ಆಪತ್ತಿನಲ್ಲಿ ಆಪತ್ಬಾಂಧವ: ಬರೀ ಸೇಡಲ್ಲದ ರಾಜಕೀಯ.!!

0
254

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್, ಹೈಕಮಾಂಡ್ ಸಂಪ್ರೀತಗೊಳಿಸುವ ಅರ್ಹತೆ ಇದ್ದ ಆಪತ್ ಬಾಂಧವ ಈಗ ಆಪತ್ತಿನಲ್ಲಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಮುಖ್ಯ ಮಂತ್ರಿ ಆಗುವ ಸಾಮರ್ಥ್ಯ ಮತ್ತು ಬಲವಿದ್ದ ಡಿ.ಕೆ.ಶಿವಕುಮಾರ ತಾವೇ ಸೃಷ್ಟಿಸಿದ ವ್ಯೂಹದಲ್ಲಿ ತಾವೇ ಸಿಕ್ಕಿಕೊಂಡಿದ್ದಾರೆ.
ರಾಜಕಾರಣದ ಅಧಿಕಾರದ ಉಪಯೋಗದಿಂದ ಉದ್ಯಮಿಯಾಗಿದ್ದ ಡಿಕೆಶಿ ಹಣ ಮಾಡಿದ್ದು ಅವರ ಲೆಕ್ಕಕ್ಕೆ ಸಿಗುತ್ತಿಲ್ಲ. ವೈಯಕ್ತಿಕವಾಗಿ ಕೊಂಚ ದುರಹಂಕಾರದ body language ಅನೇಕ ಹಿರಿಯರಿಗೆ ಮುಜುಗರ ಉಂಟು ಮಾಡಿದ್ದು ಸಹಜ. ಎಸ್.ಎಂ.ಕೃಷ್ಣ ಕಾಲದ ಡಿಫ್ಯಾಕ್ಟೋ‌ ಸಿ.ಎಂ.‌ ಹಲವರ ಕೆಂಗಣ್ಣಿಗೆ ಗುರಿಯಾದ ಬಿಸಿ ತುಪ್ಪವೂ ಹೌದು.

ಡಿಕೆ ದುರಾದೃಷ್ಟ ಪರ್ವ ಆರಂಭವಾದದ್ದು ಸಮ್ಮಿಶ್ರ ಸರಕಾರದ ಜೆಡಿಎಸ್ ಸಹವಾಸದ ದುರ್ಬಳಕೆಯಿಂದ.
ದೊಡ್ಡ ಗೌಡರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರಕ್ಕೆ ಡಿಕೆಯಂತಹ ಜೀವನೋತ್ಸಾಹಿ ಬಲಿಯಾಗಬಾರದಿತ್ತು.ರಾಜಕೀಯ ಭ್ರಷ್ಟಾಚಾರ ಬದಿಗಿರಿಸಿ ನೋಡಿದಾಗ ಡಿಕೆ ಅದ್ಭುತ ಮನುಷ್ಯ, ಸಾಹಸಿ.
ವರ್ತಮಾನದ ಭರವಸೆಯ ಉದ್ಯಮಿ. ಯಾರನ್ನೋ ಉಳಿಸುವ ಹುಂಬತನದ ನಿಷ್ಟೆಯಲ್ಲಿ ಅವರು ಕಳೆದು ಹೋಗಬಾರದಿತ್ತು. ಒಂದಿಷ್ಟು diplomacy ಕೊರತೆಯನ್ನು ಡಿಕೆಶಿಯ tragic flaw ಎಂದು ವ್ಯಾಖ್ಯಾನಿಸುವುದು ಅನಿವಾರ್ಯ.

ಡಿಕೆಶಿ ತನ್ನದೇ ಶೈಲಿಯ ರಾಜಕಾರಣದಿಂದ ಉನ್ನತ ಸ್ಥಾನಕ್ಕೇರಿದ್ದು ಅಸಾಮಾನ್ಯ ಮತ್ತು ಅಭಿನಂದನೀಯ.
ಸಿದ್ದರಾಮಯ್ಯ ಅವರಂತಹ ನುರಿತ ನಾಯಕ ಕಾಂಗ್ರೆಸ್ ಸೇರಿದ ಮೇಲೆ ಡಿಕೆ ಪ್ರಭಾವ ಮಂಕಾದದ್ದು ಸಹಜ. ಸಿದ್ದರಾಮಯ್ಯ ಅವರ ಚಾಣಾಕ್ಷತನಕೆ ಅವರ ರಾಜಕೀಯ ಹೋರಾಟ ಮತ್ತು ಗೌಡರು ಕೊಟ್ಟ ಹೊಡೆತಗಳೇ ಕಾರಣ. ಆದರೆ ಡಿಕೆ ಅಂತಹ ಸವಾಲುಗಳನ್ನು ಎದುರಿಸದೇ ಅನಾಯಾಸವಾಗಿ ಬೆಳೆದು ಸಾವಿರಾರು ಕೋಟಿ ಹಣ ಗಳಿಸಿದ್ದೇ ಇಷ್ಟೆಲ್ಲ ಅವಘಡಗಳಿಗೆ ಕಾರಣವಾಯಿತು.

