ಡಿಕೆಶಿ ಹೆಸರನ್ನು ಯಾರು ಕೇಳಿಲ್ಲಾ ಹೇಳಿ? ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಖಡಕ್ ವ್ಯಕ್ತಿತ್ವ ಹೊಂದಿರುವ ಕಾಂಗ್ರೆಸ್ ಪಾಳಯದಲ್ಲಿ ಕೆಲವರ ಪಾಲಿಗಂತೂ ಡಿಕೆ ಬಾಸ್. ಕನಕಪುರ ಕೋಟೆಯ ಕಿಂಗ್, ಪವರ್ಫುಲ್ ರಾಜಕಾರಣಿ, ಡೇರಿಂಗ್ ಟ್ರಬಲ್ ಶೂಟರ್. ಪ್ರಸ್ತುತ ಎಲ್ಲರಿಗೂ ಡಿಕೆಶಿ ಗೊತ್ತು, ಡಿಕೆ ಬ್ರದರ್ ಡಿ. ಕೆ. ಸುರೇಶ್ ಕೂಡ ಗೊತ್ತಿದೆ.
ಸಂಕಟ ಬಂದಾಗ ವೆಂಕಟ ರಮಣ ಎಂದು ಕಾಂಗ್ರೆಸ್ ನಲ್ಲಿ ಟ್ರಬಲ್ ಶುರುವಾದಾಗ ಮಾತ್ರ ಡಿಕೆಶಿ ನೆನಪಾಗ್ತಾರೆ. ಆದರೆ ಹುದ್ದೆ ನೀಡುವಾಗ ಮಾತ್ರ ಇವರು ನೆನಪಾಗುವುದಿಲ್ಲ ಎಂದು ಕೆಲವರು ಅಲವತ್ತುಕೊಳ್ಳುತ್ತಾರೆ. ಹಾಗಾದರೆ ಡಿಕೆಶಿ ಅವರ ರೋಚಕ ಇತಿಹಾಸವನ್ನು ಒಮ್ಮೆ ಮೆಲುಕು ಹಾಕೋಣ ಬನ್ನಿ.
ಡಿಕೆಶಿ ಓದಿದ್ದು ಬೆಂಗಳೂರಿನ ನ್ಯಾಷನಲ್ ಕಾಲೇಜು ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎಂದು ಹೇಳಲಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬೆಂಗಳೂರಿನ ಮಹಾನ್ ಪುಡಾರಿ ಕೊತ್ವಾಲ್ ರಾಮಚಂದ್ರ ಅವರ ಜೊತೆ ಸಂಪರ್ಕವಿತ್ತು ಎನ್ನಲಾಗುತ್ತದೆ. ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿ ರಾಜಕಾರಣ ಮಾಡುತ್ತಾ ಸಾತನೂರಿನ ಎಂಎಲ್ಎ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಡಿಕೆಶಿ.
ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂಧಿಖಾನೆ ಖಾತೆ ಮಂತ್ರಿಗಿರಿಯೂ ಸಿಗುತ್ತದೆ. ಇದಾದ ನಂತರ ಸಿಎಂ ಆದ ಎಸ್. ಎಂ. ಕೃಷ್ಣ ಅವರು ನಿಜವಾದ ಗಾಡ್ಫಾದರ್ ಆಗುತ್ತಾರೆ. ಈ ವೇಳೆ ಸಹಕಾರ ಖಾತೆ ಮಂತ್ರಿಯಾಗುತ್ತಾರೆ. ಇವರ ಅಬ್ಬರದಿಂದಾಗಿ ಸಿಎಂ ಎಸ್ಎಂಕೆಯ ಬಲಗೈ ಬಂಟರಾಗುತ್ತಾರೆ. ಸರ್ಕಾರದಲ್ಲಿ ಬರಿ ಡಿಕೆ ಮಾತು ನಡೆಯಲು ಪ್ರಾರಂಭವಾಗುತ್ತದೆ. ಆದರೆ, ಎಸ್ಎಂಕೆ ಅವಧಿ ಮುಗಿದ ಕೂಡಲೇ ಡಿಕೆ ಗ್ರಾಫ್ ಕೂಡ ಕಳೆಗುಂದುತ್ತದೆ. ಇದಕ್ಕೆ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ ಮತ್ತು ಕುಟುಂಬವೇ ಇದಕ್ಕೆ ಕಾರಣ ಎನ್ನಲಾಗುತ್ತದೆ.
2003ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ರಿಮೋಟ್ ಕಂಟ್ರೋಲ್ ದೇವೇಗೌಡರ ಬಳಿ ಇರುತ್ತದೆ. ಡಿಕೆ ಕೂಡ ಜಾತಿಯಲ್ಲಿ ಒಕ್ಕಲಿಗರಾಗಿದ್ದು, ಫಾಸ್ಟ್ ಅಂಡ್ ಫೈರ್ ಮ್ಯಾನ್. ಎಲ್ಲಿ ಬೆಳೆದು ಬಿಡುತ್ತಾನೋ ಎಂದು ಮೂಲೆಗುಂಪು ಮಾಡಿಬಿಟ್ಟರು. ಇದಾದ ನಂತರ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಟ್ವೆಂಟಿ ಟ್ವೆಂಟಿ ಅವಧಿಯಲ್ಲೂ ಡಿಕೆಯನ್ನು ಬೆಳೆಯಲು ಬಿಡಲಿಲ್ಲ. ದುಡ್ಡು, ಅಧಿಕಾರ ಮತ್ತು ಬಂಡತನದಿಂದ ತನ್ನ ಮತ್ತು ತನ್ನ ಕುಟುಂಬವನ್ನು ತುಳಿದುಬಿಡುತ್ತಾನೋ ಎಂಬ ಕಾರಣಕ್ಕಾಗಿ ಹೀಗೆ ಮಾಡಿದರು.
ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ಡಿಕೆಗೆ ಮಂತ್ರಿಗಿರಿಯನ್ನು ಕೊಟ್ಟಿರಲಿಲ್ಲ. ಆಮೇಲೆ ಹಟಕ್ಕೆ ಬಿದ್ದು ಮಂತ್ರಿಗಿರಿಯನ್ನು ಗಿಟ್ಟಿಸಿಕೊಂಡರು. ರೆಸಾರ್ಟ್ ರಾಜಕಾರಣ, ಪಾರ್ಟಿ ಫಂಡ್ ಹೀಗೆ ಬೇಕಾದಾಗ ಡಿಕೆಯನ್ನು ಬಳಸಿಕೊಳ್ಳುವ ಕಾಂಗ್ರೆಸ್, ಅಧಿಕಾರದ ಪ್ರಶ್ನೆ ಬಂದಾಗ ಮಾತ್ರ ನಿನ್ನ ಹಿನ್ನೆಲೆ ಸರಿಯಿಲ್ಲ, ತಡಿ ನೋಡೋಣ ಎಂಬ ಧೋರಣೆಯನ್ನು ತೋರಿಸುತ್ತಾರೆ. ಕಳೆದ ಬಾರಿ ದೋಸ್ತಿ ಸರ್ಕಾರ ಬರಲು ಡಿಕೆ ಬ್ರದರ್ಸ್ ಏನೆಲ್ಲಾ ಮಾಡಿದ್ದಾರೆ ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ.
ಒಂದು ಹಂತಕ್ಕೆ ಅವರು ಕೂಡ ಡಿಸಿಎಂ ಹುದ್ದೆ ಸಿಗಬಹುದು ಅಂತಾ ಆಸೆ ಪಟ್ಟಿದ್ದರು. ಆದರೆ ಇದೆಲ್ಲವನ್ನೂ ನೋಡುತ್ತಾ ಪದ್ಮನಾಭನಗರದ ಹಿರಿಯ ರಾಜಕೀಯ ಮುತ್ಸದ್ಧಿ ಮತ್ತು ಕಾಂಗ್ರೆಸ್ ನ ಕೆಲ ನಾಯಕರು ಮುಸಿ ಮುಸಿ ನಗುತ್ತಿದ್ದಾರೆ ಎನ್ನಲಾಗುತ್ತಿದೆ.