‘ನಮ್ಮನ್ನು ಕ್ಷಮಿಸಿ ಬಿಡಿ’ ಎನ್ನುತ್ತಿದ್ದಾರೆ ಅತೃಪ್ತ ಶಾಸಕರು..!

0
239

ದೋಸ್ತಿ ಸರ್ಕಾರವನ್ನು ಉರುಳಿಸಿ, ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಅತೃಪ್ತ ಶಾಸಕರು ಇದೀಗ ಸಂಕಷ್ಟದ ಸರಮಾಲೆಯೊಳಗೆ ಸಿಲುಕಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು ಅತೃಪ್ತ ಶಾಸಕರು ಮಾತ್ರ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹೀಗಾಗಿ ತಮಗೆ ‘ರಾಜಕೀಯ ಭಿಕೆ’್ಷ ನೀಡುವಂತೆ ದೋಸ್ತಿ ಶಾಸಕರ ಮುಂದೆ ಅಂಗಲಾಚುತ್ತಿದ್ದಾರೆ ಎನ್ನಲಾಗಿದೆ.

ಹೌದು, ಅತೃಪ್ತ ಶಾಸಕರು ರಾಜೀನಾಮೆ ನೀಡಿ ಪಕ್ಷ ತೊರೆದು ಹೋದನಂತರ ಉಪ ಚುನಾವಣೆಯ ಮುನ್ಸೂಚನೆ ಸಿಗುತ್ತಿದ್ದಂತೆ, ‘ತಮ್ಮನ್ನು ಕ್ಷಮಿಸಿ’ ಎಂದು ಮನವಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯವಾಗಿ ಬೆಂಗಳೂರಿನ ಶಾಸಕರು ಶರಣಾಗತಿಯ ಸಂದೇಶ ಕಳುಹಿಸಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಗಟ್ಟಿ ನಿಲುವು ತೆಗೆದುಕೊಂಡರೆ, ಗೆಲುವು ಕಷ್ಟವಾಗಲಿದೆ ಎಂಬುದು ಅತೃಪ್ತರ ಅಳಲು. ಕ್ಷೇತ್ರದಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಮರಳಿ ಪಡೆಯಲು ಗೆಲುವು ಅನಿವಾರ್ಯ, ಒಂದು ವೇಳೆ ಸೋತ್ರೆ ಅತೃಪ್ತ ಶಾಸಕರ ರಾಜಕೀಯ ಭವಿಷ್ಯವೇ ಕೊನೆಯಾಗಲಿದೆ.

ಈ ಭೀತಿಯಂದಲೇ ಅತೃಪ್ತ ಶಾಸಕ ಮುನಿರತ್ನ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಭೇಟಿಗೂ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಿದ್ದರಾಮಯ್ಯ ಅವರು ಈವರೆಗೂ ಅತೃಪ್ತರ ಭೇಟಿಗೆ ಅವಕಾಶ ನೀಡಿಲ್ಲ. ಬೈರತಿ ಬಸವರಾಜ್, ಸುಧಾಕರ್, ಎಂ.ಟಿ.ಬಿ.ನಾಗರಾಜ್, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಸಿದ್ದರಾಮಯ್ಯ ಅವರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. “ಆಗಿದ್ದೆಲ್ಲ ಆಗಿ ಹೋಯ್ತು. ನಮ್ಮನ್ನು ಕ್ಷಮಿಸಿ, ರಾಜಕೀಯ ದ್ವೇಷ ಬೇಡ, ನಮ್ಮ ಭವಿಷ್ಯಕ್ಕೆ ಅಡ್ಡಗಾಲು ಆಗಬೇಡಿ” ಎಂದು ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಕೋರ್ಟ್ ಮೋರೆಹೋಗಿದ್ದಾರೆ. ಒಂದು ವೇಳೆ ನ್ಯಾಯಾಲಯ ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದರೆ. ಉಪ ಚುನಾವಣೆಯಲ್ಲಿ ರಾಜೀನಾಮೆ ನೀಡುವವರ ಪೈಕಿ ಎಂ.ಬಿ.ಟಿ.ನಾಗರಾಜ್ ಹೊರತು ಪಡಿಸಿ ಉಳಿದ ಎಲ್ಲರೂ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸ್ಪರ್ಧೆಗೆ ನಿಂತರೆ ಗೆಲ್ಲುವುದು ಕಷ್ಟ ಎಂಬ ಕಾರಣಕ್ಕಾಗಿ ಸಂಧಾನದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಇನ್ನು ಅನರ್ಹಗೊಂಡಿರುವ ಹೆಚ್. ವಿಶ್ವನಾಥ್ ಅವರಿಗೆ ಬಿಜೆಪಿ ನಾಯಕರು ಕೈಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಇರಾದೆ ಹೊಂದಿದ್ದ ವಿಶ್ವನಾಥ್ ಅವರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಯಿದೆ. ಹೌದು, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ಚಿಂತನೆ ನಡೆಸಿದೆ. ಬಿಜೆಪಿ ನಾಯಕರ ಈ ನಡೆ ಎಚ್. ವಿಶ್ವನಾಥ್‍ಗೆ ಬಿಗ್ ಶಾಕ್ ನೀಡಿದೆ. ಇನ್ನೊಂದೆಡೆ ಎಚ್. ವಿಶ್ವನಾಥ್ ಅವರಿಗೆ ಪಾಠ ಕಲಿಸುವ ಸಲುವಾಗಿ ಜೆಡಿಎಸ್ ನಾಯಕರು, ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿದರೆ ಅವರಿಗೆ ಸಿ.ಪಿ. ಯೋಗೇಶ್ವರ್ ಸಮರ್ಥ ಸ್ಪರ್ಧೆ ನೀಡಲಿದ್ದಾರೆ ಎಂಬ ವಿಶ್ವಾಸ ಹೊಂದಿರುವ ಬಿಜೆಪಿ, ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here