ಬೆಂಗಳೂರು: ’35 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ತಪ್ಪು ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಇಂತಹ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಸೋಮವಾರ ವಿವಿಧ ಕಡೆಗಳಲ್ಲಿ ಸಿಬಿಐ ಡ್ರಿಲ್ ನಂತರ ತಮ್ಮ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ನಾನು, ನನ್ನ ಸಹೋದರ, ನನ್ನ ಕುಟುಂಬ ಹಾಗೂ ಪಕ್ಷದ ಪರವಾಗಿ ನಿಮಗೆ ತಲೆ ಬಾಗಿ ಸಾಷ್ಟಾಂಗ ನಮಸ್ಕರಿಸುತ್ತೇನೆ. ನಾನು ನಿಮಗೆ ಕಳಂಕ ತರುವಂತಹ ಕೆಲಸ ಈ ಡಿ.ಕೆ ಶಿವಕುಮಾರ್ ಕುಟುಂಬ ಮಾಡಿಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ ಎಂದರು.
2017ರಲ್ಲಿ ನಾವೆಲ್ಲ ಗುಜರಾತ್ ಚುನಾವಣೆ ಮಾಡುವಾಗ 87 ಕಡೆ ತೆರಿಗೆ ಇಲಾಖೆ ದಾಳಿ ಮಾಡಿತು. 2018ರಂದು ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರು. 2019ರಲ್ಲಿ ಇಡಿ ಅವರು ಪ್ರಕರಣ ದಾಖಲಿಸಿ ಸುಮಾರು 47 ದಿನ ತಿಹಾರ್ ಜೈಲಲ್ಲಿ ಇಟ್ಟು, 11 ದಿನ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಈಗ 2020ರಲ್ಲಿ ಸಿಬಿಐನವರು ಬಂದಿದ್ದಾರೆ ಎಂದು ತಿಳಿಸಿದರು.
ಅಡ್ವಕೇಟ್ ಜೆನರಲ್ ಅವರು ಬೇಡಾ ಇದು ತೆರಿಗೆ ಇಲಾಖೆ ಪ್ರಕರಣ, ಇದನ್ನು ಸಿಬಿಐಗೆ ನೀಡಲು ಸಾಧ್ಯವಿಲ್ಲ. ಇಲ್ಲಿವರೆಗೂ ರಾಜ್ಯದ ಯಾವುದೇ ಮಂತ್ರಿ ಮೇಲೆ ಸಿಬಿಐಗೆ ಪ್ರಕರಣ ನೀಡಿಲ್ಲ ಎಂದು ಹೇಳಿದರೂ ಪಾಪ ಮುಖ್ಯಮಂತ್ರಿಗಳು ಅದ್ಯಾರ ಒತ್ತಡ ಇತ್ತೋ ಏನೋ ಸಿಬಿಐ ತನಿಖೆಗೆ ಆದೇಶಿಸಿದರು. ಸಿಬಿಐಗೆ ಅನುಮತಿ ನೀಡಿದ್ದರಿಂದ ಅವರು ಇವತ್ತು ನನ್ನ ಮನೆಗೆ ಬಂದಿದ್ದಾರೆ. ಇದು ಸದ್ಯಕ್ಕೆ ಮುಗಿಯಲ್ಲ ಚುನಾವಣೆ ಮುಗಿಯುವವರೆಗೂ ನಡೆಯುತ್ತಿರುತ್ತದೆ ಎಂದು ಭವಿಷ್ಯ ನುಡಿದರು.
