ಲಿ 12 ತಿಂಗಳು ಕೆಲಸ ಮಾಡಿ 13 ತಿಂಗಳು ಸಂಬಳ ಪಡೆಯುವುದು ಇದೇ ಅಧಿಕಾರಿಗಳು. ಅಲ್ಲದೇ, ದೇಶದ ಯಾವುದೇ ಇಲಾಖೆಯಲ್ಲಿ ನೀಡದಿರುವ ಸೌಲಭ್ಯಗಳನ್ನು ಅವರಿಗೆ ನೀಡಲಾಗುತ್ತದೆ. ಏಕೆಂದರೆ, ಇಲ್ಲಿ ಕೆಲಸ ಮಾಡುವವರ ಸಂಖ್ಯೆ ಬಹಳ ಕಡಿಮೆ ಮತ್ತು ಹೆಚ್ಚು ಜವಾಬ್ದಾರಿಯನ್ನು ನೀಡಿರಲಾಗುತ್ತದೆ. ಇಡೀ ದೇಶದ ಸಮಸ್ಯೆಗಳನ್ನು ನಿರ್ವಹಿಸಬೇಕಾಗುತ್ತದೆ. ಸಾಕಷ್ಟು ಸಮಯ ಪ್ರಯಾಣದಲ್ಲಿಯೇ ಕಳೆಯಬೇಕಾಗುತ್ತದೆ. ವಾರದ ರಜೆ ಸೌಲಭ್ಯವೂ ಇರುವುದಿಲ್ಲ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಒಂದು ತಿಂಗಳು ಹೆಚ್ಚಿಗೆ ಸಂಬಳ ನೀಡಿ, ರಕ್ಷಣಾ ಸೌಲಭ್ಯಗಳನ್ನು ನೀಡಲಾಗುತ್ತದೆ.
ಸಿಬಿಐ ಡೈರೆಕ್ಟರ್ಗಳ ಸಂಬಳ ಹೈಕೋರ್ಟ್ ನ್ಯಾಯಾದೀಶರಿಗಿಂತ ಹೆಚ್ಚಾಗಿರುತ್ತದೆ. ಬೇಸಿಕ್ ವೇತನ 1 ಲಕ್ಷದವರೆಗೆ ಇದ್ದರೆ, ಟಿಎ, ಡಿಎ, ಎಚ್ಆರ್ಎ ಸೇರಿದಂತೆ ಪ್ರತಿ ತಿಂಗಳು 2-2.5 ಲಕ್ಷದಷ್ಟು ಸಂಬಳ ಸಿಗುತ್ತದೆ. ಇಲ್ಲಿ ಪೊಲೀಸ್ ಮತ್ತು ಸಿಬಿಐ ಇಬ್ಬರೂ ದೇಶದ ರಕ್ಷಣೆ ದೃಷ್ಟಿಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು.