ಡ್ಯಾನ್ಸಿಂಗ್, ಆಕ್ಟಿಂಗ್, ಮಾಡೆಲಿಂಗ್ ಎಲ್ಲದಕ್ಕೂ ಸೈ… ಬಹುಮುಖ ಪ್ರತಿಭೆ ಈ ಪುಟಾಣಿ..!

0
452

ನೀವು ‘ಭರಾಟೆ’ , ‘ಬ್ರಹ್ಮಚಾರಿ’ ಸಿನಿಮಾಗಳನ್ನು ನೋಡಿದ್ದರೆ ಈ ಮುದ್ದು ಮುಖದ ಬಾಲ ಪ್ರತಿಭೆ ನಿಮಗೆ ತಿಳಿದಿರುತ್ತಾರೆ. ಈ ಪುಟ್ಟ ಹುಡುಗಿ ಹೆಸರು ಅಂಕಿತಾ ಜಯರಾಮ್, ಈಕೆ ವಯಸ್ಸು 9, ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಂದ ಶಬ್ಬಾಷ್ ಎನಿಸಿಕೊಂಡವರು. ಬೆಂಗಳೂರಿನ ನಿವಾಸಿಗಳಾದ ಜಯರಾಮ್ ಹಾಗೂ ಪ್ರೇಮ ದಂಪತಿಯ ಮುದ್ದಿನ ಪುತ್ರಿ ಈ ಅಂಕಿತಾ. ಈಕೆಗೆ ಮಹಾರ್ಥ ಎಂಬ ಪುಟ್ಟ ತಮ್ಮ ಕೂಡಾ ಇದ್ದಾನೆ. ನಗರದ ಶಾಂತಿನಿಕೇತನ ಶಾಲೆಯಲ್ಲಿ ಅಂಕಿತಾ 5ನೇ ತರಗತಿ ಓದುತ್ತಿದ್ದಾರೆ.

 

3-4 ವರ್ಷದ ಮಗುವಾಗಿರುವಾಗಲೇ ಅಂಕಿತಾಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಅದರ ಜೊತೆ ಜೊತೆಗೆ ನಟನೆಯಲ್ಲೂ ಆಸಕ್ತಿ ಬೆಳಸಿಕೊಂಡ ಅಂಕಿತಾರನ್ನು ನೋಡಿ ತಂದೆ ಜಯರಾಮ್ ಸ್ನೇಹಿತರೊಬ್ಬರು ಆಕೆಗೆ ತಮ್ಮ ‘ಕ್ರೀಮ್ ಬಿಸ್ಕೆಟ್’ ಎಂಬ ವೆಬ್‍ಸೀರೀಸ್‍ನಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ಶುರುವಾಯ್ತು ಅಂಕಿತಾ ನಟನೆ ಪ್ರಯಾಣ. ಈ ವೆಬ್ ಸೀರಿಸ್ ನೋಡಿದ ಬಿಗ್‍ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ 2 ವರ್ಷಗಳ ಹಿಂದೆ ತಮ್ಮ ‘ಸಿಲಿಂಡರ್ ಸತೀಶ’ ಎಂಬ ಸಿನಿಮಾದಲ್ಲಿ ನಟಿಸಲು ಆಫರ್ ಮಾಡಿದರು. ಸಿನಿಮಾ ಶೂಟಿಂಗ್ ಮುಗಿದಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ವಿಶೇಷ ಎಂದರೆ ಅಂಕಿತಾ ತಮ್ಮ ಪಾತ್ರಕ್ಕೆ ತಾವೇ ಡಬ್ ಕೂಡಾ ಮಾಡುತ್ತಾರೆ.

 

ಈ ನಡುವೆ ಕರುನಾಡ ಕಂದ ರಾಜಕುಮಾರ, ಕನ್ನಡ ದೇಶದೊಳ್, ಭರಾಟೆ, ಕಾಳಿದಾಸ ಕನ್ನಡ ಮೇಷ್ಟ್ರು, ಬ್ರಹ್ಮಚಾರಿ ಸೇರಿದಂತೆ 7-8 ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಪವರ್ ಸ್ಟಾರ್ ಅವರ ಯುವರತ್ನ ಸಿನಿಮಾದಲ್ಲಿ ಕೂಡಾ ಅಂಕಿತಾ ಅಪ್ಪು ಜೊತೆ ನಟಿಸುತ್ತಿದ್ದಾರೆ. ಇದರೊಂದಿಗೆ 9ನೇ ದಿಕ್ಕು, ಅಜಯ್ ರಾವ್ ನಟನೆಯ ಶೋಕಿವಾಲ, ಅನುಪ್ರಭಾಕರ್ ನಟನೆಯ ವಜ್ರಗಳು, ಶೃತಿ ಪ್ರಕಾಶ್ ಅವರ ಕಡಲ ತೀರದ ಭಾರ್ಗವ, ಅಂಜು ಸೇರಿ ಸುಮಾರು 7-8 ಸಿನಿಮಾಗಳು ಪುಟಾಣಿ ಅಂಕಿತಾ ಕೈಯ್ಯಲ್ಲಿದೆ. ಅಂಕಿತಾಗೆ ಚಿಕ್ಕ ವಯಸ್ಸಿನಿಂದ ಪುನೀತ್ ರಾಜ್‍ಕುಮಾರ್ ಎಂದರೆ ಬಹಳ ಇಷ್ಟ. ಅಣ್ಣಾವ್ರ ಕುಟುಂಬಕ್ಕೆ ಅಂಕಿತಾ ಬಹಳ ಹತ್ತಿರ ಎನ್ನಬಹುದು.

