ಬೆಂಗಳೂರು: ಮುನಿರತ್ನಂ ನಾಯ್ಡು ಅವರು ಅಂದು ಪಾಲಿಕೆ ಸಭೆಯಲ್ಲಿ ದುಶ್ಶಾಸನನ ಪಾತ್ರ ಮಾಡಿದ್ದರು. ಇಂದು ಶಕುನಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಟೀಕೆ ಮಾಡಿದರು. ಭಾನುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಸುರೇಶ್, ಕಳೆದ 15 ದಿನಗಳಿಂದ ಈ ಉಪಚುನಾವಣೆ ಕುರಿತು ರಾಜ್ಯದ ಜನತೆಗೆ ತಿಳಿಸಬೇಕಿದೆ. ಆರ್.ಆರ್. ನಗರ ಕ್ಷೇತ್ರದಲ್ಲಿ ಒಳ್ಳೆಯ ನಿರ್ಮಾಪಕ ಸ್ಪರ್ಧೆ ಮಾಡಿದ್ದಾರೆ. ಅವರು ಆಗಾಗ ನಿರ್ದೇಶನವನ್ನೂ ಮಾಡ್ತಾರೆ, ಮತ್ತೆ ಕೆಲವೊಮ್ಮೆ ನಟನೆಯನ್ನೂ ಮಾಡುತ್ತಾರೆ. ಅವರಿಗೆ ಯಾವ ಸೀನ್ ಅನ್ನು ಎಲ್ಲಿ ಕಟ್ ಮಾಡಿ, ಎಲ್ಲಿ ಸೇರಿಸಬೇಕು? ಯಾವಾಗ ನಗಿಸಬೇಕು, ಅಳಿಸಬೇಕು ಅಂತಾ ಗೊತ್ತಿದೆ. ಇದ್ಯಾವುದೂ ಸಾಲಲಿಲ್ಲ ಎಂದರೆ ಎಲ್ಲಿ ಒದೆಸಬೇಕು ಅಂತಾನೂ ಗೊತ್ತಿದೆ ಎಂದು ವ್ಯಂಗ್ಯ ಮಾಡಿದರು.
ಅವರು ಹಿಂದೆ ಪಾಲಿಕೆ ಸಭೆಯಲ್ಲಿ ದುಶ್ಶಾಸನನ ಪಾತ್ರ ಮಾಡಿದ್ದರು. ಇವತ್ತು ಶಕುನಿ ರೋಲ್ ಮಾಡುತ್ತಿದ್ದಾರೆ. ಎಲ್ಲವನ್ನೂ ಅವರೇ ಮಾಡಿ, ಅದನ್ನು ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಅನ್ನುತ್ತಿದ್ದಾರೆ. ಕೋತಿ ತಿಂದು ಮೇಕೆ ಮೂತಿಗೆ ಒರೆಸಿದಂತೆ. ಕೊರೋನಾ ಸಮಯದಲ್ಲಿ ತಮ್ಮ ಸಿನಿಮಾ ಬಿಡುಗಡೆ ಆಗಿಲ್ಲಾ ಅಂತಾ ಚುನಾವಣೆ ಸಂದರ್ಭದಲ್ಲಿ ಜನತೆಗೆ ಸಿನಿಮಾ ತೋರಿಸುತ್ತಿದ್ದಾರೆ. ಇದರ ಕಥೆ, ಚಿತ್ರಕಥೆ, ನಿರ್ದೇಶನ ಎಲ್ಲ ಅವರದೇ ಎಂದು ಟೀಕೆ ಮಾಡಿದರು.
