ಸಿದ್ಧಾರ್ಥ ಸಾವಿನ ಕುರಿತು ಭಾವಪೂರ್ಣ ಪತ್ರ ಬರೆದ ನಿರ್ದೇಶಕ ಟಿ.ಎನ್.ಸೀತಾರಾಮ್

0
136

ಉದ್ಯಮಿ ಸಿದ್ದಾರ್ಥ ಅವರ ಆತ್ಮಹತ್ಯೆ ಇಡೀ ಕರ್ನಾಟಕದಲ್ಲಿ ಅನೇಕರನ್ನು ದುಃಖಕ್ಕೆ ದುಡಿದೆ. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಇನ್ನು ಸಿದ್ದಾರ್ಥ ಸಾವಿನ ಕುರಿತು ನಿರ್ದೇಶಕ ಟಿ.ಎನ್.ಸೀತಾರಾಮ ಭಾವಪೂರ್ಣ ಪತ್ರ ಬರೆದು ಕಂಬನಿ ಮಿಡಿದಿದ್ದಾರೆ. ಆ ಪತ್ರದ ಸಾಲುಗಳು ಇಲ್ಲಿವೆ.

“ದುಡ್ಡು ಕಾಸು ಎನ್ನುವುದು ಮನುಷ್ಯ ಮಾಡಿಕೊಂಡಿದ್ದು.
ಮನುಷ್ಯನ ಅನುಕೂಲಕ್ಕಾಗಿ ಮತ್ತು ನೆಮ್ಮದಿ ಕಳೆದುಕೊಳ್ಳಲು.ದುಡ್ಡಿನ ಬೃಹತ್ ಸಾಮ್ರಾಜ್ಯ ಕಟ್ಟಲು ಹೋಗಿ ಅದರ ಚಕ್ರವ್ಯೂಹ ದಲ್ಲಿ ಸಿಕ್ಕಿ ಹೋಗೇಬಿಟ್ಟಿರಲ್ಲ ಸಿದ್ಧಾರ್ಥ ಸಾರ್.

ಅನೇಕ ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಗೆಳೆಯ ಬಿ.ಎಲ್.ಶಂಕರ್ ರವರ ಮಗಳ ಮದುವೆಯ ಔತಣ ದ ಸಮಯದಲ್ಲಿ ನೀವು ಬಂದು ನನ್ನ ಟೇಬಲ್ ನಲ್ಲಿಯೇ ಊಟಕ್ಕೆ ಕೂತಿರಿ.

ಆಗ ನೀವೇ ಸಿದ್ಧಾರ್ಥ ಎಂದು ನನಗೆ ಗೊತ್ತಿರಲಿಲ್ಲ. ನಂತರ ಶಂಕರ್ ರವರು ಬಂದು ಹೇಳಿದಾಗಲೇ ನನಗೆ ಗೊತ್ತಾ ಗಿದ್ದು.ಇಷ್ಟು ದೊಡ್ಡ ಉದ್ಯಮಿ ಇಷ್ಟು ಸರಳವಾಗಿದ್ದಾರಲ್ಲ ಎಂದು ಮೆಚ್ಚುಗೆ ನನಗೆ.

ನಿಮಗೆ ಮುಕ್ತ ಧಾರಾವಾಹಿಯ ಸನ್ಯಾಸಿ ಇಷ್ಟ ವಾದ ಪಾತ್ರ ಆಗಿತ್ತು.

ಮಾತಿನ ಮಧ್ಯೆ ನೀವು ಹೇಳಿದಿರಿ.ಬೃಹತ್ ಉದ್ಯಮ ಕಟ್ಟುವುದಕ್ಕಿಂತ ಸನ್ಯಾಸ ತೆಗೆದುಕೊಳ್ಳಲು ಹೆಚ್ಚು ಧೈರ್ಯ, ಗಟ್ಟಿ ಮನಸ್ಸು ಬೇಕಾಗುತ್ತದೆ. ಆದರೆ ಅದೇ ಹೆಚ್ಚು ಆನಂದ ಕೊಡುವುದು ಎನ್ನುವ ರೀತಿ ಮಾತನಾಡಿದಿರಿ.ಶಂಕರ್ ಕೂಡಾ ಹೌದು ಎಂದರು.ಅವತ್ತು ತುಂಬಾ ಸಂತೋಷದಲ್ಲಿ ಇದ್ದಿರಿ.

ಅಂಥಾ ಆಲೋಚನೆಗಳಿದ್ದ ನೀವು ಸಮಾಜ ನಿರ್ಮಿತ ದುಡ್ಡು ಕಾಸಿನ ಕಷ್ಟ ಕ್ಕೆ ಹೆದರಿ, ಅವಮಾನ ಕ್ಕೆ ಹೆದರಿ, ಪ್ರಾಣ ಕಳೆದು ಕೊಂಡು ಬಿಟ್ಟಿರಲ್ಲ ,

ಸಂಕಟವಾಗುತ್ತದೆ

ಎಲ್ಲ ಆಸ್ತಿ ಕೊಡ ಬೇಕಾದವರಿಗೆ ಬರೆದು ಕೊಟ್ಟು Insolvency ತೆಗೆದುಕೊಂಡರೆ ಮುಗಿದು ಹೋಗುತ್ತಿತ್ತು. ಮತ್ತೊಂದು ಹೊಸ ಅಧ್ಯಾಯ ಶುರು ಮಾಡಲು ಸಾಧ್ಯವಾಗುತ್ತಿತ್ತು.ಪ್ರಾಣವನ್ನೇ ಕಳೆದುಕೊಂಡು ಬಿಟ್ಟಿರಲ್ಲ ಸಾರ್.

ಸುಮಾರು ಐವತ್ತು ಸಾವಿರ ಜನಕ್ಕೆ ಉದ್ಯೋಗ ಕೊಟ್ಟಿದ್ದ ಕನ್ನಡಿಗ ನೀವು. ಜಗತ್ತು ಬೆರಗಾಗುವಂಥ,ಇಂಥದ್ದೇ ವಿದೇಶಿ ಉದ್ಯಮಗಳಿಗೆ ಸೆಡ್ಡು ಹೊಡೆದು ಗೆದ್ದಿದ್ದವರು ನೀವು

ನಾನು ಸೋತು ಅವಮಾನ ಅನುಭವಿಸಿ ಖಿನ್ನನಾಗಿದ್ದಾಗ ಅನೇಕ ಬಾರಿ ನಿಮ್ಮ ಸಿಸಿಡಿ ಯಲ್ಲಿ ಗೆಳೆಯರ ಜತೆ ಕೂತು, ಹರಟೆ ಹೊಡೆದು ಮನಸ್ಸಿಗೆ ಗೆಲುವು ಪಡೆದು ಬಂದಿದ್ದೇನೆ.

ನನ್ನಂಥ ಎಷ್ಟೋ ಜನ

ನೀವು ಸಿಕ್ಕಿದ್ದು ಅದೊಂದೇ ಬಾರಿ.ನೆನಪಿರವುದು ಅದೊಂದೇ ನಗು ಮುಖದ ಚರ್ಚೆ..

ನೀವು ಸಾಯಬಾರದಿತ್ತು….

LEAVE A REPLY

Please enter your comment!
Please enter your name here