ಕೆಲವೊಮ್ಮೆ ಗಾಯಗಳು ಆದಾಗ ಅದನ್ನುಗುಣಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಹಾಗಿದ್ದಾಗ ಈ ರೀತಿಯಾಗಿ ಮಾಡಿದ್ದಲ್ಲಿ ಗಾಯಗಳಿಂದಾಗುವ ರಕ್ರಸ್ರಾವವನ್ನು ತಡೆದು ಗುಣಮುಖವಾಗುವಂತೆ ಮಾಡಬಹುದು.
• ದಾಸವಾಳ ಹೂವನ್ನು ಅರೆದು ಮುಲಾಮಿನಂತೆ ಮಾಡಿಕೊಂಡು ಗಾಯಗಳಿಗೆ ಲೇಪಿಸಿದರೆ ರಕ್ತಸ್ರಾವ ಕೂಡಲೇ ನಿಲ್ಲುತ್ತದೆ.
• ಗಾಜಿನ ಚೂರು ಅಥವಾ ಮುಳ್ಳು ತಾಗಿದರೆ ತಾಗಿದ ಜಾಗವನ್ನು ಸೂಜಿ ಅಥವಾ ಮುಳ್ಳಲ್ಲಿ ಶುಚಿಗೊಳಿಸಿ, ಕೆಸುವಿನ ಗೆಡ್ಡೆಯ ನೀರನ್ನು ಬಿಡುವುದು. ಮಾರನೆಯ ದಿನ ಬೆರಳಿನಲ್ಲಿ ಗಾಯದ ಬದಿಯನ್ನು ಹಿಂಡುತ್ತಾ ಇರಬೇಕು.
• ಬಿದ್ದ ಗಾಯಕ್ಕೆ ಈರುಳ್ಳಿ ಕಾಯಿಸಿದ ಎಣ್ಣೆ ಹಚ್ಚಿದರೆ ಬೇಗನೆ ಗುಣಮುಖವಾಗುತ್ತದೆ. ಗಾಯವನ್ನು ಬೆಳ್ಳುಳ್ಳಿ ಕಷಾಯದಲ್ಲಿ ತೊಳೆದೆರೆ ಬೇಗನೆ ಗುಣಮುಖವಾಗುತ್ತದೆ.
• ಮುಳ್ಳು ಚುಚ್ಚಿದ ಜಾಗಕ್ಕೆ ಸೀಮೆಎಣ್ಣೆ ಲೇಪಿಸುವುದರಿಂದ ಮುಳ್ಳು ಚರ್ಮದ ಒಳಗೆ ಇದ್ದರೆ ಹೊರಗೆ ಬರುತ್ತದೆ.
• ಕತ್ತಿ ಅಥವಾ ಬೇರೆ ಏನಾದರೂ ತಾಗಿ ರಕ್ತ ಬಂದರೆ ನಾಚಿಕೆ ಮುಳ್ಳಿನ ಸೊಪ್ಪು ತಂದು ಚೆನ್ನಾಗಿ ಜಜ್ಜಿ ಆ ಭಾಗಕ್ಕೆ ಇಟ್ಟು ಬಟ್ಟೆ ಕಟ್ಟಿ ಬಿಡಬೇಕು. ಐದು-ಆರು ಗಂಟೆಯ ನಂತರ ಬಿಚ್ಚಬೇಕು. ರಕ್ತ ಬರುವುದು ನಿಲ್ಲದಿದ್ದರೆ ಪುನಃ ಬೇರೆ ಸೊಪ್ಪು ಜಜ್ಜಿ ಇಟ್ಟು ಕಟ್ಟಬೇಕು. ರಕ್ತ ಬರುವುದು ಕಡಿಮೆ ಆದ ಮೇಲೆ ನಾಚಿಕೆ ಎಲೆಯನ್ನು ಜಜ್ಜಿ ತೆಂಗಿನೆಣ್ಣೆಗೆ ಹಾಕಿ ಬಿಸಿಮಾಡಿ ಹಚ್ಚಬೇಕು.
