ಡಿಕೆಶಿ ಬಂಧನ, ಯಾರು ಏನ್ ಹೇಳಿದ್ರು ಗೊತ್ತಾ..?!

0
733

ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಬಂಧನವಾಗುತ್ತಿದ್ದಂತೆ ಕರ್ನಾಟಕದ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು, ಇದೊಂದು ಬಿಜೆಪಿ ಕುತಂತ್ರ ಎಂದು ಕಿಡಿಕಾರಿದ್ದು, ಬಿಜೆಪಿ ತನ್ನ ಅನಕೂಲಕ್ಕೆ ತಕ್ಕಂತೆ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಇನ್ನು ಡಿಕೆಶಿ ಬಂಧನ ಖಂಡಿಸಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. “ತಮ್ಮ ಹಿತಾಸಕ್ತಿಗಳಿಗೆ ಬಗ್ಗದ ಪ್ರತಿಪಕ್ಷದ ನಾಯಕರನ್ನು ಮಣಿಸಲು ಕೇಂದ್ರ ಸರ್ಕಾರ ವಿವಿಧ ಏಜೆನ್ಸಿಗಳನ್ನು ಅಕ್ರಮವಾಗಿ ಬಳಸುತ್ತಿರುವುದು ದೃಢಪಟ್ಟಿದೆ. ಹಬ್ಬಕ್ಕೂ ರಿಲೀಫ್ ಕೊಡದೇ ಸತತ ವಿಚಾರಣೆ ನಡೆಸಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ನೆಪ ಹೇಳಿ ಬಂಧಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ದ್ವೇಷದ ರಾಜಕೀಯ ಮಾಡಲ್ಲ ಎನ್ನುತ್ತಾರೆ, ಆದರೆ ನನ್ನನ್ನು ರಾಜಕೀಯವಾಗಿ ಮುಗಿಸಲು ಫೋನ್ ಕದ್ದಾಲಿಕೆ ನಡೆದಿದೆ ಎಂದು ಸಿಬಿಐ ತನಿಖೆಗೆ ಆದೇಶ ನೀಡಿದ್ದಾರೆ. ಸಿಬಿಐ ಅಲ್ಲ, ವಿಶ್ವದ ಯಾವುದೇ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ತನಿಖೆ ಮಾಡಿಸಿದ್ರು ನನಗೇನು ಭಯವಿಲ್ಲ ಎಂದು ಎಚ್‍ಡಿಕೆ ಬಿಜೆಪಿ ವಿರುದ್ದ ಗುಡುಗಿದರು.

ಇನ್ನು ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, “ಬಿಜೆಪಿ ಸರ್ಕಾರ ದೇಶದ ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ವಿಪಕ್ಷಗಳನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡ್ತಿದೆ. ಇಡಿ, ಐಟಿ, ಸಿಬಿಐ ಅಂತಹ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಇಂದು ದೆಹಲಿಯಲ್ಲಿ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ, ಸುಮಾರು 15 ಅಡಿಗಳ ದೂರದಿಂದ ಅವರನ್ನು ಕಂಡೆ, ನನ್ನನು ನೋಡಿ ವಿಶ್ ಮಾಡಿದರು.
ವಶಕ್ಕೆ ಪಡೆದ್ರು ಅಂತ ಅವರೇನು ಧೈರ್ಯ ಕಳೆದುಕೊಂಡಿಲ್ಲ.
ಐಟಿ,ಇಡಿಯವರು ಅವರ ಕೆಲಸ ಮಾಡಬೇಕೆ ವಿನಃ ಬೇರೆಯವರ ಕೈಗೊಂಬೆಯಾಗಿ ಮಾಡಿದರೆ ಹೇಗೆ ? ಇದೊಂದು ದುರುದ್ದೇಶಪೂರಿತ ಕೃತ್ಯ.” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು “ಡಿಕೆ ಶಿವಕುಮಾರ್ ಬಂಧನ ಅತ್ಯಂತ ಖಂಡನೀಯ ಕೃತ್ಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಮುಗಿಸಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶಿವಕುಮಾರ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಟ್ವೀಟ್ ಮಾಡಿ, “ದ್ವೇಷದ, ಕುತಂತ್ರದ ರಾಜಕಾರಣ ಮಾಡುತ್ತಿರುವ ನರೇಂದ್ರ ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಮುಗಿಸುವ ಹೀನ ಕೃತ್ಯಕ್ಕಿಳಿದಿದೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಕಟುವಾಗಿ ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ, ಕಾರ್ಯಕರ್ತರ ಸೈದ್ಧಾಂತಿಕ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ” ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಂದೀಪ್ ಸುರ್ಜೇವಾಲಾ “ದೇಶದ ಅರ್ಥ ವ್ಯವಸ್ಥೆ ಆರ್ಥಿಕ ಸಂಕಷ್ಟದಲ್ಲಿದೆ. ಕೇಂದ್ರ ಸರ್ಕಾರದ ನಿರ್ಧಾರಗಳಿಂದ ಎಲ್ಲ ಉದ್ಯಮಗಳು ಅವನತಿಯತ್ತ ಸಾಗುತ್ತುದೆ. ದೇಶದ ಜಿಡಿಪಿ ದರವು ಗಣನೀಯವಾಗಿ ಕುಸಿಯುತ್ತಿದ್ದು, ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ನಮ್ಮ ನಾಯಕರನ್ನು ಬಂಧಿಸುತ್ತಿದೆ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಮುಗ್ಧರಾಗಿದ್ದು, ಇಡಿ ಅಧಿಕಾರಿಗಳಿಗೆ ಅವರನ್ನು ಬಂಧಿಸಲು ಯಾವುದೇ ಸಾಕ್ಷ್ಯಗಳಿಲ್ಲ. ಇದೊಂದು ರಾಜಕೀಯ ಪ್ರೇರಿತ ಬಂಧನ” ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here