ಒಂದು ಮಾತು ಹೇಳುತ್ತೇನೆ, 30 ವರ್ಷಗಳ ರಾಜಕಾರಣದಲ್ಲಿ ತನಿಖೆ ಮಾಡಲಾಗಿಲ್ಲ. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಸಾಬೀತು ಮಾಡಿಲ್ಲ. ನಾನು ಮಂತ್ರಿಯಾಗಿದ್ದಾಗ ತಪ್ಪು ಮಾಡಿರುವುದಾಗಿ ವರದಿ ಬಂದಿತ್ತು. ಆದರೆ ತಪ್ಪು ಮಾಡದಿರುವ ನಾನು ಯಾವುದೇ ತನಿಖೆ ಮಾಡಿಕೊಳ್ಳಲಿ ಎಂದು ಸಹಕಾರ ನೀಡುತ್ತಿದ್ದೇನೆ. ಇವತ್ತೂ ಕೂಡ ಸಿಬಿಐ ಅಧಿಕಾರಿಗಳ ಮೇಲೆ ದೂಷಣೆ ಮಾಡುವುದಿಲ್ಲ. ಅವರ ತಪ್ಪೇನಿದೆ? ಅಧಿಕಾರಿಗಳು ವ್ಯವಸ್ಥೆ ಅಡಿಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಅಂತಾ ಗೊತ್ತಿದೆ ಎಂದರು.
ಅನೇಕ ಮಾಧ್ಯಮಗಳು 3 ಕೋಟಿ ಸಿಕ್ತು, 50 ಲಕ್ಷ ಸಿಕ್ತು, ಕೆಜಿಗಟ್ಟಲೆ ಬಂಗಾರ ಸಿಕ್ತು ಎಂದು ತೋರಿಸಿದ್ದಾರೆ. ನಾನು ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಸೀರೆ, ಪಂಚೆ, ಪ್ಯಾಂಟು, ಮಂಚಗಳನ್ನು ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ನಮ್ಮೂರಿನಲ್ಲಿ ಹಾರೆಯಲ್ಲಿ ಏನೋ ತೆಗಿತ್ತಿದ್ದರಂತೆ. ಅವರು ಏನೇ ಮಾಡಿಕೊಳ್ಳಲಿ.
ಇಡೀ ರಾಜ್ಯದ ಉದ್ದಗಲಕ್ಕೂ ಎಷ್ಟು ಜನ ನನಗಾಗಿ ಇಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೋ ಅದನ್ನೂ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನಿಮ್ಮ ಭಾವನೆ, ಪ್ರೀತಿ, ವಿಶ್ವಾಸ, ಅಭಿಮಾನ ನನ್ನ ಹೃದಯಕ್ಕೆ ಮುಟ್ಟುತ್ತಿದೆ ಎಂದರು.
ನಾನು ಒಂದು ಮಾತು ಹೇಳುತ್ತೇನೆ. ಈ ರಾಜಕೀಯ ಕುತಂತ್ರ, ಈ ಒತ್ತಡಕ್ಕೆ ಈ ಡಿ.ಕೆ ಶಿವಕುಮಾರ್ ಹೆದರುವ ಮಗ ಅಲ್ಲ. ನಾನುಂಟು ನೀವುಂಟು. ಭಕ್ತ ಉಂಟು ಭಗವಂತ ಉಂಟು. ಇದೇ ವಿಶ್ವಾಸ ಮುಂದೆಯೂ ಇರಲಿ. ಕಳೆದ 30-40 ವರ್ಷಗಳಲ್ಲಿ ಯಾವ ಮಂತ್ರಿಯೂ ತಪ್ಪು ಮಾಡೇ ಇಲ್ಲ. ಎಲ್ಲ ಸತ್ಯಹರಿಶ್ಚಂದ್ರನ ಮಕ್ಕಳು. ನನಗೆ ಈ ರೀತಿ ತೊಂದರೆ ಕೊಡುತ್ತಿರುವವರಿಗೆ ದೇವರು ಒಳ್ಳೆಯದು ಮಾಡಲಿ. ನಾಳೆಯಿಂದ ನಮ್ಮ ಕೆಲಸ ಮುಂದುವರಿಸೋಣ. ನೀವು ಪ್ರತಿ ಬೂತು, ಮನೆಗಳು, ನಿಮ್ಮ ಸ್ನೇಹಿತರನ್ನು ಭೇಟಿ ಮಾಡಿ, ಈ ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ತಿಳಿಸಿದರು.