ಶ್ರಮರಹಿತ ಅಧಿಕಾರ ಸಿಕ್ಕರೆ ತಂತ್ರಗಳು ಪ್ರತಿತಂತ್ರಗಳು ಮಂಕಾಗಿ ಹೋಗುತ್ತವೆ. ಹೈಕಮಾಂಡ್ ಮತ್ತು ಪಕ್ಷ ಡಿಕೆಶಿ ಸಾಮರ್ಥ್ಯವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಅವರಿಗೆ ಅರ್ಥವಾಗಲಿಲ್ಲ. ದುಡ್ಡು ಸುರಿದು ಕೊಂಡು ಕೊಳ್ಳುವಿಕೆಯ ರಾಜಕೀಯ ವ್ಯಾಪಾರದಲ್ಲಿ ಪಳಕಿದ ಡಿಕೆಶಿ ಒಳ ರಾಜಕಾರಣದ ಕುತಂತ್ರ ಅರ್ಥಮಾಡಿಕೊಳ್ಳಲು ವಿಫಲರಾದರು. ಈ ರಾಜಕೀಯದಾಟದಲ್ಲಿ ಸಿದ್ಧರಾಮಯ್ಯನವರ ಬೆನ್ನು ಕಟ್ಟುವ ಬದಲು ಸ್ವಾರ್ಥ ದುರುಳರ ಬೆಂಬಿದ್ದರು. ಅದೇ ಸಹವಾಸ ದೋಷದಿಂದ ಆಪತ್ತು ತಂದುಕೊಂಡರು ಕೂಡ!ಕಾಂಗ್ರೆಸ್ ಪಕ್ಷದ ಹಿತಶತ್ರುಗಳು, ವಿಪಕ್ಷಗಳ ಗೆಳೆಯರು ನೆರವಿಗೆ ಬಾರದ ಸ್ಥಿತಿ ತಲುಪಬಾರದಿತ್ತು. ರಾಜಕಾರಣದಲ್ಲಿ ಈ ರೀತಿ ಸಾವಿರಾರು ಕೋಟಿ ಗಳಿಸಿದವರು ನೂರಾರು ಜನರಿದ್ದಾರೆ ಆದರೂ ಬಲಶಾಲಿ ಮರಗಳನ್ನು ಕತ್ತರಿಸಿ ಹಾಕುವ ರಾಜ ನೀತಿಗೆ ಡಿಕೆಶಿ ಬಲಿಯಾಗಿದ್ದಾರೆ.

ಇಲ್ಲಿ ಸೇಡಿಗಿಂತ ಮಿಗಿಲಾದ ರಾಜಕಾರಣವಿದೆ. ಇದು ಮುಂದಿನ ರಾಜಕೀಯ ಬೆಳವಣಿಗೆಗೆ ದಿಕ್ಸೂಚಿಯೂ ಹೌದು.ಇದೇ ಸ್ಥಿತಿ ಬೇರೆಯವರಿಗೆ ಬಂದರೆ ಒಳ ಒಪ್ಪಂದ ಮಾಡಿಕೊಂಡು ಕಂಡವರ ಕಾಲು ಹಿಡಿದು ಬಚಾವಾಗುತ್ತಾರೆ ಎಂಬ ವಾಸ್ತವ ಅರ್ಥ ಮಾಡಿಕೊಳ್ಳದಿರುವುದೇ ಡಿಕೆಶಿಯ ಮಿತಿ. ದೊಡ್ಡ ಕುಳಗಳ ಬಲಿ ಹಾಕಿ ಸಣ್ಣ ಕುಳಗಳಿಗೆ ಭಯ ಬೀಳಿಸುವ ತಂತ್ರಕ್ಕೆ ತಾತ್ಕಾಲಿಕ ಜಯ ಸಿಕ್ಕಿದೆ ಆದರೆ ಕಾಲಚಕ್ರ ಎಲ್ಲರನ್ನೂ ಬಲಿ ತೆಗೆದುಕೊಂಡ ಇತಿಹಾಸವನ್ನು ನಾವು ಖಂಡಿತವಾಗಿ ಮರೆಯಬಾರದು.

ಸಿದ್ದು_ಯಾಪಲಪರವಿ.

LEAVE A REPLY

Please enter your comment!
Please enter your name here