ಡಿಕೆಶಿ ಗೆ ಸಿಬಿಐ ಶಾಕ್: ತನಿಖೆಗೆ ಒಳಗಾಗಿ ಸೀತೆಯಂತೆ ಹೊರ ಬರಲಿ ಎಂದ ಬಿಜೆಪಿ‌ ನಾಯಕ

0
132

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲಿನ ದಾಳಿಗೆ ಬಿಜೆಪಿ‌ ಕಾರಣ. ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ನಾಯಕರ ಷಡ್ಯಂತರ ಇದು ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸರಣಿ ಹೇಳಿಕೆ ಮೂಲಕ ಟಾಂಗ್ ನೀಡಿದ್ದಾರೆ. ಡಿಕೆ ತನಿಖೆಗೆ ಒಳಗಾಗಲಿ. ಸೀತೆಯಂತೆ ಹೊರಗೆ ಬರಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ಕುಮಾರ ಪಾರ್ಕ್ ಬಳಿಯ ಸಚಿವರ ಮನೆಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಮೇಲೆ ಹಿಂದೆ ಸಹ ದಾಳಿ ಆಗಿದೆ. ಇದು ಹೊಸದಲ್ಲ.. ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು.. ಹೀಗಾಗಿ ತನಿಖೆ ಸಹ ಆಗ್ತಿದೆ. ಇವತ್ತಿನ ಸಿಬಿಐ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಇಂತಹ ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯ ಆಯ್ತು ಎಂದರು.

ಹಿಂದೆ ಯಡಿಯೂರಪ್ಪ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಏನಂತ ಹೇಳಿಕೆ ಕೊಟ್ಟಿದ್ದರು. ಉಪ್ಪು ತಿಂದೋನು ನೀರು ಕುಡಿಯಲೇಬೇಕು ಅಂತ ಹೇಳಿದ್ದರು. ಕಾಂಗ್ರೆಸ್ ಗೊಂದು ಕಾನೂನು ಬೇರೆ ಇದೆಯಾ..? ಡಿಕೆಶಿ ತನಿಖೆಗೆ ಒಳಗಾಗಲಿ. ಸೀತೆಯಂತೆ ಹೊರಗೆ ಬರಲಿ ಎಂದು ಪ್ರತಿಕ್ರಿಯೆ ನೀಡಿದರು.

“ರಾಜಕೀಯ ಬಣ್ಣ ಬಳೆದು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ”

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.  ಡಿಕೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.

ಮುಂದುವರೆದು ಮಾತನಾಡಿದ ಅವರು, ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ. ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಕುರಿತು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಸಚಿವ ಸುಧಾಕರ್, ಪ್ರತೀ ಬಾರಿ ಸಿಬಿಐ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಅಮಿತ್ ಶಾ ಅವರಿಗೆ 2 ವರ್ಷ ಗುಜರಾತ್ ಪ್ರವೇಶ ನಿಷೇಧಿಸಿದ್ದಾಗ, ಈಗಿನ ಆಂಧ್ರ ಪ್ರದೇಶದ ಸಿಎಂ ಸೇರಿ ಹಲವಾರು ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಎಂಬುದು ಮರೆತುಹೋಯಿತೇ? ಎಂದು ಪ್ರಶ್ನಿಸಿದ್ದಾರೆ.

ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇ ಬೇಕು ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here