• ಗರಿಕೆ ಹುಲ್ಲನ್ನು ಅರೆದು ಗಾಯದ ಮೇಲೆ ಕಟ್ಟಿದರೆ ಗಾಯ ಬೇಗನೆ ವಾಸಿಯಾಗುವುದು.
• ಕತ್ತಿ ತಾಗಿದರೆ ಬಾಗಿಲು ಕಿಟಕಿ ಸಂದುಗಳಲ್ಲೋ, ಮನೆಗೋಡೆ ಮೂಲೆಯಲ್ಲೋ ಕಟ್ಟಿದ ಜೇಡನ ಬಲೆಯನ್ನು ನಿಧಾನವಾಗಿ ಒಂದು ಇಂಚಿನಷ್ಟು ಬೆರಳಲ್ಲಿ ಎಳೆದು ಎಲ್ಲಿ ಗಾಯವಾಗಿಯೆಯೋ ಅದರ ಮೇಲೆ ಸುತ್ತುತ್ತಾ ಬನ್ನಿ. ನೆನಪಿರಲಿ ದೊಡ್ಡ ಗಾಯಗಳಿಗೆ ಈ ಚಿಕಿತ್ಸೆಯಾಗದು. ಗಾಯ ಮಾಸುವವರೆಗೂ ಈ ಬಲೆಯನ್ನು ತೆಗೆಯಬೇಡಿ ಮೂರನೇ ದಿವಸದಲ್ಲೇ ಗಾಯ ಮಾಸುವುದು. ಅನಂತರ ಎಣ್ಣೆ ಅಥವಾ ಮುಲಾಮು ಬೇಕಾದರೆ ಹಚ್ಚಬಹುದು.
• ಕೈಕಾಲಿಗೆ ಗಾಯಗಳಾದರೆ ತೆಂಗಿನ ಕಾಯಿಯ ನೀರನ್ನು ಒಲೆ ಅಥವಾ ಗ್ಯಾಸಿನಲ್ಲಿ ಹದವಾದ ಬೆಂಕಿಯಲ್ಲಿ ಕುದಿಸುತ್ತಾ ಬರಬೇಕು. ಕುದಿದು ಕುದಿದು ದಪ್ಪವಾಗಿ ಸೌಟಿನಲ್ಲಿ ನೂಲಿನಂತೆ ಬರಬೇಕು. ಅನಂತರ ಆರಿಸಿ ಬಾಟ್ಲಿಯಲ್ಲಿ ಹಾಕಿ ಮುಚ್ಚಳ ಹಾಕಿ ಇಟ್ಟರೆ ಗಾಯವಾದ ತಕ್ಷಣ ಹಚ್ಚಬಹುದು. ಹಚ್ಚಿದಾಗ ಸ್ವಲ್ಪ ಉರಿಯುತ್ತದೆ. ನಂತರ ಗಾಯವೂ ಗುಣಮುಖವಾಗುತ್ತದೆ.
• ಮೆಣಸಿನಕಾಳು, ಉತ್ತರಣೆ ಸೊಪ್ಪು, ಅರಸಿನ ಮತ್ತು ಸುಣ್ಣ ಇವುಗಳನ್ನು ಸೇರಿಸಿ ಚೆನ್ನಾಗಿ ಅರೆದು ಕಾಲಿಗೆ ಮುಳ್ಳು ತಾಗಿ ಊದಿಕೊಂಡಿರುವಲ್ಲಿಗೆ ಈ ಮಿಶ್ರಣವನ್ನು ಹಚ್ಚಿ ಬಟ್ಟೆಯಿಂದ ಕಟ್ಟುವುದರಿಂದ ನೋವು ಗುಣವಾಗಿ ಊದಿಕೊಂಡಿರುವುದು ಸರಿಯಾಗುವುದು.
ಸಾಯಿನಂದಾ ಚಿಟ್ಪಾಡಿ