“ಮುನಿರತ್ನ ಎರಡು ನಾಲಿಗೆ ಹಾವು”
ಮುನಿರತ್ನ ಅವರು ಎರಡು ನಾಲಿಗೆ ಹಾವು ಎಂಬುದನ್ನು ನಾವು ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ಬಗ್ಗೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಅವರು ಏನು ಹೇಳಿದ್ದಾರೆ ಎಂದು ನೋಡಿದ್ದೇವೆ. ಅವರು ಈ ವ್ಯಕ್ತಿ ಬಗ್ಗೆ ಕಳ್ಳ-ಸುಳ್ಳ ಅಂತಾ ಹೇಳಿದ್ದು, ಅಶೋಕ್ ಅವರು ಮುನಿರತ್ನ ಅವರ ಬಗ್ಗೆ ಹಿಂದೆ ಏನು ಹೇಳಿದ್ದರು. ಈಗ ಏನು ಹೇಳುತ್ತಿದ್ದಾರೆ ಎಂಬುದು ಸೇರಿ ಎಲ್ಲವನ್ನು ನೋಡಿದ್ದೇವೆ ಎಂದರು
ಮುನಿರತ್ನ ನಾನು ಚುನಾವಣೆಯಲ್ಲಿ ಅಕ್ರಮ ಮಾಡಿಲ್ಲ ಅಂತಾರೆ. ದೇಶದ ಪ್ರಧಾನ ಮಂತ್ರಿಗಳೇ ಬೆಂಗಳೂರಿಗೆ ಬಂದು ಈತ 40 ಸಾವಿರ ಮತದಾರರ ಗುರುತಿನ ಚೀಟಿ ಮುದ್ರಿಸಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕೆ ಪೂರಕವಾಗಿ ತುಳಸಿ ಮುನಿರಾಜುಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಅದರ ವಿಚಾರಣೆ ಕೋರ್ಟ್ ನಲ್ಲಿ ಇನ್ನೂ ಬಾಕಿ ಇದೆ. ನ.11 ರಂದು ಮುಂದಿನ ವಿಚಾರಣೆ ನಡೆಯಲಿದೆ. ಅವರು ಮತದಾರರ ಗುರುತಿನ ಚೀಟಿ ಬಗ್ಗೆ ಆಗಾಗ್ಗೆ ನೆನಪು ಮಾಡಿಕೊಳ್ಳುತ್ತಾರೆ. ಅವರ ಅಕ್ರಮಗಳ ಬಗ್ಗೆ ನಾವು ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
“ಕೊಲೆಗಳು ಆಗುತ್ತದೆ ಎಂದು ಹೇಳಿದ್ದೂ ಪೂರ್ವ ನಿಯೋಜಿತ ನಾಟ್ಕ”
ಕೆಲವು ಘಟನೆ ವಿಚಾರವಾಗಿ ನಿನ್ನೆ ರಾತ್ರಿ ರಸ್ತೆಯಲ್ಲಿ ಕೂತು ರಾತ್ರಿ ಎಲ್ಲಾ ಧರಣಿ ಮೂಲಕ ಅವರು ಮಾಡಿದ ಪ್ರಹಸನ ಪೂರ್ವ ನಿಯೋಜಿತವಾಗಿದೆ. ಮುಂಚೆಯಿಂದಲೂ ಅವರು ಕೊಲೆಗಳಾಗುತ್ತವೆ ಅಂತಾ ಹೇಳುತ್ತಾ ಬಂದಿದ್ದಾರೆ. ಸರ್ಕಾರ ಇದೆ. ಪೊಲೀಸ್ ವ್ಯವಸ್ಥೆ ಇದೆ. ಆದರೂ ಈ ರೀತಿ ಹೇಳಿ, ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಬಿಜೆಪಿ ಸರ್ಕಾರದ ಕುಮ್ಮಕ್ಕೂ ಇದೆ. ಇದೊಂದು ಪೂರ್ವ ನಿಯೋಜಿತ ನಾಟಕವಾಗಿದ್ದು ಇದನ್ನು ಹಂತ, ಹಂತವಾಗಿ ಪ್ರದರ್ಶಿಸುತ್ತಿದ್ದಾರೆ. ನಿನ್ನೆ ಹಲ್ಲೆಯಾಗಿದೆ ಎಂಬ ವಿಚಾರದ ಬಗ್ಗೆ ನಾವು ವಿಡಿಯೋ ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಯಾರು ಪ್ರಚೋದನೆ ನೀಡಿದರು, ಮತದಾರರ ಗುರುತಿನ ಚೀಟಿ ಯಾರು ಪಡೆದರು, ನಮ್ಮ ಕಾರ್ಯಕರ್ತರು ಮನವಿ ಮಾಡಿದಾಗ ಪೊಲೀಸರು ಯಾವ ರೀತಿ ನಡೆದುಕೊಂಡರು ಎಂಬುದು ಸೇರಿದಂತೆ ಎಲ್ಲವೂ ಸ್ಪಷ್ಟವಾಗಿದೆ ಎಂದರು.
ನಮ್ಮ ಪಕ್ಷದ ಅಭ್ಯರ್ಥಿ ವಿದ್ಯಾವಂತ ಹೆಣ್ಣಿನ ಬಗ್ಗೆ ನೀವು ಯಾವ ಕೀಳು, ಅವಾಚ್ಯ ಶಬ್ಧಗಳನ್ನು ಬಳಸಿದ್ದೀರಿ ಎಂಬುದು ನಮಗೆ ತಿಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಅಂತಾರೆ. ನಿರ್ಮಲಾ ಸೀತರಾಮನ್ ಅವರನ್ನು ರಕ್ಷಣಾ ಮಂತ್ರಿ, ಆರ್ಥಿಕ ಮಂತ್ರಿ ಮಾಡಿದೆವು ಅಂತಾರೆ. ಆದರೆ ಅದೇ ಪಕ್ಷದ ನಾಯಕರು ಇಲ್ಲಿ ಒಬ್ಬ ಹೆಣ್ಣು ಮಗಳ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಮುನಿರತ್ನಗೆ ಬಿಜೆಪಿಯ ಯಾವುದೇ ಸಂಸ್ಕೃತಿ ಇಲ್ಲ. ಕಾಂಗ್ರೆಸ್ ಗೆ ನಾಮ ಇಟ್ಟ ರೀತಿ ಬಿಜೆಪಿಗೂ ನಾಮ ಇಡುತ್ತಾರೆ.