 

ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಲಂಡನಿನಿಂದ ಬಲಗೈ ಶಸ್ತ್ರಚಿಕಿತ್ಸೆ ಮುಗಿಸಿ ಬಂದಾಗ ಏರ್‍ಪೋರ್ಟಿನಲ್ಲಿ ಅವರಿಗೆ ಆರತಿ ಮಾಡಿ ಬರಮಾಡಿಕೊಂಡಿದ್ದು ಈ ಪುಟಾಣಿಯೇ. ನಟನೆ ಹೊರತುಪಡಿಸಿ ಡ್ಯಾನ್ಸ್, ರ್ಯಾಂಪ್‍ವಾಕ್, ಯೋಗ ಕೂಡಾ ಮಾಡುತ್ತಾರೆ ಅಂಕಿತಾ. ತುಮಕೂರಿನ ಗೀತಾ ಮಂಜುನಾಥ್ ಎಂಬುವರ ಬಳಿ ಯೋಗ ಕಲಿತಿರುವ ಅಂಕಿತಾ ಪ್ರತಿದಿನ ಯೋಗ ಕೂಡಾ ಮಾಡುತ್ತಾರಂತೆ. ಜೊತೆಗೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ರ್ಯಾಂಪ್‍ವಾಕ್ ಕೂಡಾ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಓದಿನಲ್ಲೂ ಮುಂದಿರುವ ಈ ಪ್ರತಿಭೆ ಶಾಲೆಯಲ್ಲಿ ಕೂಡಾ ಎಲ್ಲಾ ಶಿಕ್ಷಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿನಿ. ಇಷ್ಟೆಲ್ಲಾ ಸಾಧನೆ ಮಾಡಿರುವ ಅಂಕಿತಾ.

 

ಸಾಲು ಮರದ ತಿಮ್ಮಕ್ಕ, ಸ್ವಾತಂತ್ಯ್ರ ಹೋರಾಟಗಾರ ದೊರೆಸ್ವಾಮಿ, ಸಿದ್ದಗಂಗಾ ಮಠದ ಲಿಂಗೈಕೈ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಇನ್ನಿತರ ಸಾಧಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮುಂದೆ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿ ಮಾಡುವ ಪ್ಲಾನ್ ಮಾಡಿದ್ದಾರೆ ಈ ಪುಟ್ಟ ಸಾಧಕಿ.ಈ ಪುಟ್ಟ ಹೃದಯಕ್ಕೆ ಕಷ್ಟದಲ್ಲಿರುವವರ ಸಹಾಯಕ್ಕೆ ಮಿಡಿಯುವ ಮನಸ್ಸು ಕೂಡಾ ಇದೆ. ಕಷ್ಟದಲ್ಲಿರುವವರಿಗೆ ತಮ್ಮ ಸಂಭಾವನೆಯಲ್ಲಿ ಹಣ ಸಹಾಯ ಕೂಡಾ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯುಂಟಾದಾಗ ರಸ್ತೆಗೆ ಇಳಿದು ಫಂಡ್ ಕೂಡಾ ಸಂಗ್ರಹಿಸಿದ್ದಾರೆ ಅಂಕಿತ.

 

ಈಗಾಗಲೇ ಅಂಕಿತಾ ಅಭಿಮಾನಿ ಸಂಘಗಳು ಕೂಡಾ ಹುಟ್ಟಿಕೊಂಡಿವೆ. ಕನ್ನಡ ಸಂಘಟನೆಗಳು ಈ ಮಗುವಿಗೆ ಗೌರವದಿಂದ ಸನ್ಮಾನ ಕೂಡಾ ಮಾಡಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಇರುವ ಅಂಕಿತಾಗೆ ಭವಿಷ್ಯದಲ್ಲಿ ಡಾಕ್ಟರ್ ಆಗಬೇಕೆಂಬ ಆಸೆಯಂತೆ. ಮುದ್ದು ಮಗಳ ಆಸೆಗೆ ನೀರೆರೆದು ಪ್ರೋತ್ಸಾಹಿಸುತ್ತಿದ್ದಾರೆ ತಂದೆ ಜಯರಾಮ್ ಹಾಗೂ ತಾಯಿ ಪ್ರೇಮ. ಅಂಕಿತ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ, ತನ್ನಿಷ್ಟದಂತೆ ಮುಂದೆ ಡಾಕ್ಟರ್ ಕೂಡಾ ಆಗಿ ಜನರ ಸೇವೆ ಮಾಡಿ ಪೋಷಕರಿಗೂ ರಾಜ್ಯಕ್ಕೂ ಹೆಮ್ಮೆ ತರುವಂತಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

LEAVE A REPLY

Please enter your comment!
Please enter your name here